













ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದಂತಿದೆ. ಬೆಂಗಳೂರಿನ ಹೊರಗೆ ನಡೆದ ಈ ಸಭೆ, ಕರಾವಳಿ – ಮಲೆನಾಡಿನತ್ತ ಆಡಳಿತದ ಗಮನವನ್ನು ಸೆಳೆದಿದೆ. ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ಹಾಗೂ ‘ಮಂಗಳೂರು’ ಹೆಸರಿನ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸುವ ಪ್ರಕ್ರಿಯೆ ಸೇರಿದಂತೆ ಹಲವು ನಿರ್ಧಾರಗಳು, ಈ ನೆಲದ ಅಸ್ಮಿತೆ ಮತ್ತು ಭವಿಷ್ಯದ ಕುರಿತು ಹೊಸ ಚರ್ಚೆಗೆ ಅವಕಾಶ ಕಲ್ಪಿಸಿವೆ. Talent acquisition ಮಾತ್ರವಲ್ಲ, talent retention, talent return ಮತ್ತು talent creation ಕೂಡ ಅಭಿವೃದ್ಧಿಯ ಭಾಗವಾಗಬೇಕು. ಯಾವುದೇ ರಾಜಕೀಯ ಹಿನ್ನೆಲೆಯವರಾಗಿರಲಿ, ಯುವ ಪ್ರತಿಭೆಗಳಿಗೆ ಸ್ವಂತ ನೆಲದಲ್ಲೇ ಅವಕಾಶ ಕಲ್ಪಿಸುವ ಚಿಂತನೆ ಮುಖ್ಯ. ಯುವಜನರು ಮತ್ತೆ ತಮ್ಮ ನೆಲದೊಂದಿಗೆ ಜೋಡಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ವಿಶೇಷವಾಗಿ ಪುತ್ತೂರು – ಸುಳ್ಯ – ಕಡಬದ ಗ್ರಾಮೀಣ ಹಾಗೂ ಕೃಷಿ ಪ್ರಧಾನ ಪರಿಸರದಲ್ಲಿ ಮೂಲಸೌಕರ್ಯದ ಮಹತ್ವವನ್ನು ಅಂಕಿ – ಅಂಶಗಳಲ್ಲಿ ಮಾತ್ರವಲ್ಲ, ದಿನನಿತ್ಯದ ಬದುಕಿನಲ್ಲೂ ಕಾಣಬಹುದು. ಮಳೆಗಾಲದ ರಸ್ತೆ – ಸಂಪರ್ಕ ವ್ಯವಸ್ಥೆ, ತುರ್ತು ವೈದ್ಯಕೀಯ ಸೇವೆ, ವಿದ್ಯಾರ್ಥಿಗಳ ಓಡಾಟ ಮತ್ತು ಕೃಷಿ ಉತ್ಪನ್ನಗಳ ಸಾಗಾಟ, ಇವೆಲ್ಲವೂ ಉತ್ತಮ ಮೂಲಸೌಕರ್ಯಕ್ಕೆ ನೇರವಾಗಿ ಸಂಬಂಧಿಸಿದವು. ಗ್ರಾಮೀಣ ರಸ್ತೆಗಳು, ಸಂಪರ್ಕ ವ್ಯವಸ್ಥೆ ಮತ್ತು ಇತರ ಮೂಲಸೌಕರ್ಯಗಳ ಮೇಲಿನ ಹೂಡಿಕೆ ಜನಜೀವನಕ್ಕೆ ನೇರ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ಮಂಗಳೂರು ದೇಶದೆಲ್ಲೆಡೆ ಮಾತ್ರವಲ್ಲ, ಹೊರಜಗತ್ತಿನಲ್ಲೂ ಗುರುತಿಸಿಕೊಳ್ಳಬೇಕು. ಆದರೆ ಅದರ ಹಿಂದೆ ಇರುವ ಗ್ರಾಮಗಳು, ಪಟ್ಟಣಗಳು, ಕರಾವಳಿ ಮತ್ತು ಮಲೆನಾಡಿನ ಜನಜೀವನವೂ ಸಮಾನವಾಗಿ ಅಭಿವೃದ್ಧಿಯೊಂದಿಗೆ ಬೆಸೆದುಕೊಳ್ಳಲಿ. ಇಲ್ಲಿಂದ ಜಗತ್ತಿನತ್ತ ಸಾಗುವ ಪ್ರತಿಭೆ ಮತ್ತು ಕನಸುಗಳ ಪೊಸಾ ಮಂಗಳೂರು ನಿರ್ಮಾಣವಾಗಲಿ!
– ಅನಿಂದಿತ್ ಕೆ ಎಸ್ (ಎಂ.ಎಫ್.ಎ. – ದೆಹಲಿ ಎನ್.ಸಿ.ಆರ್.)
ಇಂಡಿಪೆಂಡೆಂಟ್ ಡಾಕ್ಯುಮೆಂಟೇರಿಯನ್







