ನಾಳೆ ಸುಳ್ಯದಲ್ಲಿ ಭವ್ಯ ಸ್ವಾಗತಕ್ಕೆ ನಿರ್ಧಾರ
ಸುಳ್ಯದ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪಿ.ಯು. ವಿಭಾಗದ ಇತಿಹಾಸ ಉಪನ್ಯಾಸಕ ಡಾ.ಪ್ರದೀಪ್ ಶೆಟ್ಟಿ ಕೆಂಚನೂರುರವರು ಕನ್ನಡ ಚಲನಚಿತ್ರಗಳ ತತ್ವ ಮತ್ತು ರಾಜಕೀಯದ ಕುರಿತು ಬರೆದ ಪುಸ್ತಕಕ್ಕೆ ಚಲನಚಿತ್ರ ಪುಸ್ತಕ ವಿಭಾಗದಲ್ಲಿ ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿ ಬಂದಿದ್ದು, ಪ್ರಶಸ್ತಿ ಪ್ರದಾನ ನಿನ್ನೆ , ಅಂದರೆ ಸೆ.22 ರಂದು ನಡೆಯಿತು.
ಗುಜರಾತಿನಲ್ಲಿ ಏರ್ಪಡಿಸಲಾಗಿದ್ದ 72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಡಾ.ದ್ರೌಪದಿ ಮುರ್ಮು ರವರು ಡಾ.ಪ್ರದೀಪ್ ಶೆಟ್ಟಿ ಕೆಂಚನೂರುರವರಿಗೆ ಸ್ವರ್ಣಕಮಲ ಪ್ರಶಸ್ತಿ ಪ್ರದಾನಗೈದರು.
“* ನಾನಿರುವುದು ನಿಮಗಾಗಿ…ನಾಡಿರುವುದು ನನಗಾಗಿ…ಕನ್ನಡ ಚಲನಚಿತ್ರದ ತತ್ವ ಮತ್ತು ರಾಜಕೀಯ”* ಎಂಬ ಅಧ್ಯಯನಾತ್ಮಕ ಪುಸ್ತಕವನ್ನು ಡಾ.ಕೆಂಚನೂರು ಬರೆದಿದ್ದರು.
ಚಲನಚಿತ್ರ ಸಂಭಾಷಣೆಕಾರರೂ ಆದ ಡಾ.ಪ್ರದೀಪ್ ಶೆಟ್ಟಿ ಕೆಂಚನೂರುರವರು ಕುಂದಾಪುರದ ಕೆಂಚನೂರಿನವರಾಗಿದ್ದು, ಕಳೆದ ಮೂರು ವರ್ಷಗಳಿಂದ ಗಾಂಧಿನಗರ ಕೆ.ಪಿ.ಎಸ್.ನಲ್ಲಿದ್ದಾರೆ.
ಪ್ರಶಸ್ತಿಯು ಸ್ವರ್ಣಕಮಲ ಮತ್ತು 1 ಲಕ್ಷ ರೂ. ನಗದನ್ನು ಒಳಗೊಂಡಿದೆ.
ಇವರ ಪತ್ನಿ ಈ ಪುಸ್ತಕದ ಪ್ರಕಾಶಕರಾಗಿದ್ದು, ಈ ಅತ್ಯುತ್ತಮ ಪುಸ್ತಕವನ್ನು ಪ್ರಕಾಶಿಸಿದುದಕ್ಕಾಗಿ ಅವರಿಗೂ ಪ್ರಕಾಶಕರಿಗಾಗಿ ನೀಡಲಾಗುವ ಸ್ವರ್ಣ ಕಮಲ ಪ್ರಶಸ್ತಿಯನ್ನು ಅದೇ ಸಮಾರಂಭದಲ್ಲಿ ನೀಡಲಾಗಿರುವುದಾಗಿ ತಿಳಿದುಬಂದಿದೆ.
ನಾಳೆ ಸಾರ್ವಜನಿಕರಿಂದ ಭವ್ಯ ಸ್ವಾಗತ














ಡಾ.ಪ್ರದೀಪ್ ಶೆಟ್ಟಿ ಕೆಂಚನೂರುರವರು ರಾಷ್ಟ್ರಪ್ರಶಸ್ತಿ ಸ್ವೀಕರಿಸಿ, ನಾಳೆ ಬೆಳಿಗ್ಗೆ ಸುಳ್ಯಕ್ಕೆ ಬರಲಿದ್ದು, ಅವರನ್ನು ಭವ್ಯವಾಗಿ ಸ್ವಾಗತಿಸಲು ಸುಳ್ಯದ ಪ್ರಮುಖರು ನಿರ್ಧರಿಸಿದ್ದಾರೆ.

ಇಂದು ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರು ಕರೆದ ಸಭೆಯಲ್ಲಿ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಗಾಂಧಿನಗರ ಕೆ.ಪಿ.ಎಸ್. ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆ, ಗಾಂಧಿನಗರ ಕೆ.ಪಿ.ಎಸ್. ಪ್ರಾಂಶುಪಾಲೆ ಶ್ರೀಮತಿ ಪರಮೇಶ್ವರಿ, ಸುಳ್ಯ ಜೂ.ಕಾಲೇಜ್ ಪ್ರಿನ್ಸಿಪಾಲ್ ಮೋಹನ್ ಗೌಡ ಬೊಮ್ಮೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕಾರ್ಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯ.ಸ.ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಗೌಡರ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಕೆ.ಬಿ.ಇಬ್ರಾಹಿಂ, ಶ್ರೀಮತಿ ಚಂದ್ರಮತಿ, ಸತ್ಯಶಾಂತಿ ತ್ಯಾಗಮೂರ್ತಿ, ಸುಪ್ರೀತ್ ಮೋಂಟಡ್ಕ, ಎಂ.ಜೆ.ಶಶಿಧರ್, ಉಪನ್ಯಾಸಕ ರಾಜೇಶ್, ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್, ಸುಳ್ಯ ಕೆ.ಪಿ.ಎಸ್. ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಹಸೈನಾರ್ ಉಪಸ್ಥಿತರಿದ್ದರು.
ಬೆಳಿಗ್ಗೆ 9 ಗಂಟೆಗೆ ಸುಳ್ಯ ಬಸ್ ನಿಲ್ದಾಣದಲ್ಲಿ ಡಾ.ಪ್ರದೀಪ್ ರನ್ನು ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ಗಾಂಧಿನಗರ ಜೂನಿಯರ್ ಕಾಲೇಜ್ ವರೆಗೆ ಕರೆದೊಯ್ಯುವುದು, ಅಲ್ಲಿ ಚುಟುಕು ಸಭಾ ಕಾರ್ಯಕ್ರಮ ನಡೆಸುವುದೆಂದು ನಿರ್ಧರಿಸಲಾಗಿದೆ.







