ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ ಕುರಿತು ಮಹಾತ್ಮ ಗಾಂಧಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಆಶ್ರಯದಲ್ಲಿ ಸೆ.23ರಂದು ವಲ್ಲೀಶ ಸಭಾಭವನದಲ್ಲಿ ವಿಶೇಷ ಗ್ರಾಮಸಭೆ ಆಯೋಜಿಸಲಾಯಿತು.














ಕಸ್ತೂರಿರಂಗನ್ 7ನೇ ಅಧಿಸೂಚನೆ ಎಂದರೇನು, ಅದರ ಉದ್ದೇಶವೇನು, ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವ ರೀತಿಯಲ್ಲಿ ತಮ್ಮ ಅಭಿಪ್ರಾಯ ದಾಖಲಿಸಬೇಕು ಎಂಬ ಕುರಿತು ಲೋಕೇಶ್ ಪೀರನಮನೆ ಅವರು ಗ್ರಾಮಸ್ಥರಿಗೆ ಸರಳವಾಗಿ ಮಾಹಿತಿ ನೀಡಿದರು.

7ನೇ ಅಧಿಸೂಚನೆಯಲ್ಲಿ ತಿದ್ದುಪಡಿ ಆಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸಭೆಯಲ್ಲಿ, ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಮನವಿ ಮಾಡಲಾಯಿತು. ಸೆ. 25 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿರುವುದರಿಂದ, ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ದಾಖಲಿಸಬೇಕು ಎಂದು ತಿಳಿಸಲಾಯಿತು.
ಸಭೆಯ ವೇದಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ., ಸುಬ್ರಹ್ಮಣ್ಯ ಗ್ರಾಮ ಆಡಳಿತಾಧಿಕಾರಿ ಸಂತೋಷ್ ಹಾಗೂ ಅರಣ್ಯಾಧಿಕಾರಿ ಅಪೂರ್ವ ಅಚ್ರಪಾಡಿ ಉಪಸ್ಥಿತರಿದ್ದರು.
ವಿಶೇಷ ಗ್ರಾಮಸಭೆಯಲ್ಲಿ ಸುಬ್ರಹ್ಮಣ್ಯ ಯೆನೆಕಲ್ ಹಾಗೂ ಐನೆಕಿದು ಗ್ರಾಮಗಳ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. .
ಸೆ.25 ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ, ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ಕುರಿತು ಸಂಬಂಧಪಟ್ಟ ಅಧಿಕೃತ ಮಾರ್ಗಸೂಚಿಗಳನ್ನು ಪರಿಶೀಲಿಸಿ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಭೆಯಲ್ಲಿ ಕರೆ ನೀಡಲಾಯಿತು.
ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ಮತ್ತು ಮಾರ್ಪಾಡು ಮಾಡುವ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು.







