ಸುಳ್ಯ ಜಾತ್ರೆ ನಂತರ ಸುಳ್ಯ ದಸರಾವೇ ಸುಳ್ಯದವರಿಗೆ ದೊಡ್ಡ ಹಬ್ಬ : ರಾಜೇಶನಾಥಜೀ
“ಹಿಂದೆ ದಸರಾ ನೋಡಲು ಮೈಸೂರು, ಮಡಿಕೇರಿಗಳಿಗೆ ಹೋಗುವ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ. ಸುಳ್ಯ ದಸರಾ ಆರಂಭಗೊಂಡು ಯಶಸ್ವಿಯಾಗಿ ನಡೆಯುತ್ತಿದೆ. ಸುಳ್ಯದ ಜಾತ್ರೆ ನಂತರ ಸುಳ್ಯ ದಸರಾವೇ ಸುಳ್ಯದ ಜನರಿಗೆ ದೊಡ್ಡ ಹಬ್ಬವಾಗಿದೆ” ಎಂದು ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರೂ, ಮರ್ಕಂಜದ ಅನ್ನಪೂರ್ಣೇಶ್ವರಿ ಯೋಗೀಶ್ವರ ಸಿದ್ಧಮಠದ ಧರ್ಮದರ್ಶಿಗಳೂ ಆದ ರಾಜೇಶನಾಥಜೀ ಹೇಳಿದರು.















ಅ.16ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ 55 ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
“ಜಾತಿ, ಧರ್ಮ, ಪಕ್ಷ, ರಾಜಕೀಯ ರಹಿತವಾಗಿ ಧಾರ್ಮಿಕತೆಯನ್ನು ಕಾಪಾಡುವಲ್ಲಿ ಸುಳ್ಯ ದಸರಾ ಶ್ರೇಷ್ಠತೆ ಉಳಿಸಿಕೊಂಡಿದೆ. ಮುಂದಿನ ದಿನದಲ್ಲಿ ಹಿರಿಯರಂತೆ ಮಕ್ಕಳು ಕೂಡಾ ಈ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾತೆಯರು ಮಾಡಬೇಕು” ಎಂದು ಅವರು ಹೇಳಿದರು.
ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ಯೋಜನಾಧಿಕಾರಿ ಮಾಧವ ಗೌಡ ಮುಖ್ಯ ಅತಿಥಿಗಳಾಗಿದ್ದರು.
ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಗೋಕುಲ್ ದಾಸ್, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾಧಿಕಾರಿ ಅಶೋಕ್ ಪ್ರಭು, ಉಪಾಧ್ಯಕ್ಷರಾದ ಬೆಳ್ಯಪ್ಪ ಗೌಡ ಬಳ್ಳಡ್ಕ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಲತಾ ಮಧುಸೂದನ್, ಕಾರ್ಯದರ್ಶಿ ಶ್ರೀಮತಿ ಶ್ವೇತಾ ಪ್ರಶಾಂತ್,
ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್., ಕೋಶಾಧಿಕಾರಿ ಬೂಡು ರಾಧಾಕೃಷ್ಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಮರಣೆ : ಇತ್ತೀಚೆಗೆ ನಿಧನರಾದ ಸುಳ್ಯ ದಸರಾ ಉತ್ಸವದ ಮಾರ್ಗದರ್ಶಕರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ ಟೀಚರ್ ರ ಸ್ಮರಣೆ ಮಾಡಿ, ಮೌನಪ್ರಾರ್ಥನೆ ಸಲ್ಲಿಸಲಾಯಿತು.
ದಸರಾ ಉತ್ಸವ ಸಮಿತಿ ಕೋಶಾಧಿಕಾರಿ ಸುನಿಲ್ ಕುಮಾರ್ ಕೇರ್ಪಳ ಸ್ವಾಗತಿಸಿದರು.
ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಡಿ.ವಿ.ಲೀಲಾಧರ್ ಪ್ರಾಸ್ತಾವಿಕ ಮಾತನಾಡಿದರು. ರಾಜು ಪಂಡಿತ್ ವಂದಿಸಿದರು. ಜಯಂತ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.







