ಐವರ್ನಾಡು ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯ ಸಮಸ್ಯೆ ತೀವ್ರಗೊಂಡಿದ್ದು, ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನವಿಡೀ ಹಲವು ಬಾರಿ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಯಾಗಿದೆ. ವಿಶೇಷವಾಗಿ ರಾತ್ರಿ ವೇಳೆ ವಿದ್ಯುತ್ ಇಲ್ಲದ ಕಾರಣ ನೀರಾವರಿ ಪಂಪ್ಸೆಟ್ಗಳು ಸ್ಥಗಿತಗೊಂಡು ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದ ರೈತರು ಅತಂಕಗೊಂಡಿದ್ದಾರೆ.














ಪ್ರಸ್ತುತ ಐವರ್ನಾಡು ವ್ಯಾಪ್ತಿಯಲ್ಲಿ ಒಬ್ಬನೇ ಲೈನ್ಮನ್ ಕಾರ್ಯನಿರ್ವಹಿಸುತ್ತಿದ್ದು, ಮಳೆ ಮತ್ತು ಗಾಳಿಗೆ ಮರದ ವಿದ್ಯುತ್ ತಂತಿಗೆ ಬೀಳುವುದು, ಕಂಬಗಳು ಹಾನಿಯಾಗುವುದು ಸಾಮಾನ್ಯವಾಗಿದೆ. ದುರಸ್ತಿ ಕಾರ್ಯಕ್ಕೆ ಒಬ್ಬರೇ ಸಿಬ್ಬಂದಿ ಇರುವುದರಿಂದ ಸಮಸ್ಯೆ ಪರಿಹಾರ ತಡವಾಗುತ್ತಿದೆ.
ಈ ಹಿನ್ನಲೆಯಲ್ಲಿ ಕೃಷಿಕರ ವೇದಿಕೆ ಸಂಚಾಲಕ ಕೃಷ್ಣಪ್ರಸಾದ್ ಮಡ್ತಿಲ ಅವರು ಸುಳ್ಯದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ಅವರಿಗೆ ಮನವಿ ನೀಡಿ ” ಕೂಡಲೇ 2 ರಿಂದ 3 ಗ್ಯಾಂಗ್ ಮ್ಯಾನ್ಗಳನ್ನು ನೇಮಿಸಬೇಕು ಮತ್ತು 20 ಜಿ.ಒ.ಎಸ್. (Gang Operating Switch) ಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕವನ್ನು ಸುಭದ್ರಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎ.ಇ.ಇ. ಹರೀಶ್ ರವರು ” ಒಂದು ವಾರದೊಳಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ, ಅಗತ್ಯವಿರುವ 20 ಜಿ.ಒ.ಎಸ್. ಗಳನ್ನು ಅಳವಡಿಸುವುದಾಗಿ ಭರವಸೆ ನೀಡಿದ್ದಾರೆಂದು ಕೃಷ್ಣಪ್ರಸಾದ್ ಮಡ್ತಿಲ ಹೇಳಿಕೆ ನೀಡಿದ್ದಾರೆ.
ಜಿ.ಒ.ಎಸ್.ಗಳನ್ನು ದೇರಾಜೆ ಫೀಡರ್ 2, ಪಾಲೆಪ್ಪಾಡಿ 2, ಕುದುಂಗು 2, ಮಡ್ತಿಲ 1, ಐವರ್ನಾಡು ಟೌನ್ 2, ಚೆಮ್ಮೂರು 1, ಬೆಂಗಮಲೆ 1, ಕೊಪ್ಪತಡ್ಕ 1, ಕೊಯ್ಲ ಕೃಷಿ ಕಾಲೋನಿ 3, ನಾಟಿಕೇರಿ 1, ದರ್ಖಾಸ್ತು 1- ಹೀಗೆ ಅಳವಡಿಸುವಂತೆಯೂ, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಕೃಷಿಕರ ವೇದಿಕೆ ವತಿಯಿಂದ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದೂ ಕೃಷ್ಣಪ್ರಸಾದ್ ಮಡ್ತಿಲ ತಿಳಿಸಿದ್ದಾರೆ.







