ಅಡಿಕೆ ಹಳದಿ ಎಲೆ ರೋಗ ಪೀಡಿತ ಕೃಷಿಕರಿಗೆ ಆಶಾ ಕಿರಣವಾಗುತ್ತಿರುವ ಪಿ.ಎನ್. ಭಟ್ ಸಲಹೆ

0

ಕಳೆದುಕೊಂಡಲ್ಲೆ ಮತ್ತೆ ಪಡೆಯುವ ಪ್ರಯತ್ನ ಆರಂಭಿಸಿರುವ ಕೃಷಿಕರು

ಸುಳ್ಯ ತಾಲೂಕಿನ ಅಡಿಕೆ ಕೃಷಿಕರನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆಗಳೆಂದರೆ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗ. ಸಂಪಾಜೆ, ಕೊಡಗು ಸಂಪಾಜೆ, ಚೆಂಬು, ಅರಂತೋಡು, ಮರ್ಕಂಜ, ಮಡಪ್ಪಾಡಿ ಹೀಗೆ ಸುಮಾರು ೨೦ ಗ್ರಾಮಗಳಲ್ಲಿ ಹಳದಿ ಎಲೆ ರೋಗ ಬಾಧಿಸಿದೆ. ಅದರಲ್ಲೂ ಸಂಪಾಜೆ, ಮರ್ಕಂಜ, ಚೆಂಬು, ಅರಂತೋಡು ಮೊದಲಾದೆಡೆಗಳ ಹಲವಾರು ಕೃಷಿಕರ ತೋಟಗಳು ಹಳದಿ ರೋಗದಿಂದ ಸಂಪೂರ್ಣ ನಾಶಗೊಂಡಿವೆ. ಮಹಡಿ ಮನೆಗಳನ್ನು ನಿರ್ಮಿಸಿಕೊಂಡಿದ್ದ ಕೆಲವು ಕೃಷಿಕರು, ಮನೆ ನಿರ್ವಹಣೆ ಅಸಾಧ್ಯವಾಗಿ ಕಣ್ಣೀರ್ಗರೆಯುತ್ತಿದ್ದರೆ, ಹಲವು ಮಂದಿ ಕೃಷಿ ಕೂಲಿ ಕಾರ್ಮಿಕರಾಗಿ ಜೀವನ ನಿರ್ವಹಣೆ ಮಾಡ ತೊಡಗಿದ್ದಾರೆ. ಕೆಲವರಂತೂ ದಿಕ್ಕು ತೋಚದೆ ಆತ್ಮಹತ್ಯೆಗೂ ಶರಣಾಗಿದ್ದಾರೆ. ಇಂತಹ ಭೀಕರ ಅನುಭವ ನೀಡಿರುವ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗಗಳನ್ನು ನಿವಾರಣೆಗೆ ಕೃಷಿ ವಿಜ್ಞಾನಿಗಳು ಹಲವು ದರ್ಶಕಗಳಿಂದ ಸತತ ಪ್ರಯೋಗ ನಡೆಸುತ್ತಿದ್ದರೂ ಫಲ ಕಂಡಿರಲಿಲ್ಲ. ಆದರೆ ಇಲ್ಲೊಬ್ಬ ರೈತ ಆಂಟಿಬಯೋಟಿಕ್ ಪ್ರಯೋಗಿಸುವುದರ ಮೂಲಕ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗವನ್ನು ದೂರ ಇರಿಸುವ ಪ್ರಯೋಗದಲ್ಲಿ ಯಶಸ್ವಿಯಾಗತೊಡಗಿದ್ದಾರೆ. ಸಂಪಾಜೆ ಪರಿಸರದ ಹಲವು ಕೃಷಿಕರು ಅವರ ಸಲಹೆಯಂತೆ ಮುಂದಡಿಯಿಡುತ್ತಾ ಮತ್ತೆ ಗತವೈಭವದತ್ತ ಮರಳಬಹುದೆಂಬ ವಿಶ್ವಾಸವನ್ನು ತಾಳ ತೊಡಗಿದ್ದಾರೆ. ಹಳದಿ ಎಲೆ ರೋಗದ ಹಾಟ್‌ಸ್ಪಾಟ್ ಎನ್ನಲಾಗುವ ಸಂಪಾಜೆ ಪರಿಸರದಲ್ಲೆ ಈ ಪ್ರಯೋಗ ಯಶಸ್ಸಿನತ್ತ ಸಾಗುತ್ತಿರುವುದರಿಂದ `ಕಳೆದುಕೊಂಡಲ್ಲೆ ಮತ್ತೆ ಹುಡುಕಬೇಕು’ ಎಂಬ ನಾಣ್ನುಡಿಗೆ ಅರ್ಥ ಬರುವಂತಾಗಿದೆ.


ಅವರು ಪೆರುವೋಡಿ ನಾರಾಯಣ ಭಟ್. ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಪದವಿ ಪಡೆದವರು. ಕೃಷಿ ವಿಜ್ಞಾನಿ ಅಲ್ಲ. ಇಂದೋರ್ ಶ್ರೀಸಿದ್ಧಿ ಎಗ್ರಿ ಕೆಮಿಕಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರ ತೋಟವೂ ಹಳದಿ ಎಲೆ ರೋಗದಿಂದ ನಾಶವಾಗಿತ್ತು.

ಪೌಷ್ಠಿಕಾಂಶದ ಕೊರತೆಯಿಂದ ರೋಗ ಬರುವ ಸಾಧ್ಯತೆಯ ಬಗ್ಗೆ ಚಿಂತಿಸಿದ
ಪಿ.ಎನ್. ಭಟ್‌ರವರು ಮಣ್ಣು ಪರೀಕ್ಷೆ ನಡೆಸಿ, ಯಾವ ಯಾವ ಅಗತ್ಯದ ಅಂಶಗಳ ಕೊರತೆಯಿದೆ ಎಂದು ಕಂಡುಕೊಂಡು ಅದನ್ನು ಬೆಳೆಗಳಿಗೆ ಪೂರೈಸುವುದರ ಜತೆಗೆ ರೋಗ ನಿರೋಧಕ ಶಕ್ತಿ ಬೆಳೆಸುವ ಆಂಟಿ ಬಯೋಟಿಕ್ ಅನ್ನು ಗಿಡಗಳಿಗೆ ಸಿಂಪಡಿಸುವ ಸರಳ ವಿಧಾನ ಅಳವಡಿಸಿಕೊಳ್ಳಲು ನಿರ್ಧರಿಸಿ, ತಮ್ಮ ತೋಟದಲ್ಲಿ ಪ್ರಯೋಗ ಆರಂಭಿಸಿದರು. ಬಳಿಕ ಸಂಪಾಜೆಯ ಜೇಡ್ಲ ಶ್ರೀಧರ ಭಟ್ ರವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಶ್ರೀಧರ ಭಟ್ಟರು ಪಿ.ಎನ್. ಭಟ್‌ರ ಸಲಹೆಯನ್ನು ಪುರ್ಣವಾಗಿ ಸ್ವೀಕರಿಸಿ, ಹಳದಿ ರೋಗದಿಂದ ಸಂಪೂರ್ಣ ನಾಶಗೊಂಡಿದ್ದ ತೋಟದ ಒಂದು ಎಕ್ರೆ ಪ್ರದೇಶದಲ್ಲಿ ಹೊಸದಾಗಿ ಮಾಡಿದ ಅಡಿಕೆ ತೋಟವನ್ನು ಪಿ.ಎನ್. ಭಟ್‌ರ ಸಲಹೆಯ ಪ್ರಯೋಗಕ್ಕೆ ಒಳ ಪಡಿಸಿದರು.


ಪರಿಣಾಮವಾಗಿ ಈಗ ಶ್ರೀಧರ ಭಟ್‌ರ ಹೊಸ ತೋಟ ಹಸಿರಿನಿಂದ ನಳನಳಿಸುತ್ತಿದೆಯಲ್ಲದೆ ಕಳೆದರೆಡು ವರ್ಷಗಳಿಂದ ಉತ್ತಮ ಇಳುವರಿ ಕೂಡಾ ನೀಡ ತೊಡಗಿದೆ. ಈ ಪ್ರಯೋಗವನ್ನು ಆಸುಪಾಸಿನ ರೈತರಿಗೂ ತಿಳಿಸಿ ಹೇಳಿ ಅವರೂ ಆಸಕ್ತಿ ತೋರುವಂತೆ ಮಾಡಿದ್ದರಿಂದ ಸಂಪಾಜೆ, ಅರಂತೋಡು ಪರಿಸರದ ಸುಮಾರು ೧೪ ಮಂದಿ ರೈತರು ಮತ್ತೆ ತಮ್ಮ ಅಡಿಕೆ ತೋಟ ಗತ ವೈಭವಕ್ಕೆ ಮರಳುವ ಆಶಾಭಾವ ತಾಳುವಂತಾಗಿದೆ.


ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುಳ್ಯದ ಆರ್.ಕೆ.ಭಟ್‌ರವರು ಹಳದಿ ಎಲೆ ರೋಗ ಪೀಡಿತ ಅಡಿಕೆ ಕೃಷಿಕರ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಪಿ.ಎನ್. ಭಟ್‌ರವರ ಸಲಹೆ ಸೂಚನೆಗಳು ಏಕ ಕಾಲದಲ್ಲಿ ರೈತರಿಗೆ ತಲುಪುವಂತಹ ವ್ಯವಸ್ಥೆ ಮಾಡಿದ್ದಾರಲ್ಲದೆ, ಈ ವಾಟ್ಸಾಪ್ ಗ್ರೂಪ್ ವತಿಯಿಂದ ಪಿ.ಎನ್. ಭಟ್‌ರಿಗೆ ಕೃಷಿಕ ರಕ್ಷಕ ಎಂಬ ಬಿರುದು ನೀಡಿ ಅಭಿನಂದಿಸುವ ಕಾರ್ಯಕ್ರಮವನ್ನು ಮೇ.೧೯ರಂದು ಸುಳ್ಯದ ಅಮೃತ ಭವನದಲ್ಲಿ ಏರ್ಪಡಿಸಿದ್ದರು. ಜೇಡ್ಲ ಶ್ರಿಧರ ಭಟ್, ಪಿ.ಬಿ. ಪ್ರಭಾಕರ ರೈ ಮತ್ತಿತರರೊಂದಿಗೆ ಸೇರಿಕೊಂಡು ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ೧೦೦ ಕ್ಕಿಂತ ಅಧಿಕ ಆಸಕ್ತ ಕೃಷಿಕರು ಭಾಗವಹಿಸಿದ್ದರು. ಅಡಿಕೆ ಪತ್ರಿಕೆಯ ಸಂಸ್ಥಾಪಕ ಕೃಷಿ ತಜ್ಞ ಶ್ರೀಪಡ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪಿ.ಎನ್. ಭಟ್‌ರೊಂದಿಗೆ ಸುಮಾರು ಕೃಷಿಕರು ಸುಮಾರು ಎರಡು ಗಂಟೆ ಕಾಲ ಸಂವಾದ ನಡೆಸಿದರು. ಅವರನ್ನು ಸನ್ಮಾನಿಸಿದ ಪಿ.ಬಿ. ಪ್ರಭಾಕರ ರೈ ಹಾಗೂ ಜೇಡ್ಲ ಶ್ರಿಧರ ಭಟ್ ತಮ್ಮ ಕೃಷಿ ಅನುಬವಗಳನ್ನು ಹಂಚಿಕೊಂಡರು. ಆರ್.ಕೆ.ಭಟ್ ಸ್ವಾಗತಿಸಿ, ವಂದಿಸಿದರು.