ಸುಳ್ಯದ ಸಂಪಾಜೆ ಗ್ರಾಮ ಪಂಚಾಯತ್ ನ ಮೂವರು ಸದಸ್ಯರ ರಾಜೀನಾಮೆ ಅಂಗೀಕಾರವನ್ನು ರದ್ದುಗೊಳಿಸಿದ ರಾಜ್ಯ ಹೈಕೋರ್ಟ್

0

ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶೌವಾದ್ ಗೂನಡ್ಕ, ಲಿಸ್ಸಿ ಮೊನಾಲಿಸಾ ಹಾಗೂ ವಿಮಲಾ ಪ್ರಸಾದ್ ಅವರು ತಾವು ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದರೂ ಕೂಡ ಆಗಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ.ಹಮೀದ್ ಅವರು ಅದನ್ನು ಅಂಗೀಕರಿಸಿರುವುದು ಸರಿಯಲ್ಲವೆಂದು ತೀರ್ಪು ನೀಡಿರುವ ಹೈಕೋರ್ಟ್, ಇದು ಪ್ರತೀಕಾರದ ಉದ್ದೇಶದಿಂದ ಮಾಡಿರುವುದೆಂದು ನ್ಯಾಯಾಲಯಕ್ಕೆ ಕಂಡು ಬಂದಿದ್ದು, ಕಾನೂನು ಪ್ರಕಾರ ಮೂವರು ಸದಸ್ಯರು ತಾವು ನೀಡಿದ್ದ ರಾಜೀನಾಮೆಯನ್ನು ಅವಧಿಗಿಂತ ಮೊದಲು ಹಿಂಪಡೆದಿರುವುದರಿಂದ ಮೂವರು ಕೂಡ ಸದಸ್ಯರಾಗಿ ತಮ್ಮ ಅವಧಿಯನ್ನು ಪೂರೈಸಬಹುದೆಂದು ತಿಳಿಸಿದೆ.

ರಾಜಕೀಯ ಕಾರಣಗಳಿಂದ 2022 ರ ನವೆಂಬರ್ ನಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ನ ನಾಲ್ವರು ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ, ಶೌವಾದ್ ಗೂನಡ್ಕ, ಲಿಸ್ಸಿ ಮೊನಾಲಿಸಾ ಹಾಗೂ ವಿಮಲಾ ಪ್ರಸಾದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತದನಂತರ ನಾಲ್ವರು ನಿಗದಿತ ಸಮಯದೊಳಗೆ ರಾಜೀನಾಮೆ ಹಿಂಪಡೆದಿದ್ದರು. ಆದರೂ ಕೂಡ ಸೋಮಶೇಖರ್ ಕೊಯಿಂಗಾಜೆಯವರನ್ನು ಹೊರತು ಪಡಿಸಿ ಉಳಿದ ಮೂವರ ರಾಜೀನಾಮೆಯನ್ನು ಆಗಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ.ಹಮೀದ್ ಅವರು ಅಂಗೀಕರಿಸಿದ್ದರು. ಇದರ ವಿರುದ್ಧ ಮೂವರು ಸದಸ್ಯರೂ ಪುತ್ತೂರು ಸಹಾಯಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅದಕ್ಕೆ ಮನ್ನಣೆ ನೀಡದೆ ಮೂರು ಸ್ಥಾನಗಳು ತೆರವಾಗಿರುವ ಬಗ್ಗೆ ಅಂದಿನ ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರು ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿ ಮೂವರು ಸದಸ್ಯರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ತಕ್ಷಣವೇ ರಾಜೀನಾಮೆ ಅಂಗೀಕಾರಕ್ಕೆ ತಡೆಯಾಜ್ಞೆಯನ್ನು ನೀಡಿದ್ದ ಹೈಕೋರ್ಟ್ ಇದೀಗ ಅಂಗೀಕಾರವನ್ನು ರದ್ದುಗೊಳಿಸಿ ಆದೇಶಿಸಿದೆ. ಖ್ಯಾತ ವಕೀಲರಾದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಅವರ ಸಹಾಯಕ ವಕೀಲರಾದ ಲೀಲಾ ಪಿ.ದೇವಾಡಿಗ ಅವರು ಮೂವರು ಸದಸ್ಯರುಗಳ ಪರ ವಾದ ಮಂಡಿಸಿದ್ದರು.

” ಇದು ಸತ್ಯಕ್ಕೆ ಸಂದ ಜಯ, ಕಾನೂನಿನ ಮುಂದೆ ಯಾವ ಷಡ್ಯಂತ್ರವು ನಡೆಯುವುದಿಲ್ಲ” ಎಂದು ತೀರ್ಪಿನ ನಂತರ ಶೌವಾದ್ ಪ್ರತಿಕ್ರಿಯಿಸಿದ್ದಾರೆ.