ನೆನಪುಗಳ ಮೆಲುಕು ಹಾಕಲು ರಚಿತಗೊಂಡ ‘ಪಿಯು ಕ್ಲಾಸ್ಮೇಟ್ಸ್’ ಗ್ರೂಪ್ ನ ಕ್ಲಾಸ್ಮೇಟ್ ರವಿಕಿರಣ್ ಪುಣಚರಿಗೆ ಧನ ಸಹಾಯ

0

ಕಾಲೇಜು ಜೀವನವನ್ನು ಮೆಲುಕು ಹಾಕಲೆಂದು ರಚನೆಗೊಂಡ ವಾಟ್ಸ್ಯಾಪ್ ಗ್ರೂಪೊಂದು ತಂಡದ ಸದಸ್ಯನೊಬ್ಬ ಅನಾರೋಗ್ಯಗೊಂಡಾಗ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದೆ.

ಸುಳ್ಯದ ಜೂನಿಯರ್ ಕಾಲೇಜಿನ 1994-95 ರ ಪಿಯು ಗ್ರೂಪಿನ ಸದಸ್ಯರು ಕೆಲ ವರ್ಷಗಳ ಹಿಂದೆ ಗತ ನೆನಪುಗಳನ್ನು ಮರು ನೆನಪಿಸಲೆಂದು ‘ಪಿಯು ಕ್ಲಾಸ್ಮೇಟ್ಸ್’ ಎಂಬ ವಾಟ್ಸ್ಯಾಪ್ ಗ್ರೂಪ್ ರಚಿಸಿಕೊಂಡಿದ್ದರು. ಸಾಮಾನ್ಯವಾಗಿ ಇತರ ಗ್ರೂಪುಗಳಲ್ಲಿ ತಂಡದ ಸದಸ್ಯರು ಇನ್ನಿಲ್ಲದ ಹರಟೆಯಲ್ಲಿ ತೊಡಗಿದ್ದರೆ, ಈ ಗ್ರೂಪಿನ ಸದಸ್ಯರು ಅಗತ್ಯ ಬಿದ್ದಾಗ ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ನೀಡಿ ಅವರ ಕಣ್ಣೀರನ್ನು ಒರೆಸುವ ಕೆಲಸ ಮಾಡುತ್ತಿದೆ.

ಈ ಗ್ರೂಪಿನ ಸದಸ್ಯ ರವಿಕಿರಣ್ ಪುಣಚ, ರೈತ ಸಂಘದಲ್ಲಿ ಸಕ್ರಿಯನಾಗಿ ರಾಜ್ಯ ಮಟ್ಟದ ಜವಾಬ್ದಾರಿ ವಹಿಸಿಕೊಂಡಿದ್ದರೂ ಅನಾರೋಗ್ಯ ಅವರನ್ನು ಅಧೀರನನ್ನಾಗಿಸಿತ್ತು. ವರ್ಷದ ಹಿಂದೆ ನಡೆದ ರಸ್ತೆ ಅಪಘಾತ, ವೈಯಕ್ತಿಕ ಸಮಸ್ಯೆಯ ಜೊತೆಗೆ ತಿಂಗಳ ಹಿಂದೆ ತಲೆಯ ಹಿಂಭಾಗದಲ್ಲಿ ಎದ್ದ ಮಾಮೂಲಿ ಕುರು ಅವರ ಆರ್ಥಿಕ ಪರಿಸ್ಥಿತಿಯನ್ನು ಹದಗೆಡುವಂತೆ ಮಾಡಿತ್ತು. ಒಂದೆರಡು ಕಾಣಿಸಿಕೊಂಡ ಕುರಗಳ ಸಂಖ್ಯೆ ಏಕಕಾಲದಲ್ಲಿ ನಲ್ವತ್ತಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಮೂಡಿದಾಗ ಕೈಗೊಂಡ ಆಯುರ್ವೇದಿಕ್, ಅಲೋಪತಿ ಚಿಕಿತ್ಸೆಗಳ ಫಲಿತಾಂಶ ಶೂನ್ಯವಾದಾಗ ಶಸ್ತ್ರ ಚಿಕಿತ್ಸೆ ಮಾಡಿಸುವುದು ಅನಿವಾರ್ಯ ಎಂಬಂತಾಗಿತ್ತು.

ವಿಷಯ ತಿಳಿದ ‘ಪಿಯು ಕ್ಲಾಸ್ಮೇಟ್ಸ್’ ಗ್ರೂಪ್ ನ ಸದಸ್ಯರು ಧನ ಸಹಾಯಕ್ಕೆ ಮುಂದಾಗಿ ಸುಮಾರು ರೂ. 38,000 ಸಂಗ್ರಹಿಸಿ ಇತ್ತೀಚೆಗೆ ಪುಣಚದ ಅವರ ಮನೆಗೆ ತೆರಳಿ ಹಣ ಹಸ್ತಾಂತರಿಸಿ, ಆತ್ಮಸ್ಥೈರ್ಯ ತುಂಬಿ ಬಂದಿದೆ. ತಂಡದ ಸದಸ್ಯರಿಗಲ್ಲದೆ ಈ ಹಿಂದೆಯೂ ಓರ್ವ ಅಟೋ ರಿಕ್ಷಾ ಚಾಲಕ ಅನಾರೋಗ್ಯ ಪೀಡಿತನಾದಾಗ ತಂಡದ ಸದಸ್ಯರೆಲ್ಲರೂ ಒಮ್ಮತದಿಂದ ಹಣ ಸಂಗ್ರಹಿಸಿ ಅವರ ಕುಟುಂಬಕ್ಕೆ ನೆರವಾದುದದನ್ನು ಇಲ್ಲಿ ಸ್ಮರಿಸಬಹುದಾಗಿದೆ.