ತೊಡಿಕಾನದಲ್ಲಿ ಅರಂತೋಡು- ತೊಡಿಕಾನ- ಪಟ್ಟಿ-ಭಾಗಮಂಡಲ ರಸ್ತೆ ಅಭಿವೃದ್ಧಿ ಕುರಿತು ವಿಶೇಷ ಸಭೆ

0

ಸಭೆಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗಿ

ದುರ್ಗಮ ರಸ್ತೆಯನ್ನು ವೀಕ್ಷಿಸುತ್ತಾ ಜೀಪಿನಲ್ಲಿ ಬಂದ ಶಾಸಕ ಎ.ಎಸ್.ಪೊನ್ನಣ್ಣ

ಕಾನೂನಿನ ತೊಡಕನ್ನು ನಿವಾರಿಸಿ ರಸ್ತೆ ಅಭಿವೃದ್ಧಿ ; ಶಾಸಕದ್ವಯರ ಭರವಸೆ

ಅರಂತೋಡು ತೊಡಿಕಾನಕ್ಕಾಗಿ ಪಟ್ಟಿ ಭಾಗಮಂಡಲಕ್ಕೆ ಸಂಪರ್ಕ ಕಲ್ಪಸುವ ರಸ್ತೆ ಆಗಬೇಕೆಂಬ ಬಹು ವರುಷಗಳ ಬೇಡಿಕೆಯ ಮುಂದುವರಿದ ಭಾಗವಾಗಿ ಇಂದು ತೊಡಿಕಾನ ದೇವಸ್ಥಾನದ ಸಭಾಭವನದಲ್ಲಿ ಹೋರಾಟ ಸಮಿತಿಯ ವಿಶೇಷ ಸಭೆ ನಡೆಯಿತು.
ಸಭೆಯಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕ ಎ‌.ಎಸ್.ಪೊನ್ನಣ್ಣ ಭಾಗವಹಿಸಿದ್ದರು.
ಆರಂಭದಲ್ಲಿ ರಸ್ತೆ ಹೋರಾಟ ಸಮಿತಿಯವರು ಮನವಿಯನ್ನು ಶಾಸಕ ಪೊನ್ನಣ್ಣರವರಿಗೆ ಸಲ್ಲಿಸಿದರು.


ಸಭಾಭವನ ತುಂಬಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಎ.ಎಸ್.ಪೊನ್ನಣ್ಣನವರು ಈ ಸಂಪರ್ಕ ರಸ್ತೆಯು ಅಭಿವೃದ್ಧಿಯಾಬೇಕೆಂಬುದು ನಿಮ್ಮಲ್ಲರ ಬಹಳ ವರ್ಷದ ಬೇಡಿಕೆಯಾಗಿದೆ.ಆದರೆ ಈ ರಸ್ತೆಯು ಮೀಸಲು ಅರಣ್ಯದ ಮೂಲಕ ಹಾದು ಹೋಗುತ್ತದೆ. ನಮ್ಮ ದೇಶ ಭಾರತ ಸೇರಿದಂತೆ ಇಡೀ ವಿಶ್ವವೇ ಪರಿಸರ ಮತ್ತು ವಾತಾವರಣ ಬದಲಾವಣೆಗೆ ಗಮನಹರಿಸುತ್ತಿದೆ‌.ಇದು ಇಂದಿನ ಅನಿವಾರ್ಯ ಕೂಡ ಹೌದು. ನಾನು ಈ ರಸ್ತೆಯ ಹಿನ್ನೆಲೆಯನ್ನು ಗಮನಿಸಿದ್ದೇನೆ.

ಕಾನೂನಿನಲ್ಲಿ ರಸ್ತೆ ಮಾಡುವ ಅವಕಾಶವಿದೆ. ಇದಕ್ಕಾಗಿ ಮುಖ್ಯ ಮಂತ್ರಿ,ಅರಣ್ಯ ಸಚಿವರಾದಿಯಾಗಿ ಹೋರಾಟ ಮಾಡುತ್ತೇನೆ. ಕೇಂದ್ರ ಸರಕಾರದ ಪ್ರತ್ಯೇಕ ಸಭೆಯನ್ನು ನಡೆಸಿ ಕಾನೂನು ತೊಡಕನ್ನು ನಿವಾರಿಸಿ ರಸ್ತೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ .ರಾಜ್ಯ ಬಜೆಟ್ ನ ಅಂತಿಮ ತಯಾರಿ ನಡೆಯುತ್ತಿರುವುದರಿಂದ ಈ ರಸ್ತೆ ಗೆ ಅನುದಾನ ಮೀಸಲಿಡುವ ಬಗ್ಗೆಯೂ ಪ್ರಯತ್ನಿಸುತ್ತೇನೆ ಎಂದ ಅವರು ಅಧಿಕಾರ ಎಂದರೆ ಜನಬೆಂಬಲ. ನಿಮ್ಮ ಸಹಕಾರ ಅಗತ್ಯ, ರಾಜಕೀಯ ಬೇರೆ ಅಭಿವೃದ್ಧಿ ಬೇರೆ ಅಭಿವೃದ್ಧಿಯಾದಾಗ ಮನಸ್ಸಿಗೆ ತೃಪ್ತಿಯಾಗುತ್ತದೆ. ಎಂದು ಹೇಳಿದರು.


ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಮಾತನಾಡಿ ಕೊಡಗು- ಧರ್ಮಸ್ಥಳವನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ನಮ್ಮನ್ನು ಒಂದು ಗೂಡಿಸುವ ಕೆಲಸವನ್ನು ದೇವರು ಮಾಡಲಿ. ಪೊನ್ನಣ್ಣರವರು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾಗಿರುವುದರಿಂದ ಅವರಿಗೆ ಈ ಶಕ್ತಿ ಇದೆ. ಅವರೊಂದಿಗೆ ನಾನು ಪ್ರಯತ್ನ ಮಾಡುತ್ತೇನೆ. ಈ ರಸ್ತೆಯಿಂದಾಗಿ ತೊಡಿಕಾನ ಪ್ರೇಕ್ಷಣೀಯ ಸ್ಥಳವಾಗಿ ಪ್ರಸಿದ್ಧವಾಗುತ್ತದೆ. 3 ವರ್ಷದಲ್ಲಿ ರಸ್ತೆಯಾಗಿ ಎರಡೂ ಕಡೆಯೂ ಬೃಹತ್ ಅಭಿನಂದನಾ ಸಮಾರಂಭ ಏರ್ಪಡಿಸುವಂತಾಗಲಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಈ ಬೇಡಿಕೆ ಬಹು ವರ್ಷದ ಬೇಡಿಕೆ. ದಿ.ತೊಡಿಕಾನ ವಸಂತ ಭಟ್ ರವರ ಮುಂಚೂಣಿಯಲ್ಲಿ ಹೋರಾಟ ಆರಂಭಗೊಂಡಿತು.ಅವರ ನಿಧನ ನಂತರ ನಿಂತು ಹೋಯಿತು. ಈಗ ಮತ್ತೆ ಹೋರಾಟ ಆರಂಭಿಸಿದ್ದೇವೆ.ಈ ರಸ್ತೆಗೆ ಬಹಳ ವರ್ಷಗಳ ಹಿನ್ನೆಲೆ ಇದೆ. ಇದರಲ್ಲಿ 7 ಕಿ.ಮೀ.ಮೀಸಲು ಅರಣ್ಯ, 2 ಕಿ.ಮಿ.ವೈಲ್ಡ್ ಲೈಫ್, 1ಕಿ.ಮೀ.ಪಟ್ಟಾ ಜಾಗ ಬರುತ್ತದೆ. ಹಿಂದಿನಿಂದಲೂ ರಸ್ತೆಗೆ ಜಾಗ ಬಿಡಬೇಕೆಂಬ ದಾಖಲೆ ಇದಾಗ್ಯೂ ಆಧುನಿಕ ತಾಂತ್ರೀಕರಣದಿಂದ ತೊಂದರೆ ಉಂಟಾಗಿದೆ. ಈ ಎಲ್ಲಾ ತೊಂದರೆ ಗಳನ್ನು ಶಾಸಕದ್ವಯರು ನಿವಾರಿಸಿ ಈ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿದರು.
ಹೋರಾಟ ಸಮಿತಿಯ ವತಿಯಿಂದ ಎ.ಎಸ್.ಪೊನ್ನಣ್ಣರವರನ್ನು ಸನ್ಮಾನಿಸಲಾಯಿತು.

ಕಾರ್ಯ ಕ್ರಮದಲ್ಲಿ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿ, ನ್ಯಾಯವಾದಿ ದೀಪಕ್ ಕುತ್ತಮೊಟ್ಟೆ ವಂದಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.
ಶಾಸಕ ಎ.ಎಸ್.ಪೊನ್ನಣ್ಣರವರು ಭಾಗಮಂಡಲ, ಪಟ್ಟಿ ರಸ್ತೆಯಲ್ಲಿ ಜೀಪಿನಲ್ಲಿ ಆಗಮಿಸಿ ರಸ್ತೆಯನ್ನು ವೀಕ್ಷಿಸಿದರು.
ದೇವಸ್ಥಾನ ಒಳಗೆ ದೇವರ ದರ್ಶನ ಪಡೆದು ದೇವರ ಮೀನುಗಳನ್ನು ವೀಕ್ಷಿಸಿದರು.