ಶಾಲಾ ಕಟ್ಟಡ ವಿಳಂಬ ಕುರಿತು ಶಾಸಕ ಪೊನ್ನಣ್ಣರಿಂದ ಅಧಿಕಾರಿಗಳಿಗೆ ತರಾಟೆ
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ವಿವಿಧ ಇಲಾಖೆಗಳ ಮಾರ್ಚ್ ಅಂತ್ಯದವರೆಗಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರು ಕೊಯನಾಡು ಶಾಲೆ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ ಎಷ್ಟು ಕಾಲವಾಯಿತು? ಏಕೆ ಇನ್ನೂ ಕನಿಷ್ಠ ಭೂಮಿಪೂಜೆಯೂ ನೆರವೇರಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.















ಕೊಯನಾಡು ಬಳಿ ಈಗಾಗಲೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಾಗದಲ್ಲಿ ಭೂಮಿಪೂಜೆ ನೆರವೇರಿಸಲು ದಿನಾಂಕ ನಿಗದಿ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ನಿರ್ದೇಶನ ನೀಡಿದ್ದು ಮುಂದಿನ ವಾರ ಮುಂಗಾರು ಆರಂಭವಾಗುತ್ತಿದ್ದು, ಶಾಲಾ ಕಟ್ಟಡಗಳ ಸುಸ್ಥಿತಿ, ಸುತ್ತುಗೋಡೆ ನಿರ್ಮಾಣ, ಶೌಚಾಲಯ, ಆಟದ ಮೈದಾನ, ಶಾಲೆಗೆ ಬೇಕಿರುವ ಪೀಠೋಪಕರಣಗಳು ಹೀಗೆ ಇತರೆ ಮಾಹಿತಿ ಒದಗಿಸುವಂತೆಯೂ ಅವರು ಖಡಕ್ ಸೂಚನೆ ನೀಡಿದರು.
‘ಜಿಲ್ಲೆಯ ಅಭಿವೃದ್ಧಿ ಸಂಬಂಧ ಪಟ್ಟ ಹಾಗೆ ರಸ್ತೆಗಳಿಗಾಗಿರಬಹುದು, ಸೇತುವೆಗಳಿಗಾಗಿರಬಹುದು, ಕಟ್ಟಡಗಳು ಹೀಗೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಕಷ್ಟಪಟ್ಟು ಅನುದಾನ ಬಿಡುಗಡೆ ಮಾಡಿಸುತ್ತೇವೆ. ಆದರೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ಒದಗಿಸದೆ ಉದಾಸೀನ ತೋರುತ್ತಿರುವುದು ಸರಿಯಲ್ಲ’ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ










