ಬದುಕು ಗೆಲ್ಲಲಿಲ್ಲ ನಿಜ ; ಆದರೆ ಸಾವನ್ನು ಹೀಗೆ ಸೋಲಿಸಿದ್ದರು ಚಾಂದಿನಿ
✍️ ದುರ್ಗಾಕುಮಾರ್ ನಾಯರ್‌ಕೆರೆ
ಕಳೆದ ಮೂವತ್ತೈದು ವರ್ಷಗಳಿಂದ ಥರಾವರಿ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದರೂ, ಸಾವು ಎದುರಿಗೆ ಬಂದು ನಿಂತರೂ ” ನನಗೆ ನಾಳೆ ಇದೆ ” ಎಂದು ಸ್ಥೈರ್ಯ ಮತ್ತು ಆತ್ಮವಿಶ್ವಾಸದ ಬದುಕು ನಡೆಸುತ್ತಿದ್ದ ಚಾಂದಿನಿ ಎಂಬ ಹೆಣ್ಣು ಮಗಳು ಕೊನೆಗೂ ಸಾವಿನ ಮುಂದೆ ಶರಣಾಗಿದ್ದಾರೆ.

ಚಾಂದಿನಿ ಕ್ರಮಿಸಿದ ಬದುಕಿ ಹಾದಿಯೇ ರೋಚಕ. ಚಾಂದಿನಿ ಸವೆಸಿದ್ದು ಕಷ್ಟದ ದಾರಿ. ಆದರೆ ಎಂದೂ ಅನುಕಂಪ ಬೇಡಲಿಲ್ಲ. ಆಕೆಯ ನೋವು ಅನೇಕ ಬಾರಿ ಅನೇಕರ ಬಗ್ಗೆ ತೀಕ್ಷ್ಣ ಮಾತುಗಳಿಗೂ ಕಾರಣವಾಗಿರಬಹುದು.
ಈ ಮೂರೂವರೆ ದಶಕದಲ್ಲಿ ಹಲವಾರು ಮಂದಿ ಆಕೆಗೆ ಸಹಾಯ ಹಸ್ತ ಚಾಚಿದ್ದಾರೆ. ಮನೆ ಮಗಳಂತೆ ನೋಡಿಕೊಂಡವರಿದ್ದಾರೆ. ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ಚಾನೆಲ್ ಹಲವು ಬಾರಿ ಚಾಂದಿನಿಯ ವಿಶೇಷ ಸ್ಟೋರಿ ಪ್ರಸಾರ ಮಾಡಿ ಸರಕಾರದ ಗಮನ ಸೆಳೆದಿತ್ತು.

ಇದು ನಾಲ್ಕು ವರ್ಷದ ಹಿಂದೆ ” ಸುದ್ದಿ ” ಪ್ರಕಟಿಸಿದ ಸ್ಟೋರಿ. ನಂತರದ ವರ್ಷಗಳಲ್ಲೂ ಆಕೆಯ ಆರೋಗ್ಯದಲ್ಲೂ, ಬದುಕಿನಲ್ಲೂ ಹಲವು ಸಂಗತಿಗಳು ಘಟಿಸಿತ್ತು. ಸರಕಾರದಿಂದ ಉಚಿತ ಚಿಕಿತ್ಸೆಯ ಭರವಸೆಯೂ ದೊರೆತಿತ್ತು. ಆದರೆ ಫಾಲೋ ಅಪ್ ಪ್ರಯತ್ನವೇನೂ ಸುಲಭದ್ದಾಗಿರಲಿಲ್ಲ. ಕೆಲವು ತಿಂಗಳ ಹಿಂದಷ್ಟೇ ಚಾಂದಿನಿ ದಯಾಮರಣಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದರು.

ಈ ಮಧ್ಯೆ ಗಂಭೀರ ಸ್ಥಿತಿಯಲ್ಲಿದ್ದ ಚಾಂದಿನಿ ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಲ್ಕು ವರ್ಷದ ಹಿಂದೆ ಸುದ್ದಿಯಲ್ಲಿ ಪ್ರಕಟಗೊಂಡ ವಿಶೇಷ ವರದಿ ಇಲ್ಲಿದೆ :
ಅನಾರೋಗ್ಯಕ್ಕೇ ಸಡ್ಡು ಹೊಡೆದ ಚಾಂದಿನಿ !
ಮೂವತ್ತು ವರ್ಷದಿಂದ ಕಿತ್ತು ತಿನ್ನುವ ಅನಾರೋಗ್ಯ, ನೋವು ಕೊಡುವ ಥರಾವರಿ ಖಾಯಿಲೆ, ಇಪ್ಪತ್ತಕ್ಕೂ ಅಧಿಕ ಬಾರಿ ವಿಧ ವಿಧದ ಶಸ್ತ್ರಚಿಕಿತ್ಸೆ, ಹತ್ತು ಬಾರಿ ಕೃತಕ ಉಸಿರಾಟ, ಶಾಕ್ ಟ್ರೀಟ್‌ಮೆಂಟ್, ಕಿಮೋಥೆರಪಿ, ನಿರಂತರ ಪ್ರಖರ ಪರಿಣಾಮದ ಔಷಧಿ ಸೇವನೆ…
ಒಂದೇ, ಎರಡೇ… ಪುಟ್ಟ ಮನುಷ್ಯ ಜೀವವೊಂದು ತಾಳಿಕೊಳ್ಳಬಹುದಾದ ಗರಿಷ್ಟ ಆರೋಗ್ಯ ಮಿತಿ ಇದು. ಆದರೆ ಇವೆಲ್ಲವನ್ನೂ ಎದುರಿಸುತ್ತಲೇ “ನಾಳೆ ಇದೆ” ಎಂಬ ಸ್ಥೈರ್ಯದೊಂದಿಗೆ ಬದುಕು ನಡೆಸುತ್ತಾ ಅಕ್ಷರಶಃ ಖಾಯಿಲೆಯನ್ನೇ ಸೋಲಿಸಿ ಧೃತಿಗೆಡದೆ ಖುಷಿಯ ಬದುಕು ನಡೆಸುತ್ತಿರುವ ದಿಟ್ಟ ಹೆಣ್ಣು ಮಗಳ ಹೆಸರು ಚಾಂದಿನಿ.
ಇಂದಿನ ಕಷ್ಟಗಳ ಕಾರಣಕ್ಕೇ ಗೊಣಗಾಡುತ್ತಾ ಬದುಕು ನಡೆಸುತ್ತಿರುವವರ ಮಧ್ಯೆ ನಾಳೆಯ ನಿರೀಕ್ಷೆಯೊಂದಿಗೆ ಬದುಕು ಕಟ್ಟಿಕೊಂಡಿರುವ ಚಾಂದಿನಿಯ ಪಾಸಿಟಿವ್ ಶಕ್ತಿಯ ಕಥೆಯಿದು. ಕಥೆಯಲ್ಲ ಜೀವನ!
ಸುಳ್ಯದ ನಾವೂರು ನಿವಾಸಿ ದಿ| ಧನಂಜಯ ಮತ್ತು ಸರೋಜಿನಿ ದಂಪತಿಯ ಪುತ್ರಿ ಚಾಂದಿನಿ. ಮಧ್ಯಮ ವರ್ಗದ ಕುಟುಂಬ. ಟೈಲರ್ ವೃತ್ತಿ ಮತ್ತು ಸಣ್ಣ ಪುಟ್ಟ ಕೆಲಸಗಳ ಆದಾಯದೊಂದಿಗೆ ಧನಂಜಯರಿಂದ ಕುಟುಂಬದ ಪೋಷಣೆ. ನಾಲ್ವರು ಮಕ್ಕಳು. ಈ ಪೈಕಿ ಚಾಂದಿನಿಗೆ ಮೂರು ವರ್ಷ ಪ್ರಾಯವಿದ್ದಾಗಲೇ ಅನಾರೋಗ್ಯ ಕಾಡಿತ್ತು. ವೈದ್ಯರ ಬಳಿಗೆ ತೆರಳಿದಾಗ ಆರೋಗ್ಯದ ಏರುಪೇರು ಅರಿವಿಗೆ ಬಂತು. ಅಂದಿನಿಂದಲೇ ಚಿಕಿತ್ಸೆ ಶುರು.
ಎಲ್ಲರಂತೆ ಖುಷಿಯ ಬಾಲ್ಯ ಚಾಂದಿನಿಯದಾಗಿರಲಿಲ್ಲ. ಬಾಲ್ಯದ ಆಟ, ಪಾಠಗಳ ಅನುಭವಕ್ಕಿಂತ ಅನಾರೋಗ್ಯ, ಆಸ್ಪತ್ರೆಗಳ ಸಹವಾಸವೇ ಅಧಿಕ. ಬಾಲ್ಯದ ಸಾಂಪ್ರದಾಯಿಕ ಶಿಕ್ಷಣವೂ ಚಾಂದಿನಿಗೆ ದಕ್ಕದೇ ಹೋಯಿತು. ಆರಂಭದಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಗೆ ಸೇರಿದರೂ ಕಲಿಕೆ ಮುಂದುವರೆಸಲಾಗಲಿಲ್ಲ. ವರ್ಷದಲ್ಲಿ ನಾಲ್ಕು ತಿಂಗಳು ಶಾಲೆಗೆ ಹೋದರೆ ಅದೇ ಜಾಸ್ತಿ. ಹೀಗಾಗಿ ಮೊದಲ ಪಾಠಶಾಲೆಯಾದ ಮನೆ ಕೊನೆಯ ಪಾಠಶಾಲೆಯೂ ಆಯಿತು. ತಾಯಿಯೇ ಮೊದಲ ಮತ್ತು ನಂತರದ ಗುರುವಾದರು. ಓದು, ಆಟ, ಪಾಠ ಸೇರಿದಂತೆ ಮಗಳನ್ನು ಕ್ರಿಯಾಶೀಲ ವಾತಾವರಣದಲ್ಲಿ ಬೆಳೆಸಿದರು ಅಪ್ಪ ಅಮ್ಮ. ಮಗಳಿಗೆ ತಾನೊಬ್ಬಳು ರೋಗಿ ಎಂಬ ಅನುಭವವಾಗದಂತೆ ನೋಡಿಕೊಂಡರು.
ಕಷ್ಟದ ಜೀವನವನ್ನೇ ನಡೆಸಿದ್ದ ಧನಂಜಯರು ಚಾಂದಿನಿಯ ಹತ್ತೊಂಭತ್ತು ವರ್ಷದವರೆಗೂ ಸಹಾಯಕ್ಕಾಗಿ ಇನ್ನೊಬ್ಬರ ಮುಂದೆ ಕೈಚಾಚಿದವರಲ್ಲ. ಬೆಳಿಗ್ಗೆ ನಾಲ್ಕು ಗಂಟೆಗೆ ಕೆಲಸಕ್ಕೆ ಹೊರಟರೆ ಮನೆ ಸೇರುವುದು ರಾತ್ರಿ ಒಂಭತ್ತಕ್ಕೆ. ದುಡಿದದ್ದೆಲ್ಲವೂ ಮಗಳಿಗಾಗಿ ಖರ್ಚು. ಮಗಳ ಆರೈಕೆಯಲ್ಲಿ ತಾಯಿಯೂ ಹೊರತಾಗಿರಲಿಲ್ಲ. ಚಾಂದಿನಿ ತಿಂಗಳಲ್ಲಿ ಹತ್ತು ದಿನ ಮನೆಯಲ್ಲಿ ಇರುತ್ತಿದ್ದರೆ ಉಳಿದ ಇಪ್ಪತ್ತು ದಿನ ಆಸ್ಪತ್ರೆಯಲ್ಲಿರಬೇಕಿತ್ತು. ಇಂತ ಪರಿಸ್ಥಿತಿಯಲ್ಲೂ ಧೃತಿಗೆಡದೆ ಮಗಳ ಬೆಂಗಾವಲಾಗಿದ್ದದ್ದು ಮಮತೆಯ ಮಾತೆ.
ಅದೊಂದು ಸಂದರ್ಭದಲ್ಲಿ ಹೈ ಸ್ಟಿರಾಯಿಡ್ ಸೇವನೆಯ ಪರಿಣಾಮ ಚಾಂದಿನಿಯ ಕಣ್ಣುಗಳು ದೃಷ್ಟಿಯನ್ನೇ ಕಳೆದುಕೊಳ್ಳಬೇಕಾಯಿತು. ಆ ಸಂದರ್ಭದಲ್ಲೂ ಮಗಳಿಗೆ ಕಣ್ಣಾದದ್ದು ಅಪ್ಪ ಅಮ್ಮ. ಮಗಳ ಚಿಕಿತ್ಸೆ ಮಾಡುತ್ತಾ ಅಪ್ಪ ಅಮ್ಮನ ಕೈಗಳು ಖಾಲಿಯಾಗಿದ್ದ ಸಮಯವದು. ಅದೊಂದು ದಿನ ತನ್ನ ಭವಿಷ್ಯದ ಬಗ್ಗೆಯೇ ಚಿಂತಿತಳಾಗಿದ್ದ ಚಾಂದಿನಿ ತಾಯಿಯಲ್ಲಿಅಮ್ಮ ನಾನು ಬದುಕಬೇಕಮ್ಮ'' ಅಂದುಬಿಟ್ಟಳು. ತಾಯಿಯಲ್ಲಿದ್ದ ಅಲ್ಪ ಸ್ವಲ್ಪ ಒಡವೆಯೂ ಬ್ಯಾಂಕ್ ಸೇರಿತು. ಚಿಕಿತ್ಸೆ ಮುಂದುವರಿಯಿತು. ನಿರಂತರ ಅನಾರೋಗ್ಯದ ಪರಿಣಾಮ ಉಳಿದ ಎಲ್ಲ ನಿರ್ಣಾಯಕ ಪರೀಕ್ಷೆಗಳನ್ನು ಖಾಸಗಿಯಾಗಿಯೇ ಬರೆಯಬೇಕಾಗಿತ್ತು. ಆಗ ಏಳನೇ ತರಗತಿ ಕೂಡಾ ಪಬ್ಲಿಕ್ ಪರೀಕ್ಷೆಯಾಗಿತ್ತು. ಶಿಕ್ಷಕರ ಪೂರ್ಣ ಸಹಕಾರದೊಂದಿಗೆ ಪಾಸ್ ಆದರು. ಹತ್ತನೇ ತರಗತಿ ಪರೀಕ್ಷೆ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಂಬ್ಯುಲೆನ್ಸ್‌ನಲ್ಲಿ ಹೋಗಿ ಪರೀಕ್ಷೆ ಬರೆದು ಉತ್ತೀರ್ಣರಾದರು. ವೃತ್ತಿಗೆ ಸೇರಿದ ನಂತರ ಪಿಯುಸಿ ಮುಗಿಸಿದರೆ, ವಿವಾಹವಾದ ನಂತರ ಪದವಿಯನ್ನೂ ಮುಗಿಸಿದರು. ಅಂದಿನಿಂದ ಇಂದಿನವರೆಗೂ ಚಾಂದಿನಿ ಆರೋಗ್ಯದಲ್ಲಿ ಎದುರಿಸಿದ ಸಮಸ್ಯೆ ವೈದ್ಯಕೀಯ ಜಗತ್ತಿಗೇ ಸವಾಲಾಗುವಂತದ್ದು. ಆರೋಗ್ಯ ಸಮಸ್ಯೆಗಳ ಪಟ್ಟಿಯೇ ದೊಡ್ಡದು. ಆರಂಭದಲ್ಲಿ ಲಾಲಾರಸ ಗ್ರಂಥಿ ಬ್ಲಾಕ್ ಆದ ಕಾರಣ ಮುಂಬಯಿಗೆ ತರಳಿ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಂಗಳೂರಿಗೆ ಬಂದು ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು. ಇದಾದ ನಂತರ ಅನಾರೋಗ್ಯದ ಸರಮಾಲೆ. ಹೊಟ್ಟೆಯಲ್ಲಿ ಅಲ್ಸರ್ ಕಾಣಿಸಿಕೊಂಡಿತ್ತು. ಬ್ಲೀಡಿಂಗ್ ಶುರುವಾಯಿತು. ಅಪೆಂಡಿಕ್ಸ್‌ಗೆ ಶಸ್ತ್ರ ಚಿಕಿತ್ಸೆ ನಡೆಯಿತು. ಕಿಡ್ನಿ ವೈಫಲ್ಯಕ್ಕೀಡಾದಾಗ ಚಿಕಿತ್ಸೆ ಅನಿವಾರ್ಯವಾಯಿತು. ರಕ್ತಹೀನತೆ ಉಂಟಾಯಿತು. ಕರುಳಿನ ಸಮಸ್ಯೆ, ಲಿವರ್ ಸಮಸ್ಯೆ ಎದುರಿಸಬೇಕಾಯಿತು. ವೆಂಟಿಲೇಟರ್‌ಗಳ ಸಹವಾಸ ಅನಿವಾರ್ಯವಾಯಿತು. ಈಗಲೂ ಆರ್ಗನ್ ಥೆರಫಿ ನಡೆಯುತ್ತಿದೆ. ಆರಂಭದಿಂದಲೂ ಚಾಂದಿನಿಯವರಿಗೆ ವೈದ್ಯಕೀಯ ಮಾರ್ಗದರ್ಶಕರಾದದ್ದು ಸುಳ್ಯ ಕೆವಿಜಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ಕೆ.ವಿ.ಚಿದಾನಂದರು. ಕಾಲಕಾಲಕ್ಕೆ ಅವರಿಂದ ಸಲಹೆ ಪಡೆದ ಚಾಂದಿನಿ ಸುಳ್ಯ, ಮಂಗಳೂರು, ಬೆಂಗಳೂರು, ಮುಂಬಯಿಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರೆಲ್ಲರೂ ಚಾಂದಿನಿಗೆ ಧನಾತ್ಮಕ ಶಕ್ತಿ ತುಂಬಿದ್ದಾರೆ. ಇವೆಲ್ಲದರ ಪರಿಣಾಮವಾಗಿಯೇ ಚಾಂದಿನಿನಾಳೆ ಇದೆ” ಎಂಬ ಧನಾತ್ಮಕ ಚಿಂತನೆಯೊಂದಿಗೆ ಬದುಕು ಸವೆಸುತ್ತಿದ್ದಾರೆ.
ಚಾಂದಿನಿಯ ಅನಾರೋಗ್ಯದ ಚಿಕಿತ್ಸೆಗಾಗಿ ವೆಚ್ಚವಾದ ಮೊತ್ತ ಬರೋಬ್ಬರಿ 75 ಲಕ್ಷ ದಾಟುತ್ತದೆ. ಇವರ ಮಧ್ಯಮ ವರ್ಗದ ಕುಟುಂಬಕ್ಕೆ ಇದು ಖಂಡಿತವಾಗಿಯೂ ಭರಿಸಬಹುದಾದ ಮೊತ್ತವಾಗಿರಲಿಲ್ಲ. ಆಗ ಸಹಾಯಕ್ಕೆ ಬಂದವರು ಸಹೃದಯರು. ಕಾಲಕಾಲಕ್ಕೆ ಅನೇಕರು ಸಹಾಯ, ಸಹಕಾರ ನೀಡಿದ್ದಾರೆ.















ಸುಳ್ಯದ ಎಂ.ಬಿ.ಫೌಂಡೇಶನ್‌ನ ಎಂ.ಬಿ.ಸದಾಶಿವರವರು ಆರಂಭದಿಂದಲೂ ಆರ್ಥಿಕ ಸಹಕಾರ ನೀಡಿದ್ದಾರಲ್ಲದೆ ಈಗಲೂ ಅದನ್ನು ಮುಂದುವರಿಸುತ್ತಿದ್ದಾರೆ. ಮಾತ್ರವಲ್ಲ ಅವರ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಸಂಪರ್ಕವೂ ಆಯಿತು. ಕುಮಾರಸ್ವಾಮಿಯವರು ಅಂದಿನಿಂದಲೂ ಚಾಂದಿನಿಗೆ ಅಧಿಕ ಮೊತ್ತದ ಆರ್ಥಿಕ ಸಹಕಾರ ನೀಡಿದ್ದಾರೆ. ಸಚಿವ ಎಸ್.ಅಂಗಾರರು ಕೂಡ ನಿರಂತರವಾಗಿ ಚಾಂದಿನಿಗೆ ಸಹಾಯ ಹಸ್ತ ಚಾಚಿದ್ದಾರೆ. ಕೆಲವು ಸಮಯದ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಕೂಡಾ ಆರ್ಥಿಕ ಸಹಕಾರ ನೀಡಿದ್ದಾರೆ. ಚಾಂದಿನಿಯಿಂದ ಅಂಕಲ್ ಎಂದು ಕರೆಸಿಕೊಳ್ಳುವ ಡಾ.ಕೆ.ವಿ. ಚಿದಾನಂದರಂತೂ ಚಾಂದಿನಿಯ ಚಿಕಿತ್ಸೆಗಾಗಿ ಒಂದು ರೂಪಾಯಿಯನ್ನೂ ಪಡೆದವರಲ್ಲ.
ಹೀಗೆ ಎಲ್ಲರ ಹರಕೆ ಮತ್ತು ಹಾರೈಕೆಯ ಫಲವಾಗಿಯೇ ಚಾಂದಿನಿ ಅವರಿಗೆ ಬದುಕುವ ಸ್ಫೂರ್ತಿ ಸಿಕ್ಕಿದೆ. ಎಲ್ಲ ಆರೋಗ್ಯದ ಸಮಸ್ಯೆಯ ನಡುವೆಯೂ ನಾಳೆ ಇದೆ ಎನ್ನುವ ಭರವಸೆಯು ಆಕೆಯ ಸಮಸ್ಯೆಗಳನ್ನು ದೂರವಾಗಿಸಿದೆ. ನೋವು ನುಂಗಿ ನಗುವ ಗುಣ ಇತರರಿಗಿಂತ ಭಿನ್ನವಾಗಿಸಿದೆ.
ಕಳೆದ ಅನೇಕ ವರ್ಷಗಳಿಂದ ಪಂಜದ ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಚಾಂದಿನಿ ಮಕ್ಕಳೊಂದಿಗೆ ಕಲೆಯುತ್ತಾ ಖುಷಿ ಪಡುತ್ತಿದ್ದಾರೆ. ಮತ್ತದೆ ನಾಳೆಯ ನೀರಿಕ್ಷೆಯೊಂದಿಗೆ ಬದುಕು ಕಟ್ಟುತ್ತಿದ್ದಾರೆ. ಚಾಂದಿನಿಯ ನೆಮ್ಮದಿಯ ನಾಳೆಗಳಿಗಾಗಿ ನಾವೂ ಪ್ರಾರ್ಥಿಸೋಣ.
ಅನುಕಂಪ ಬೇಡ, ಪ್ರೀತಿ ಸಹಕಾರ ಕೊಡಿ
“ನನಗೆ ಅಥವಾ ನನ್ನಂತವರಿಗೆ ಅಯ್ಯೋ ಪಾಪ ಎಂಬ ಅನುಕಂಪದ ಮಾತುಗಳು ಬೇಡ. ಅದರ ಅವಶ್ಯಕತೆ ಇಲ್ಲ. ನನ್ನನ್ನು ಖಾಯಿಲೆಯವಳು ಅಂತ ನೋಡಬೇಡಿ . ನಾವು ಮನುಷ್ಯರೇ. ಅನಿವಾರ್ಯವಾಗಿ ಇಂತ ಸಮಸ್ಯೆ ಎದುರಿಸುತ್ತಿದ್ದೀವೆ. ಗೆಳತಿಯಾಗಿ ಸಹಕಾರ ಕೊಡಿ, ಪ್ರೀತಿ ಕೊಡಿ. ಕೀಳಾಗಿ ಕಾಣುವ ಮನೋಭಾವ ಬಿಟ್ಟು ಬಿಡಿ” ಎನ್ನುತ್ತಾರೆ ಚಾಂದಿನಿ.
`ಸಾವು ಅಂತ ನಾನು ಒಂದು ದಿನವೂ ಯೋಚನೆ ಮಾಡಿರಲಿಲ್ಲ. ಆ ರೀತಿ ನನ್ನ ಅಪ್ಪ ಅಮ್ಮ ನನ್ನನ್ನು ಬೆಳೆಸಿದ್ದಾರೆ. ಎಲ್ಲರೂ ನಾಳೆಗೇನು ಎತ್ತಿಡೋದು ಅಂತಾರೆ. ಆದರೆ ನಾನು ನಾಳೆ ಇದೆ ಎಂಬ ಭರವಸೆಯಿಂದಲೇ ಬದುಕುತ್ತಿದ್ದೇನೆ” ಎನ್ನುತ್ತಾರೆ ಚಾಂದಿನಿ.
`ಆಸ್ಪತ್ರೆಗಳಲ್ಲಿ ವೈದ್ಯರುಗಳು ನನ್ನನ್ನು ಮಗುವಿನ ತರಹ ನೋಡಿಕೊಂಡಿದ್ದಾರೆ. ಅನೇಕರು ನನಗಾಗಿ ಸಹಕಾರ ನೀಡಿದ್ದಾರೆ. ನನ್ನ ತಾಯಿ ನನಗೆ ಮೊದಲ ಅಮ್ಮನಾದರೆ, ಹರಿಣಿ ಮೇಡಮ್ ನನ್ನ ಎರಡನೆಯ ಅಮ್ಮ. ಆ ರೀತಿ ಸಲಹೆ ಸಹಕಾರ ನೀಡಿದ್ದಾರೆ” ಎನ್ನುತ್ತಾರೆ ಚಾಂದಿನಿ.
ಸಿಂಪತಿ ಅಲ್ಲ ,ಸಿಂಪಲ್ ಪತಿ
ಚಾಂದಿನಿಯ ಎಲ್ಲ ಆರೋಗ್ಯ ಸಮಸ್ಯೆಗಳ ಅರಿವಿದ್ದೂ ಆಕೆಯನ್ನು ವಿವಾಹವಾದವರು ಕಾಸರಗೋಡು ಜಿಲ್ಲೆಯ ಬಂದಡ್ಕದ ಪುರುಷೋತ್ತಮ ಅವರು. ಕೃಷಿಕರಾಗಿರುವ ಅವರ ಮತ್ತು ಅವರ ಮನೆಯವರ ಔದಾರ್ಯ ದೊಡ್ಡದು.
ಅದು 2013 ರ ಸಂದರ್ಭ. ಕೋಲ್ಚಾರಿನಲ್ಲಿ ಚಾಂದಿನಿ ತಂಡದವರ ನೃತ್ಯ ಪ್ರದರ್ಶನವಿತ್ತು. ಆಕೆಗೆ ಅಲ್ಲಿ ಸನ್ಮಾನವೂ ಇತ್ತು. ಅದಾಗಲೇ ಅನಾರೋಗ್ಯದಿಂದ ಆಕೆಯ ಕೇಶರಾಶಿಯೂ ವಿರಳವಾಗಿತ್ತು. ಆದರೆ ಅಲ್ಲಿಗೆ ಬಂದಿದ್ದ ಪುರುಷೋತ್ತಮರಿಗೆ ಲವ್ ಎಟ್ ಫಸ್ಟ್ ಸೈಟ್. ಚಾಂದಿನಿಯನ್ನು ಮನಸ್ಸಿನಲ್ಲೆ ಕಣ್ತುಂಬಿಕೊಂಡರು.
ಕೆಲವೇ ದಿನಗಳಲ್ಲಿ ಹುಡುಗಿ ನೋಡಲು ಬರುವುದಾಗಿ ಕರೆ ಬಂತು. ನನ್ನನ್ನೂ ನೋಡಲು ಬರುತ್ತಾರಾ?'' ಎಂಬ ಅಚ್ಚರಿ ಚಾಂದಿನಿಗೆ. ಬಂದದ್ದೂ ಆಯಿತು. ಚಾಂದಿನಿಯ ಕತೆ ಕೇಳಿದ್ದೂ ಆಯಿತು. ಹುಡುಗಿಯನ್ನು ಒಪ್ಪಿಕೊಂಡದ್ದೂ ಆಯಿತು. ಬಳಿಕ ಮನೆಯವರ ಸರದಿ. ಪುರುಷೋತ್ತಮನಿಗೆ ಒಪ್ಪಿಗೆಯಾದರೆ ನಮಗೂ ಒಪ್ಪಿಗೆ ಎಂದುಬಿಟ್ಟರು. ಅವರದೇ ಖರ್ಚಿನಲ್ಲಿ ಮದುವೆಯೂ ಆಯಿತು.4 ದಿನ ಇರಬಹುದು ಈ ದಾಂಪತ್ಯ” ಎಂಬ ಕುಹಕದ ಮಾತುಗಳಿಗೇನೂ ಬರವಿರಲಿಲ್ಲ. ಆದರೆ ಈ ಮಾತುಗಳನ್ನು ಸುಳ್ಳಾಗಿಸಿ ಬದುಕಿ ತೋರಿಸಿದ್ದಾರೆ ಈ ದಂಪತಿ.
“ನನ್ನ ಪತಿ ನನ್ನ ಪಾಲಿನ ದೇವರು. ವಿವಾಹವಾದ ಒಂದೇ ಒಂದು ದಿನವೂ ಆಸ್ಪತ್ರೆಯಲ್ಲಿ ನನ್ನ ಆರೈಕೆಯ ಹೊಣೆ ನನ್ನ ಅಪ್ಪ ಅಮ್ಮನ ಮೇಲೆ ಹಾಕದೆ ಅಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅವರ ಮನೆಯವರೂ ನನ್ನನ್ನೂ ಅದೇ ಕಾಳಜಿಯಿಂದ ನನ್ನನ್ನು ನೋಡಿಕೊಳ್ಳುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯವಲ್ಲದೆ ಮತ್ತೇನು?” ಎಂದು ಕಣ್ಣರಳಿಸುತ್ತಾರೆ ಚಾಂದಿನಿ.
ಬದುಕು ಕೊಟ್ಟ ಪುರುಷೋತ್ತಮರಿಗೆ ಪ್ರತಿರೂಪ ನೀಡಬೇಕೆಂದು ಚಾಂದಿನಿ ಮಗು ಪಡೆಯಲು ನಿರ್ಧರಿಸಿದಾಗ ವೈದ್ಯಲೋಕ ಇದು ಕಷ್ಟ ಎನ್ನುವ ಸಲಹೆ ನೀಡಿದ್ದು. ಆರೋಗ್ಯ ಹದಗೆಡಬಹುದು, ಆಪರೇಷನ್ ಕಾರಣದಿಂದ ಹೊಟ್ಟೆಯ ಮಾಂಸಗಳು ದುರ್ಬಲವಾಗಿವೆ ಎಂದಿತು. ರಿಸ್ಕ್ ತೆಗೋತೀಯ'' ಎಂದು ಎಚ್ಚರಿಸಿತು. ಆದರೆ ಅಲ್ಲೂ ಸವಾಲು ಸ್ವೀಕರಿಸಿ ವೈದ್ಯಕೀಯ ಸಹಾಯ ಪಡೆದು ತನ್ನಿಷ್ಟದ ಬೇಬಿ ಬೇಕು ಎಂಬ ನಿರ್ಧಾರಕ್ಕೆ ಚಾಂದಿನಿ ಬಂದಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋದರು, ಯಶಸ್ಸಾಗಲಿಲ್ಲ. ಸುಳ್ಯಕ್ಕೆ ಬಂದರು. ಬಳಿಕ ಚಾಂದಿನಿಯ ತಾಯ್ತನದಲ್ಲಿ ಆರೋಗ್ಯ ಸೇವೆಯ ಪ್ರಧಾನ ಪಾತ್ರವಹಿಸಿದ್ದು ಸುಳ್ಯದ ಕೆವಿಜಿ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ರವಿಕಾಂತ್ ಮತ್ತು ಡಾ.ಗೀತಾ ದೊಪ್ಪ ದಂಪತಿ. ಇನ್‌ಫಾರ್ಮೆಟಿ ಕ್ಲಿನಿಕ್‌ನಲ್ಲಿ ಜೋಪಾನವಾಗಿ ನೋಡಿಕೊಂಡರು. ಎರಡನೆಯ ಸಂದರ್ಭ ಕೂಡಾ ವಿಫಲವಾಯಿತು. ಮೂರನೇ ಬಾರಿಗೆ ತಾಯ್ತನ ಖಚಿತವಾಯಿತು. ಚಾಂದಿನಿಗಾದ ಖುಷಿ ಅಷ್ಟಿಷ್ಟಲ್ಲ. ಸೀಮಂತವೂ ಸಂಭ್ರಮದಿಂದ ನಡೆಯಿತು. ಮತ್ತದೇ ಕೊಂಕು ಮಾತು.ಹೆರಿಗೆಯ ವೇಳೆ ಚಾಂದಿನಿ ಸತ್ತರೆ ಮಗುವನ್ನು ಯಾರು ನೋಡುತ್ತಾರೆ?”. ಸ್ವಲ್ಪ ದಿನ ಇಂತ ಮಾತು ಚಾಂದಿನಿಯನ್ನು ಕಂಗೆಡಿಸಿದ್ದೂ ಇದೆ. ಆದರೆ ತನ್ನ ನಾಳೆಯಿದೆ ಎಂಬ ಥಿಯೆರಿಯನ್ನು ಇಲ್ಲಿಗೂ ಅಪ್ಲೈಮಾಡಿದರು. ಹಾಗೆ ಹಗುರಾದರು. ಏಳು ತಿಂಗಳಿಗೆ ಹೆರಿಗೆಯನ್ನು ಮಾಡಿಸಿದರು. “ಎಂತಾ ವಿಚಿತ್ರ ಪರಿಸ್ಥಿತಿ ಅಲ್ವಾ? ಆಸ್ಪತ್ರೆ ಯಲ್ಲಿ ನನ್ನ ತಂದೆ ತಾಯಿ ನಾನು ಬದುಕಲಿ ಅಂತ ಪ್ರಾರ್ಥಿಸುತ್ತಾರೆ. ನಾನಲ್ಲಿ ನನ್ನ ಮಗುವಿಗೆ ಏನೂ ಆಗದಿರಲಿ ಎಂದು ಪ್ರಾರ್ಥಿಸುತ್ತಿದ್ದೆ” ಎನ್ನುತ್ತಾರೆ ಚಾಂದಿನಿ. ಮಗು ಚಾನ್ವಿಗೆ ಈಗ ನಾಲ್ಕು ವರ್ಷ ಕಳೆದಿದೆ.
ಅಂದ ಹಾಗೆ, ಚಾನ್ವಿಯ ಜನ್ಮದಿನ ಡಾ.ಕೆ.ವಿ. ಚಿದಾನಂದರವರ ಜನ್ಮದಿನದಂದೇ…
ಚಾಂದಿನಿ ಧೈರ್ಯವಂತ ಹೆಣ್ಣು ಮಗಳು
“ಚಾಂದಿನಿ ಚಿಕ್ಕ ವಯಸ್ಸಿನಿಂದಲೇ ಅನೇಕ ತೊಂದರೆಗಳನ್ನು ಅನುಭವಿಸಿದವಳು. ಆದರೆ ಆಕೆಯ ದಿಟ್ಟ ಸ್ವಭಾವ, ಉತ್ತಮ ಜೀವನ ಶೈಲಿ, ವೈದ್ಯರು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಆಕೆಯನ್ನು ವಿಭಿನ್ನವಾಗಿ ನಿಲ್ಲಿಸುತ್ತದೆ” ಎನ್ನುತ್ತಾರೆ ಚಾಂದಿನಿಯ ಬಾಳಿಗೆ ಚಿಕ್ಕಂದಿನಿಂದಲೂ ಆರೋಗ್ಯ ಬೆಳಕಾಗಿರುವ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ, ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಕೆ.ವಿ.ಚಿದಾನಂದ.
“ಆಕೆ ಆರೋಗ್ಯದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸಿದವಳು. ಎಂ.ಐ.ಸಿ.ಯುನಲ್ಲಿ ಕಳೆದದ್ದೇ ಜಾಸ್ತಿ. ಪ್ರಖರ ಪರಿಣಾಮದ ಔಷಧಿ ಸೇವನೆಯಿಂದ, ಔಷಧಿ ರಿಯಾಕ್ಷನ್‌ನಿಂದ ಆಗಾಗ ಫಿಟ್ಸ್ ಕೂಡಾ ಬರುತ್ತಿತ್ತು. ಆದರೆ ಇದೆಲ್ಲವನ್ನು ಆಕೆ ಎದುರಿಸಿದ್ದು ವೈದ್ಯಲೋಕವೂ ಅಚ್ಚರಿ ಪಡುವಂತಹದ್ದು. ಈಗಲೂ ಹಲವು ಆಸ್ಪತ್ರೆಗಳು ಚಾಂದಿನಿಯನ್ನು ಪರೀಕ್ಷಾ ಸಂದರ್ಭದಲ್ಲಿ ಕರೆಸಿಕೊಳ್ಳುತ್ತಾರೆ” ಎನ್ನುತ್ತಾರೆ ಡಾ. ಕೆ.ವಿ. ಚಿದಾನಂದ
— ದುರ್ಗಾಕುಮಾರ್ ನಾಯರ್ ಕೆರೆ










