ಮಕ್ಕಳ ರಕ್ಷಣೆ ಮತ್ತು ಅವರ ಹಕ್ಕುಗಳ ಪೋಷಣೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ: ನ್ಯಾಯಾಧೀಶ ಬಿ. ಮೋಹನ್ ಬಾಬು
ಸುಳ್ಯ ತಾಲೂಕು ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ, ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ ಕ ಜಿಲ್ಲೆ, ಮಾಸೋತ್ಸವ ಸಮಿತಿ ದ.ಕ ಜಿಲ್ಲೆ ಹಾಗೂ ಅಜ್ಜಾವರ, ಮಂಡೆಕೋಲು ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವದ ಸುಳ್ಯ ತಾಲೂಕು ಮಟ್ಟದ ಪ್ರಾರಂಭೋತ್ಸವ ಕಾರ್ಯಕ್ರಮ ಅಜ್ಜಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನ.13 ಜುರುಗಿತು.

ಕಾರ್ಯಕ್ರಮವನ್ನು ಸುಳ್ಯದ ಸಿವಿಲ್ ನ್ಯಾಯಾಧೀಶರು ಹಾಗೂ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಬಿ.ಮೋಹನ್ ಬಾಬು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಕ್ಕಳ ಹಕ್ಕುಗಳ ಕಾಯ್ದೆಯ ಕುರಿತು ಮಾತನಾಡಿದ ಅವರು ಮಕ್ಕಳು ದೇಶದ ಸಂಪತ್ತಾಗಿದ್ದು ಆ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮಕ್ಕಳನ್ನು ಆರೈಕೆ ಮಾಡುವ ಪೋಷಕರುಗಳು ಕೂಡ ಮಕ್ಕಳ ಹಕ್ಕುಗಳ ಕುರಿತು ತಿಳಿದುಕೊಳ್ಳಬೇಕಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರಿಗಿರುವ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿ ಪೋಷಕರುಗಳಿಗೆ ಮಾತ್ರವಲ್ಲದೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಇದೆ ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ರವರು ಮಾತನಾಡಿ ಮಕ್ಕಳಿಗೆ ಏನಾದರೂ ಸಮಸ್ಯೆಗಳು ಉಂಟಾದಾಗ ಪೋಷಕರಾಗಲಿ ಅಥವಾ ಆ ಮಕ್ಕಳನ್ನು ವಿದ್ಯೆ ಕಲಿಸುವ ಶಿಕ್ಷಕರಾಗಲಿ ಮಕ್ಕಳ ಮೇಲೆ ನಡೆದ ದೌರ್ಜನ್ಯವನ್ನು ಬಚ್ಚಿಡುವ ಕೆಲಸವನ್ನು ಮಾಡಬಾರದು. ಅದನ್ನು ಕೂಡಲೆ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ನೀಡಬೇಕಾದದ್ದು ಮತ್ತು ಆ ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡುವುದು ಕೂಡ ಅವರ ಮೇಲಿನ ಜವಾಬ್ದಾರಿಯಾಗಿದೆ ಎಂದರು.ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಎಷ್ಟು ಮಹತ್ವವೋ ಅಷ್ಟೇ ಮುಖ್ಯವಾಗಿದೆ ಸಮಾಜದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಗಳು ಇದೆ ಎಂದು ಅವರು ಹೇಳಿದರು. ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಸಮಾಜದ ಪ್ರತಿಯೊಬ್ಬರಲ್ಲಿಯೂ ಕೂಡ ಅರಿವು ಇರಬೇಕು ಎಂದು ಹೇಳಿದರು. ಅಲ್ಲದೆ ಸೈಬರ್ ವಂಚನೆ,ಪೋಕ್ಸೋ ಕಾಯ್ದೆ , ಬಾಲ ಕಾರ್ಮಿಕತೆ ತಡೆಗಟ್ಟುವುದು, ಬಾಲ್ಯ ವಿವಾಹವನ್ನು ತಡೆಗಟ್ಟುವುದು ಮುಂತಾದ ವಿಷಯಗಳ ಕುರಿತು ಜಾಗೃತಿ ಮೂಡಿಸಿದರು.
















ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಮಾಸೋತ್ಸವ ಸಮಿತಿಯ ಸಂಚಾಲಕ
ಶಂಕರ್ ಪೆರಾಜೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಕ್ಕಳ ಹಕ್ಕುಗಳ ಮಸೋತ್ಸವ ಸಮಿತಿಯ ಸಂಚಾಲಕ ಮಹಮ್ಮದ್ ರಫೀಕ್ ದರ್ಬೆ, ಸುಳ್ಯದ ಹಿರಿಯ ಪತ್ರಕರ್ತ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರು ಆದ ಹರೀಶ್ ಬಂಟ್ವಾಳ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಅಜ್ಜಾವರ ಗ್ರಾ.ಪಂ.ಅಧ್ಯಕ್ಷೆ ದೇವಕಿ, ಮಂಡೆಕೋಲು ಗ್ರಾ.ಪಂ.ಅಧ್ಯಕ್ಷ ಕುಶಲ ಉದ್ದಂತಡ್ಕ , ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ಲಾ ಅಜ್ಜಾವರ, ಹಾಗೂ ಪಿಡಿಓ ಶ್ರೀಮತಿ ಜಯಮಾಲಾ, ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ,
ಹಸೈನಾರ್ ಜಯನಗರ ಉಪಸ್ಥಿತರಿದ್ದರು.

ಹಸೈನಾರ್ ಜಯನಗರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯ ಹಾಗೂ ತರಬೇತುದಾರ ನಾರಾಯಣ ಕಿಲಂಗೋಡಿ ನಿರೂಪಿಸಿ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ಉಪ ಸಂಚಾಲಕ ಆಶೋಕ್ ಪೀಚೆ ವಂದಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು, ಅಜ್ಜಾವರ ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಉಪಸಂಚಾಲಕರಾದ ನಜೀರ್ ಶಾಂತಿನಗರ, ಚಿದಾನಂದ ಕುತ್ಪಾಜೆ, ಶ್ರೀಮತಿ ಲಲಿತಾ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸುಜಾತ ಕದಿಕಡ್ಕ, ಸಂಘಟನಾ ಕಾರ್ಯದರ್ಶಿ ಮೋನಪ್ಪ ಕೊಳಗೆ, ಸದಸ್ಯರುಗಳಾದ ಉನೈಸ್ ಪೆರಾಜೆ, ಶ್ರೀಮತಿ ಮಂಜುಳಾ ಬಡಿಗೇರ್, ಹಿರಿಯರಾದ ಮಾಧವ ಗೌಡ ಸುಳ್ಯಕೊಡಿ ಮೊದಲಾದವರು ಸಹಕರಿಸಿದರು.










