ಭುವನೇಶ್ವರಿ ಎಂ.ರವರಿಗೆ ರಾಜ್ಯಮಟ್ಟದ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ

0

ತನ್ನ ವೃತ್ತಿಯ ಜೊತೆಗೆ ಸಮಾಜ ಸೇವೆ, ಕ್ರೀಡೆಗಳು ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ದಾದಿಯರಿಗೆ ನೀಡುವ ರಾಜ್ಯಮಟ್ಟದ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಮಂಗಳೂರಿನ ಜ್ಯೋತಿ ವೃತ್ತದ ಬಳಿಯಿರುವ ಕೆಎಂಸಿ ಆಸ್ಪತ್ರೆಯ ದಾದಿ ಭುವನೇಶ್ವರಿಯ ಎಂ.ರವರು ಪಡೆದುಕೊಂಡರು.

ಜೂ.12 ರಂದು ಬೆಂಗಳೂರು ವಿಧಾನ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡಿದರು.

ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ವೃತ್ತಿಯ ಜೊತೆಗೆ ಕ್ರೀಡೆ ಹಾಗೂ ಇನ್ನಿತರ ಹಲವು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ದಾದಿಯರಿಗೆ ಈ ಪ್ರಶಸ್ತಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬನ್ನೂರಿನ ಭುವನೇಶ್ವರಿ ಸೇರಿದಂತೆ ಒಟ್ಟು 10 ಮಂದಿ ಈ ಬಾರಿಯ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಕಳೆದ 21 ವರ್ಷಗಳಿಂದ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಭವನೇಶ್ವರಿಯವರು ಪ್ರಸ್ತುತ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪತಿ ಬನ್ನೂರು ನೆಕ್ಕಿಲದ ನಿವೃತ್ತ ಯೋಧ, ಕೆನರಾ ಬ್ಯಾಂಕ್ ಸಿಬ್ಬಂದಿ ಗೋಪಾಲ್ ಹಾಗೂ ಪುತ್ರರಾದ ಸ್ವಸ್ತಿಕ್ ಹಾಗೂ ಹಾರ್ದಿಕ್‌ರವರೊಂದಿಗೆ ಮಂಗಳೂರಿನ ಬಜಾಲ್‌ನಲ್ಲಿ ವಾಸ್ತವ್ಯವಿದ್ದಾರೆ. ಇವರು ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಮುಂಡೋಡಿ ಮನೆ ಆನಂದ ಗೌಡ ಹಾಗೂ ಗೌರಮ್ಮ ದಂಪತಿಯ ಪ್ರಥಮ ಪುತ್ರಿ.