ಹತ್ತಿ ಬತ್ತಿ ತಯಾರಿಸಿ ತಿಂಗಳಿಗೆ ಉತ್ತಮ ಆದಾಯ ಗಳಿಸುತ್ತಿರುವ ಮಹಿಳೆ

ಇದು ಆಶಾ ರಾಮಚಂದ್ರ ಶೇಟ್‌ರವರ ವರ್ಕ್ ಫ್ರಮ್ ಹೋಮ್ ಉದ್ಯೋಗ! ಮಹಿಳೆ ಮನಸ್ಸು ಬದಲಿಸಿ, ಛಲತೊಟ್ಟರೆ ಎಲ್ಲವೂ ಸಾಧ್ಯ

0

ಪ್ರತಿಯೊಬ್ಬರ ಮನೆಯಲ್ಲೂ ಪೂಜೆ ಮಾಡೆ ಮಾಡುತ್ತಾರೆ. ದೀಪ ಹಚ್ಚಲು ಹತ್ತಿಯ ಬತ್ತಿ ಬೇಕೇ ಬೇಕು. ಆದರೆ ಹತ್ತಿಯಿಂದ ಬತ್ತಿ ಮಾಡುವಷ್ಟು ಸಮಯ ಎಲ್ಲರಿಗೂ ಇರುವುದಿಲ್ಲ. ಬ್ಯುಸಿ ಇರುವವರು ಹತ್ತಿಯ ಬತ್ತಿಯನ್ನು ಹೊರಗೆ ಅಂಗಡಿಯಿಂದ ಮನೆಗೆ ತಂದು, ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಪ್ರತಿದಿನ ಪೂಜೆ ಕೆಲಸ ನಡೆಯುವುದರಿಂದ ಸದಾ ಕಾಲ ಬೇಡಿಕೆಯಲ್ಲಿರುವ ಬ್ಯುಸಿನೆಸ್ ಇದಾಗಿದೆ.

ಹೀಗಾಗಿ ಕಳೆದ 30 ವರ್ಷಗಳಿಂದ ಹತ್ತಿ ಬತ್ತಿ ತಯಾರಿಸಿ ತಿಂಗಳಿಗೆ ಉತ್ತಮ ಆದಾಯ ಗಳಿಸಿ ಜೀವನವನ್ನು ಸಾಗಿಸುತ್ತಿರುವ ಸುಳ್ಯದ ಮೊಗರ್ಪಣೆ ಸಮೀಪದ ಆಶಾ ರಾಮಚಂದ್ರ ಶೇಟ್‌ರವರ ನೆಣೆ ಬತ್ತಿ ತಯಾರಿಯ ಉದ್ಯೋಗ ಎಲ್ಲರಿಗೂ ಮಾದರಿಯಾಗಿದೆ.

ಮೂಲತಃ ಹೊನ್ನಾವರದವರಾದ ಆಶಾರವರು ವಿವಾಹವಾಗಿ ಸುಳ್ಯಕ್ಕೆ ಬಂದರು. ಊರಲ್ಲಿ ಅಜ್ಜಿ ಕಲಿಸಿದ ವಿದ್ಯೆ ದೀಪದ ಬತ್ತಿ ತಯಾರಿಯನ್ನು ಇಲ್ಲಿಯು ಮುಂದುವರಿಸಿದ ಇವರು ತನ್ನ ಪತಿಯ ಸಹಾಯದಿಂದ ದೂರದ ಪುತ್ತೂರು ಹಾಗೂ ಸುಳ್ಯದ ಅಂಗಡಿಗಳಿಗೆ ಚೀಲದಲ್ಲಿ ತುಂಬಿಸಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಮೊದ ಮೊದಲಿಗೆ ಮಾರುಕಟ್ಟೆ ತುಂಬಾ ಕಷ್ಟವಾಗುತ್ತಿತ್ತು. ಬಳಿಕ ಒಳ್ಳೆಯ ನೆಣೆ ಬತ್ತಿಯಾದ ಕಾರಣ ಉತ್ತಮ ಮಾರುಕಟ್ಟೆ ದೊರೆಯಲು ಪ್ರಾರಂಭವಾಯಿತು ಎನ್ನುತ್ತಾರೆ ಆಶಾರವರು.

ಇತ್ತಿಚೆಗೆ ಇವರಿಗೆ ಕೈ ನೋವು ಪ್ರಾರಂಭವಾದ ಕಾರಣ ಬತ್ತಿ ತಯಾರಿಯನ್ನು ಸ್ವಲ್ಪ ಕಡಿಮೆ ಮಾಡಿದ್ದು, ಮನೆಗೆ ಬಂದು ಕೇಳುವ ಮಾಮೂಲಿ ಗ್ರಾಹಕರಿಗೆ ಮಾತ್ರ ನೀಡುತ್ತಾರೆ. ಆದರೂ ತಿಂಗಳಿಗೆ 6 ರಿಂದ 8 ಸಾವಿರ ದುಡಿದು ತನ್ನ ಖರ್ಚನ್ನು ಅವರೇ ನೋಡಿಕೊಳ್ಳುತ್ತಾರೆ. ಇವರು ಬತ್ತಿ ಮಾಡಲು ಬೇಕಾದ ವಸ್ತುಗಳಾದ ಹತ್ತಿಯನ್ನು ಸ್ಥಳೀಯ ಮೆಡಿಕಲ್ ಸ್ಟೋರ್‌ಗಳಿಂದ, ಕೈಗೆ ಉಜ್ಜಲು ಪ್ರಮುಖವಾಗಿ ಬೇಕಾದ ವಿಭೂತಿ ಉಂಡೆಯನ್ನು ಸ್ಥಳೀಯ ಅಂಗಡಿಯಿಂದ ಖರೀದಿಸುತ್ತಾರೆ.

1ಬಂಡಲ್ ಬತ್ತಿಗೆ 250 ರೂ.ಗಳಿದ್ದು ಇದರಿಂದ 10,000 ನೆಣೆ ಬತ್ತಿ ತಯಾರಿಯಾಗುತ್ತದೆ. ಮಾರಾಟ ಮಾಡುವಾಗ 1 ಕಟ್ಟಿನಲ್ಲಿ 100 ಹಾಕಿ ಕಟ್ಟಬೇಕು, 10 ಕಟ್ಟಿನಲ್ಲಿ 1000 ಆಗುತ್ತದೆ. 250 ರೂ.ಬಂಡಲ್‌ನಲ್ಲಿ ಒಟ್ಟು 750 ಲಾಭ ಸಿಗುತ್ತದೆ. ಆಶಾರವರ ಖರ್ಚಿಗೆ ಸಾಕುತ್ತದೆ.

ಇವರ ನೆಣೆ ಬತ್ತಿ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೂ ಹೋಗಿದೆ. ಇವರ ಸಂಬಂಧಿಕರು ಹೋಗುವಾಗ ತೆಗೆದುಕೊಂಡು ಹೋಗಿದ್ದರು. ಹಾಗೂ ಸುಳ್ಯದ ಚೆನ್ನಕೇಶವ ದೇವಾಲಯಕ್ಕು ಇವರ ಸಂಬಂಧಿಕರ ಮುಖಾಂತರ ನೀಡುತ್ತಿದ್ದರು. ಬತ್ತಿ ತಯಾರಿಸುವಾಗ ಕೈಯಲ್ಲಿ ತಯಾರಿಸಬೇಕು, ಅದಕ್ಕೆ ಅದರದೇ ಆದ ವಿಧಾನವಿದೆ. ದೇವರ ಕಾರ್ಯ ಆದ ಕಾರಣ ಮಡಿ ಯಾಗಿರಬೇಕು.

ಆಶಾರವರದ್ದು ಒಂದು ವರ್ಕ್ ಫ್ರಮ್ ಹೋಮ್ ಕೆಲಸದ ತರ, ಮನೆಯ ಕೆಲಸ ಎಲ್ಲಾ ಮುಗಿಸಿಕೊಂಡು ಬಳಿಕ ಬತ್ತಿ ತಯಾರಿಸಲು ಕುಳಿತುಕೊಳ್ಳುತ್ತಾರೆ. ರಾತ್ತಿ 10 ಗಂಟೆ ತನಕ ಈ ಕೆಲಸ ಮಾಡುತ್ತಾರೆ. ಇವರ ವಿವಾಹವಾಗಿ 28 ವರ್ಷವಾಯಿತು. ಅಲ್ಲಿಂದ ಇಲ್ಲಿಯವರೆಗೂ ಇವರು ಈ ಕೆಲಸವನ್ನು ಮಾಡುವುದು ಬಿಟ್ಟಿಲ್ಲ , ಮಾಡುತ್ತಲೇ ಇದ್ದಾರೆ. ಮುಂದೆಯು ಮಾಡುತ್ತೇನೆ ಎನ್ನುತ್ತಾರೆ.

ಈ ಬತ್ತಿ ತಯಾರಿಸಲು ಮಿಶನ್ ಬಂದಿದ್ದು, ಇವರ ಮಗ ಬತ್ತಿ ತಯಾರಿಯ ಮಿಷನ್ ತಂದು ಕೊಡುತ್ತೇನೆ ಹೇಳುತ್ತಾರೆಯಂತೆ. ಆದರೆ ಇವರಿಗೆ ಅದರ ಅವಶ್ಯಕತೆಯಿಲ್ಲ ಎನ್ನುತ್ತಾರೆ. ನನಗೆ ಕೈಯಲ್ಲೇ ಮಾಡಿ ರೂಡಿ, ಒಂದು ವೇಳೆ ಮಿಷನ್ ತಂದರೆ ಅದರಲ್ಲಿ ತುಂಬಾ ಮಾಡಬಹುದು ಅದನ್ನು ಮಾರಾಟ ಮಾಡಲು ಕಷ್ಟವಾಗಬಹುದು. ಹಾಗೂ ಅದಕ್ಕೆ ಬಂಡವಾಳ ಹಾಕಾಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಈಗಿನ ಕಾಲದಲ್ಲಿ ಮನೆಯಲ್ಲಿ ಕುಳಿತು ಏನಾದರು ಕೆಲಸ ಮಾಡಬೇಕು ಅನ್ನುವ ಯೋಚನೆ ಮಾಡುವ ಮಹಿಳೆಯರಿಗೆ ಇದು ಉತ್ತಮ ಮಾರ್ಗವಾಗಿದೆ. ನಿಮ್ಮ ಖರ್ಚಿಗೆ ಆರಾಮವಾಗಿ ಹಣ ಸಂಪಾದನೆ ಮಾಡಬಹುದು. ಯಾಕೆಂದರೆ ಸದಾ ಕಾಲ ಬೇಡಿಕೆಯಲ್ಲಿರುವ ಬ್ಯುಸಿನೆಸ್ ಇದಾಗಿದೆ. ಮನೆಗೆ ಬಂದವರಿಗು ಇದನ್ನು ಸೇಲ್ ಮಾಡಬಹುದು. ಜೊತೆಗೆ ಇದನ್ನು ಕಲಿಯಲು ಆಸಕ್ತಿ ಇದ್ದವರಿಗೆ ಟ್ರೈನಿಂಗ್ ಕೂಡ ಕೊಡುತ್ತಾರೆ ಆಶಾರವರು.


ಇದರೊಂದಿಗೆ ಊರಿನ ದನ, ಕೋಳಿ ಸಾಕುತ್ತಿದ್ದಾರೆ. ತನ್ನ ಮನೆಯ ಬಟ್ಟೆಯ ಟೈಲರಿಂಗ್ ಕೆಲಸವನ್ನು ಇವರೇ ಮಾಡುತ್ತಾರೆ. ಪತಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಪುತ್ರ ಆದರ್ಶ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮ್ಯಾನೇಜರ್ ಆಗಿದ್ದು, ಮಂಡ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ಮೂಲಕ ಹೇಳುವುದಾದರೆ ಕಲಿತ ವಿಧ್ಯೆ ಎಂದಿಗೂ ಕೈ ಬಿಡುವುದಿಲ್ಲ. ಮಹಿಳೆ ಮನಸ್ಸು ಬದಲಿಸಿ, ಛಲತೊಟ್ಟರೆ ಎಲ್ಲವೂ ಸಾಧ್ಯ. ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದೂ ಬೇಸರವಾಗಿ ಕಾಣುವುದಿಲ್ಲ ಎಂಬ ಗಾಂಧಿಜಿಯವರ ನುಡಿಯಂತೆ, ಮಹಿಳೆಯರು ತಾವು ಮಾಡುವ ಪ್ರತಿ ಕೆಲಸವನ್ನೂ ತಮ್ಮ ಕರ್ತವ್ಯವೆಂದೇ ಭಾವಿಸುತ್ತಾರೆ. ಹಾಗಾಗಿ ಕುಟುಂಬ ನಿರ್ವಹಣೆಯಲ್ಲಿ ಬಹುಪಾಲು ಕೆಲಸವನ್ನು ಜವಾಬ್ದಾರಿಯುತವಾಗಿ ಯಾವುದೇ ಬೇಸರವಿಲ್ಲದೆ ನಿಭಾಯಿಸುತ್ತ ನೊವು ಮರೆತು ನಲಿವಿನಿಂದ ಮುನ್ನಡೆಯುತ್ತಾರೆ. ಇದಕ್ಕೆ ಆಶಾ ರಾಮಚಂದ್ರ ಶೇಣ್‌ರವರೆ ಉದಾಹರಣೆ.

ಬರಹ: ಪೂಜಾಶ್ರೀ ವಿತೇಶ್ ಕೋಡಿ