ಕುಡಿಯುವ ನೀರಿಗಾಗಿ ಸುಳ್ಯಕ್ಕೆ 58 ಕೋಟಿ

0

ಸುಳ್ಯ ನಗರಕ್ಕೆ ಶುದ್ಧೀಕೃತ ಕುಡಿಯುವ ನೀರು ಪೂರೈಕೆಗಾಗಿ ರಾಜ್ಯ ಸರಕಾರ ೫೭.೬ ಕೋಟಿ ರೂ.ಗಳ ಯೋಜನೆಗೆ ಮಂಜೂರಾತಿ ನೀಡಿದ್ದು ಈಗಾಗಲೇ ಟೆಂಡರ್ ಆಗಿ ಗುತ್ತಿಗೆದಾರರ ನೇಮಕವಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯ ಆರಂಭಿಸಿದೆ.
ಸುಳ್ಯ ನಗರದಲ್ಲಿ ಶುದ್ಧೀಕೃತ ಕುಡಿಯುವ ನೀರಿನ ಸರಬರಾಜಿಗಾಗಿ ೪೦ ವರ್ಷಗಳ ಹಿಂದೆ ರೂಪಿಸಿದ್ದ ಯೋಜನೆ ಇರುವುದರಿಂದ ಈಗಿನ ಸುಳ್ಯಕ್ಕೆ ಬೇಕಾದ ವ್ಯವಸ್ಥೆ ರೂಪಿಸಬೇಕೆಂದು ಹಲವಾರು ವರ್ಷಗಳಿಂದ ಬೇಡಿಕೆ ಇತ್ತು. ಎನ್.ಎ.ರಾಮಚಂದ್ರರು ನ.ಪಂ. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೬೦ ಕೋಟಿ ರೂ.ಗಳ ಯೋಜನೆಯ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲ್ಪಟ್ಟಿತ್ತು. ಅಧಿಕಾರಿಗಳ ಮಟ್ಟದಲ್ಲಿ ಪರಾಮರ್ಶೆ ನಡೆದು ಕಳೆದ ಸರಕಾರದ ಅವಧಿಯಲ್ಲಿ ನಡೆದ ಫಾಲೋ ಅಪ್ ನ ಪರಿಣಾಮವಾಗಿ ೫೭.೬ ಕೋಟಿ ರೂ.ಗಳ ಯೋಜನೆಗೆ ಸರಕಾರ ತಾಂತ್ರಿಕ ಮಂಜೂರಾತಿ ಹಾಗೂ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. ಬಳಿಕ ಹಣಕಾಸು ಇಲಾಖೆಯ ಒಪ್ಪಿಗೆ ದೊರೆತು ಟೆಂಡರ್ ಪ್ರಕ್ರಿಯೆ ನಡೆದು ಗುತ್ತಿಗೆದಾರರು ನಿಗದಿಯಾಗಿದ್ದಾರೆ.
ಯೋಜನೆಯ ವಿವರ :
ಇದೇ ವೇಳೆ ಪಯಸ್ವಿನಿ ನದಿಗೆ ೧೭ ಕೋಟಿ ರೂ. ವೆಚ್ಚದ ಅಣೆಕಟ್ಟು ನಿರ್ಮಾಣ ವಾಗಿರುವುದು ಹಾಗೂ ನಗರೋತ್ಥಾನ ನಿಧಿಯಿಂದ ೨ ಕೋಟಿ ರೂ. ವೆಚ್ಚದ ಜಾಕ್ ವೆಲ್ ನಿರ್ಮಾಣ ಆಗುತ್ತಿರುವುದು ಈ ಯೋಜನೆಗೆ ಪೂರಕವಾಗಿದೆ.
ಅಮೃತ್ ೨ ಯೋಜನೆಯಲ್ಲಿ ಈ ಶುದ್ಧೀಕೃತ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ೧೦೦ ಎಚ್‌ಪಿ ಯ ೨ ಪಂಪ್ ಗಳು ಅಳವಡಿಕೆಯಾಗಲಿವೆ. ಇದರನ್ವಯ ಕುರುಂಜಿಗುಡ್ಡೆಯಲ್ಲಿ ನೀರು ಶುದ್ದೀಕರಣ ಘಟಕ ಹಾಗು ೧೦ ಲಕ್ಷ ಲೀಟರ್ ಸಾಮಥದ ನೀರಿನ ಟ್ಯಾಂಕ್ ನಿರ್ಮಾಣಗೊಳ್ಳಲಿದೆ. ಅಲ್ಲದೆ ಬೀರಮಂಗಲ, ಬೋರುಗುಡ್ಡೆ, ಹಾಗೂ ಕಲ್ಲುಮುಟ್ಲಲ್ಲಿ ತಲಾ ೨.೫ ಲಕ್ಷ ಲೀಟರ್ ಹಾಗೂ ಜಯನಗರದಲ್ಲಿ ೫ ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣಗೊಳ್ಳಲಿದೆ. ಬೋರುಗುಡ್ಡೆಯಲ್ಲಿ ಖಾಸಗಿಯವರ ೧೦ ಸೆಂಟ್ಸ್ ಸ್ಥಳ ಖರೀದಿಸಿ ಟ್ಯಾಂಕ್ ನಿರ್ಮಿಸಲಾಗುವುದೆಂದು ತಿಳಿದುಬಂದಿದೆ.
“ಈಗ ಒಟ್ಟು ೩೫ ಕಿ.ಮೀ. ಉದ್ದದ ಸಪ್ಲೈ ಪೈಪ್ ಇದ್ದು ಅದರಲ್ಲಿ ೭.೫ ಕಿ.ಮೀ. ಉದ್ದದ ಪೈಪನ್ನು ಮಾತ್ರ ಉಳಿಸಿಕೊಂಡು ಒಟ್ಟು ೭೦ ಕಿ.ಮೀ. ಉದ್ದಕ್ಕೆ ಹೊಸ ಸಪ್ಲೈ ಪೈಪ್ ಲೈನ್‌ಗಳನ್ನು ಅಳವಡಿಸಲಾಗುತ್ತದೆ. ಸಾಧ್ಯವಾದಷ್ಟು ಕಡೆ ರಸ್ತೆಯ ಪಕ್ಕದಲ್ಲಿ ಹೊಸ ಪೈಪ್ ಲೈನ್ ಅಳವಡಿಸಲಾಗುತ್ತದೆ” ಎಂದು ನ.ಪಂ. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ತಿಳಿಸಿದ್ದಾರೆ.
ಈಗ ಇರುವ ಪಂಪ್ ಹೌಸ್ ನಲ್ಲಿ ೫೦ ಎಚ್.ಪಿ. ಯ ೨ ಪಂಪು ಗಳಿವೆ. ಅದರ ನೀರನ್ನು ಶುದ್ಧೀಕರಿಸುವ ಕಲ್ಲುಮುಟ್ಲು ಸ್ಥಾವರ ಈ ಹಿಂದಿನಂತೆಯೇ ಕಾರ್ಯ ನಿರ್ವಹಿಸುತ್ತದೆ. ಹೊಸದಾಗಿ ಅಳವಡಿಸುವ ೧೦೦ ಎಚ್‌ಪಿ ಯ ಎರಡು ಪಂಪುಗಳ ನೀರನ್ನು ಕುರುಂಜಿಗುಡ್ಡೆಗೆ ತಂದು ಶುದ್ದೀಕರಿಸಿ ಹೊಸದಾಗಿ ೫ ಕಡೆ ನಿರ್ಮಿಸುವ ನೀರಿನ ಟ್ಯಾಂಕ್‌ಗಳಿಗೆ ತುಂಬಿಸಿ ಅಲ್ಲಿಂದ ಸರಬರಾಜು ಮಾಡಲಾಗುವುದು. ಬೆಂಗಳೂರಿನ ಶುಭ ಸೇಲ್ಸ್ ಕಂಪೆನಿಯವರು ಕಂಟ್ರಾಕ್ಟ್ ವಹಿಸಿಕೊಂಡಿದ್ದು, ಕಾಮಗಾರಿ ಪೂರ್ತಿಗೊಳಿಸಲು ಎರಡು ವರ್ಷಗಳ ಅವಧಿ ಇದೆ. ಡಿಸೆಂಬರ್‌ನೊಳಗೆ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆ ಇದೆ” ಎಂದು ಕೆಯುಡಬ್ಲ್ಯು ಎಸ್ ಇಂಜಿನಿಯರ್ ಗಳು ತಿಳಿಸಿದ್ದಾರೆ.