ಅ.20ರಿಂದ 28ರವರೆಗೆ ಸುಳ್ಯದಲ್ಲಿ 52ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾಕ್ಕೆ ಅದ್ದೂರಿ ಸಿದ್ಧತೆ

0

ಉತ್ಸವ ಸಮಿತಿ ಪದಾಧಿಕಾರಿಗಳಿಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಸುಳ್ಯದ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಹಾಗೂ ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ 52ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ‘ಸುಳ್ಯ ದಸರಾ’ ಕಾರ್ಯಕ್ರಮವು ಅ.20 ರಿಂದ ಅ.28ರವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರೀ ಶಾರದಾಂಬಾ ಕಲಾ ವೇದಿಕೆಯಲ್ಲಿ ನಡೆಯಲಿದ್ದು,ಈ ಬಾರಿ ಅದ್ದೂರಿ ಸುಳ್ಯ ದಸರಾ ಉತ್ಸವಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ ಹಾಗೂ ದಸರಾ ಉತ್ಸವ ಸಮಿತಿಯ
ಪದಾಧಿಕಾರಿಗಳು ಅ.2ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್‌ದಾಸ್’ ಅವರು ಮಾತನಾಡಿ ಈ ಬಾರಿ ಶೋಭಾಯಾತ್ರೆಯ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು ಮಧ್ಯಾಹ್ನದ ಬಳಿಕ 3 ಗಂಟೆಗೆ ಸರಿಯಾಗಿ ಶೋಭಾಯಾತ್ರೆ ಹೊರಡಲಿದೆ. ರಾತ್ರಿ 12 ಗಂಟೆಗೆ ಶೋಭಾಯಾತ್ರೆ ಮುಕ್ತಾಯವಾಗಲಿದ್ದು ಒಂದು ಗಂಟೆಯ ಬಳಿಕ ಚಂದ್ರಗ್ರಹಣ ಇರುವ ಕಾರಣ ರಾತ್ರಿ ಒಂದು ಗಂಟೆಯ ಮೊದಲು ಮೂರ್ತಿಯ ಜಲಸ್ತಂಭನ ನಡೆಯಬೇಕಾಗಿದೆ ಎಂದು ಹೇಳಿದರು.

ಶ್ರೀ ಶಾರದಾಂಬಾ ಸೇವಾ ದಸರಾ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ನಾರಾಯಣ ಕೇಕಡ್ಕ ಹಾಗೂ ದಸರಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಮಾತನಾಡಿ ‘ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾಕ್ಕೆ ಅದ್ಧೂರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.ವಿವಿಧ ಧಾರ್ಮಿಕ ಹಾಗೂ ವೈವಿಧ್ಯಮಯ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುಳ್ಯ ದಸರಾ ಉತ್ಸವ ಈ ಬಾರು ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಿದರು.

ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ ಅವರು ಕಾರ್ಯಕ್ರಮದ ಕುರಿತು ವಿವರ ನೀಡಿದರು
. ‘ಅ.20ರಂದು ಪೂ.9.30ಕ್ಕೆ ಸುಳ್ಯದ ಜ್ಯೋತಿ ವೃತ್ತದಿಂದ ಶಾರದಾ ದೇವಿ ಮೂರ್ತಿಯ ಪ್ರತಿಷ್ಠಾಪನಾ ಮೆರವಣಿಗೆ ನಡೆದು 10.47 ಕ್ಕೆ ಶ್ರೀ ಶಾರದಾಂಬಾ ವೇದಿಕೆಯಲ್ಲಿ ದೇವಿಯ ಪ್ರತಿಷ್ಠೆ ನಡೆಯಲಿದೆ.
ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ ನಡೆಯಲಿದೆ. ಅ. 20ರಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ ಗಾನ ನೃತ್ಯ ಅಕಾಡೆಮಿಯ ವತಿಯಿಂದ ನೃತ್ಯ ಸಂಗಮ ಮತ್ತು ನೃತ್ಯ ರೂಪಕ ನಡೆಯಲಿದೆ.
ಅ.21ರಂದು ಸಂಜೆ 6.30ರಿಂದ ಭಜನೆ 7.30ರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಅ.22 ರಂದು ಸಂಜೆ 6.30ರಿಂದ ಭಜನೆ 7.30ರಿಂದ ಜಾನಪದ ಕುಣಿತ ಮತ್ತು ನೃತ್ಯ ವೈಭವ ನಡೆಯಲಿದೆ. ಅ.23 ರಂದು ಸಂಜೆ 6.30ರಿಂದ ಭಜನೆ 7.30ರಿಂದ ಡ್ಯಾನ್ಸ್ ಡ್ಯಾನ್ಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.24 ರಂದು ಬೆಳಿಗ್ಗೆ 6.21ರಿಂದ ಮಕ್ಕಳಿಗೆ ಅಕ್ಷರಾಭ್ಯಾಸ, ಸಂಜೆ 6.30ರಿಂದ ಭಜನೆ, ರಾತ್ರಿ 7.30ರಿಂದ ಸಾಂಸ್ಕೃತಿಕ ಸಂಜೆ ನಡೆಯಲಿದೆ.

ಅ.25 ರಂದು ಸಂಜೆ 6.30ರಿಂದ ಭಜನೆ 7.30ರಿಂದ ಜಾನಪದ ನೃತ್ಯ ವೈಭವ, ರಾತ್ರಿ 9ರಿಂದ ಯಕ್ಷಗಾನ ನಡೆಯಲಿದೆ. ಅ.26 ರಂದು ಬೆಳಿಗ್ಗೆ 8ರಿಂದ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಮಹಾಗಣಪತಿ ಹವನ, ಚಂಡಿಕಾ ಮಹಾಯಾಗ ನಡೆಯಲಿದೆ. 12.30ಕ್ಕೆ ಪೂರ್ಣಾಹುತಿ, ಮಹಾ ಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಭಜನೆ 7.30ರಿಂದ ನೃತ್ಯೋತ್ಸವ ನಡೆಯಲಿದೆ.

ಅ.27 ರಂದು ಸಂಜೆ 6.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ. 7.30ರಿಂದ ಸಂಗೀತ ರಸಮಂಜರಿ, ರಾತ್ರಿ 10ಕ್ಕೆ ಶ್ರೀ ದೇವಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ವೈಭವದ ಮಹಾಪೂಜೆ ನಡೆಯಲಿದೆ.

ಅ.28ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆಯಾಗಿ ಸಂಜೆ 3ರಿಂದ ಶ್ರೀ ದೇವಿಗೆ ವಿಶೇಷ ಅಲಂಕಾರದೊಂದಿಗೆ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪದಲ್ಲಿ ಶ್ರೀ ದೇವಿಯ ಶೋಭಾಯಾತ್ರೆಯು ಶ್ರೀ ಶಾರದಾಂಬ ಕಲಾವೇದಿಕೆಯಿಂದ ಹೊರಟು ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬರಲಿದ್ದು , ಶೋಭಾಯಾತ್ರೆಗೆ ಜನರ ಮೈಮನ ರೋಮಾಂಚನಗೊಳಿಸುವ ಚಲಿಸುವ ಸ್ತಬ್ದ ಚಿತ್ರಗಳು, ಕಿವಿಗಪ್ಪಳಿಸುವ ನಾಸಿಕ್ ಬ್ಯಾಂಡ್‌ನ ಅಬ್ಬರ, ಕೊಂಬು, ಕಹಳೆ, ವಾಲಗ, ವಿಶೇಷ ಸಿಡಿಮದ್ದು, ಇನ್ನಿತರ ಹತ್ತು ಹಲವು ಆಕರ್ಷಣಿಗಳೊಂದಿಗೆ ನೋಡುಗರ ಕಣ್ಣಿಗೆ ಹಬ್ಬ ನೀಡಲಿದ್ದು, ಪಯಸ್ವಿನಿ ನದಿಯಲ್ಲಿ ಜಲಸ್ಥಂಭನದ ಮೂಲಕ ಸುಳ್ಯದ ಅದ್ದೂರಿ ದಸರಾ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದಸರಾ ಉತ್ಸವ ಸಮಿತಿಯ ಅಧ್ಯಕ್ಷೆ , ಶಾಸಕಿ ಕು. ಭಾಗೀರಥಿ ಮುರುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಡಿಯಾಲಬೈಲು, ಕೋಶಾಧಿಕಾರಿ ಪುರುಷೋತ್ತಮ ಕೆ., ಪದಾಧಿಕಾರಿಗಳಾದ ರಾಜು ಪಂಡಿತ್‌, ಸತೀಶ್ ಎನ್.ಕೆ. ಮಂಜುನಾಥ ಬಳ್ಳಾರಿ, ದೀಪಕ್ ಪಿ.ಎಸ್, ಕುಸುಮಾಧರ ರೈ ಬೂಡು, ಪದ್ಮನಾಭ ಅರ್ಭಡ್ಕ, ಹೇಮನಾಥ ಕೇರ್ಪಳ ಉಪಸ್ಥಿತರಿದ್ದರು.