ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನಡೆಸುವುದಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆದುಕೊಂಡಿರುವ ರಾಜ್ಯ ಸರಕಾರದ ನಿರ್ಣಯ ಸ್ವಾಗತಾರ್ಹ ಮತ್ತು ಸಮರ್ಥನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಹೇಳಿದ್ದಾರೆ.
ಅವರು ಇಂದು ಸುಳ್ಯ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದರು.
ಹಿಂದೆ ಗುಜರಾತ್ನಲ್ಲಿ ರಾಜ್ಯಸಭಾ ಚುನಾವಣೆ ನಡೆಯುವಾಗ ಕಾಂಗ್ರೆಸ್ನ ಹಿರಿಯ ನಾಯಕ ಅಹಮ್ಮದ್ ಪಟೇಲ್ರನ್ನು ಸೋಲಿಸಲು ಬಿಜೆಪಿ ನಾಯಕರು ಷಡ್ಯಂತ್ರ ಮಾಡಿದ್ದರು. ಆ ಸಂದರ್ಭದಲ್ಲಿ ಗುಜರಾತ್ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ಆಪರೇಷನ್ ಕಮಲ ಆಗದಂತೆ ನೋಡಿಕೊಂಡು ಅಹಮ್ಮದ್ ಪಟೇಲ್ರ ಗೆಲುವಿಗೆ ಡಿ.ಕೆ.ಶಿವಕುಮಾರ್ ಕಾರಣರಾಗಿದ್ದರು. ಈ ರಾಜಕೀಯ ದ್ವೇಷದಿಂದ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ಷಾ ಅವರ ಸೂಚನೆಯಂತೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಮೌಖಿಕ ಆದೇಶದ ಮೇರೆಗೆ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆಗೆ ಸಿಬಿಐ ಗೆ ಅನುಮತಿ ನೀಡಿದ್ದಾರೆ. ಇದು ಸಂಪೂರ್ಣ ಕಾನೂನುಬಾಹಿರವಾಗಿದ್ದು, ಅದನ್ನು ಈಗ ಸರಕಾರ ಹಿಂಪಡೆಯಲು ತೀರ್ಮಾನಿಸಿರುವುದು ಸರಿಯಾಗಿದೆ ಎಂದು ಧನಂಜಯ ಅಡ್ಪಂಗಾಯ ಹೇಳಿದರು.
ಡಿ.ಕೆ.ಶಿವಕುಮಾರ್ ಆ ಸಂದರ್ಭದಲ್ಲಿ ಶಾಸಕರಾಗಿದ್ದು, ಅವರ ವಿರುದ್ಧ ಕೇಸು ದಾಖಲಿಸಬೇಕಿದ್ದರೆ ಸ್ಪೀಕರ್ರವರ ಅನುಮತಿ ಪಡೆಯಬೇಕಿತ್ತು. ಅಡ್ವಕೇಟ್ ಜನರಲ್ರವರ ಅಭಿಪ್ರಾಯ ಪಡೆಯಬೇಕಿತ್ತು. ಇದಾವುದನ್ನೂ ಮಾಡದೆ ಸಿಬಿಐಗೆ ತನಿಖೆಗೆ ಒಪ್ಪಿಸಿರುವುದು ತಪ್ಪು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಹೇಳಿದರು.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಧನಂಜಯ ಅಡ್ಪಂಗಾಯರು “ಅದಾಗಲೇ ಡಿ.ಎಕ.ಶಿವಕುಮಾರ್ ವಿರುದ್ಧ ಐಟಿ ಮತ್ತು ಇಡಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಅದಲ್ಲದೆ ಕಿರುಕುಳದ ಉದ್ಧೇಶದಿಂದಲೇ ಸಿಬಿಐ ತನಿಖೆಗೆ ನಿರ್ದೇಶಿಸಲಾಗಿತ್ತು. ಇದು ತಪ್ಪಾಗಿರುವುದರಿಂದ ನಮ್ಮ ಸರಕಾರ ಸಿಬಿಐಗೆ ನೀಡಿರುವ ಅನುಮತಿಯನ್ನು ಹಿಂತೆಗೆದುಕೊಂಡಿದೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಟಿ.ಎಂ. ಶಹೀದ್, ಕೆಪಿಸಿಸಿ ಸದಸ್ಯೆ ಸರಸ್ವತಿ ಕಾಮತ್,ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಉಪಸ್ಥಿತರಿದ್ದರು.
ಸುಳ್ಯದಲ್ಲಿ ೧೧೦ ಕೆವಿ ಸಬ್ಸ್ಟೇಷನ್ ಕೆಲಸ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಕಾಮಗಾರಿಗೆ ಅಡ್ಡಿಪಡಿಸಲು ಕೆಲವರಿಂದ ತಡೆಯಾಜ್ಞೆ ತರಿಸುವ ಪ್ರಯತ್ನವನ್ನೂ ಬಿಜೆಪಿ ಮಾಡುತ್ತಿದೆ ಎಂಬ ಮಾಹಿತಿ ನಮಗೆ ದೊರೆತಿದೆ ಎಂದು ಹೇಳಿದ ಧನಂಜಯ ಅಡ್ಪಂಗಾಯರು, ಗೃಹಲಕ್ಷ್ಮಿ ಯೋಜನೆಯಡಿ ಹಣ ಬಾರದ ಅರ್ಹ ಫಲಾನುಭವಿಗಳ ಖಾತೆಯ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಎಲ್ಲರಿಗೂ ಹಣ ದೊರೆಯುವಂತೆ ಮಾಡುವ ಅಭಿಯಾನವೊಂದನ್ನು ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಹೇಳಿದರು.