ಜಟ್ಟಿಪಳ್ಳ- ನೀರಬಿದಿರೆ ಹಾಗೂ ಸುಳ್ಯ ನಗರದ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ರಸ್ತೆಗಿಳಿದ ರಿಕ್ಷಾ ಚಾಲಕರು : ನ.ಪಂ. ಎದುರು ಪ್ರತಿಭಟನೆ

0

ರಾಜಕೀಯದಲ್ಲಿ ಹೊಂದಾಣಿಕೆ ಮಾಡುವ ಜನಪ್ರತಿನಿಧಿಗಳು, ಅಭಿವೃದ್ಧಿಯಲ್ಲಿ ಹೊಂದಾಣಿಕೆ ಯಾಕಿಲ್ಲ?

ಸುಳ್ಯದ‌ ಜಟ್ಟಿಪಳ್ಳ ದಿಂದ – ನೀರಬಿದಿರೆ ರಸ್ತೆ ಹಾಗೂ ನಗರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘ ಬಿ.ಎಂ.ಎಸ್. ಸಂಯೋಜಿತ ಇವರು ಸುಳ್ಯ‌ನಗರ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಯಲ್ಲಿ ಮಾತನಾಡಿದ ಅಟೋ ಚಾಲಕರ ಸಂಘದ ಕಾನೂನು ಸಲಹೆಗಾರರಾದ ಭಾಸ್ಕರ್ ರಾವ್ ರವರು “ಸುಳ್ಯ ಜಟ್ಟಿಪಳ್ಳ – ನೀರಬಿದಿರೆ ಹಾಗೂ ನಗರದ ವಿವಿಧ ರಸ್ತೆಯ ಅಭಿವೃದ್ಧಿ ಗೆ ಆಗ್ರಹಿಸಿ ನಾವು ಈ ಹಿಂದೆ ಮನವಿ ಸಲ್ಲಿಸಿದರೂ ಇದುವರೆಗೆ ಇಲ್ಲಿಯ ಆಡಳಿತ, ಜನಪ್ರತಿನಿಧಿಗಳು ಸ್ಪಂದಿಸಿಲ್ಲ. ರಸ್ತೆ ದುರಸ್ತಿಗಾಗಿ ಪ್ರತಿಭಟನೆ ಅಗತ್ಯವಿದೆ. ಇಂದು ತಾತ್ಕಾಲಿಕ ಪ್ರತಿಭಟನೆ. ನ.ಪಂ. ನಮ್ಮ ಮನವಿಗೆ ಸ್ಪಂದನೆ ನೀಡಿದ್ದರೆ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ರಿಕ್ಷಾ ಯುನಿಯನ್ ಮಾಜಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ ಮಾತನಾಡಿ, ನಾವು ರಸ್ತೆ ದುರಸ್ತಿಗೆ ಮನವಿ ನೀಡಿದ್ದೇವೆ. ನಮ್ಮನ್ನು ನ.ಪಂ. ನವರು ಇದುವರೆಗೆ ಮಾತನಾಡಿಲ್ಲ. ಅವರಲ್ಲಿ ನಿರ್ಲಕ್ಷ್ಯ ತನವಿದೆ. ಸಾರ್ವಜನಿಕರಿಗೆ ತೊಂದರೆಯಾದಾಗ ನಮ್ಮ ಯೂನಿಯನ್ ಸುಮ್ಮನಿರದೇ ಪ್ರತಿಭಟಿಸುತ್ತದೆ. ನ.ಪಂ. ಎದುರು ಇದ್ದ ಕಸ ತೆರವು ಹಾಗೂ ಸುಳ್ಯಕ್ಕೆ ಕುಡಿಯುವ ನೀರಿನ ವ್ಯವಸ್ಥೆ ನ.ಪಂ. ನವರು ಮಾಡಿದ್ದಾರೆ. ಅದನ್ನು ನಾವು ಶ್ಲಾಘಿಸುತ್ತೇವೆ. ಆದರೆ ಇವರು ಎರಡು ಕೆಲಸ ಒಳ್ಳೆದು ಮಾಡಿ 100 ಕೆಲಸ ಮಾಡದೇ ಸುಮ್ಮನಿದ್ದರೆ ಪ್ರಯೋಜನ ಇಲ್ಲ. ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಬೇಕು. ಜಟ್ಟಿಪಳ್ಳ – ನೀರಬಿದಿರೆ ರಸ್ತೆ ಎಷ್ಟು ವರ್ಷದ ಬೇಡಿಕೆ ಎಂಬುದು ಗೊತ್ತಿಲ್ಲವೇ? ಚುನಾವಣೆ ಸಂದರ್ಭ ಆದ ಪ್ರತಿಭಟನೆ ಗೊತ್ತಿಲ್ಲವೇ?. ಆ ರಸ್ತೆ ಅಭಿವೃದ್ಧಿ ಆಗದೇ ಇದ್ದರೆ ನಾವು ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ರಿಕ್ಷಾ ಯುನಿಯನ್ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಮಾತನಾಡಿ ನಗರದ ರಸ್ತೆ ಅಭಿವೃದ್ಧಿಗಾಗಿ ನಮ್ಮ ಸಂಘಟನೆ ಪ್ರತೀ ವರ್ಷ ಪ್ರತಿಭಟನೆ ಮಾಡುತ್ತೇವೆ. ಆದರೆ ಇವರು ಕೆಲಸ ಮಾಡೋದಿಲ್ಲ.‌ನಗರ ಪಂಚಾಯತ್ ಎದುರಿನ ರಸ್ತೆ ಗುಂಡಿ ಮುಚ್ಚಲು ಇವರಿಂದ ಸಾಧ್ಯ ಆಗುತಿಲ್ಲ. ಚೆನ್ನಕೇಶವ ದೇವರ ಜಾತ್ರೆ ಸಂದರ್ಭದಲ್ಲಿ ಆ ಭಾಗದ ರಸ್ತೆ ಗುಂಡಿ ಮುಚ್ಚಲು ಆಗುತಿಲ್ಲ ಇವರಿಂದ. ಇಲ್ಲಿಯ ಜನಪ್ರತಿನಿಧಿಗಳು ರಾಜಕೀಯದಲ್ಲಿ ಹೊಂದಾಣಿಕೆ ಮಾಡುವ ಇವರು ಅಭಿವೃದ್ಧಿಯಲ್ಲಿ ಯಾಕೆ ಹೊಂದಾಣಿಕೆಯಿಂದಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ. ಜನರ ಟ್ಯಾಕ್ಸ್ ಹಣವನ್ನು ಸರಿಯಾಗಿ ಬಳಸಿಕೊಳ್ಳಿ. ನಮ್ಮ ಬೇಡಿಕೆ ಈಡೇರದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದವರು ಹೇಳಿದರು.

ಮುಖ್ಯಾಧಿಕಾರಿಗಳಿಂದ ಅಹವಾಲು ಆಲಿಕೆ : ಸ್ಥಳಕ್ಕೆ ಬಂದ ನ.ಪಂ. ಮುಖ್ಯಾಧಿಕಾರಿ ಸುಧಾಕರ್ ರವರು ಮನವಿ ಆಲಿಸಿದರು. ನಿಮ್ಮ ಮನವಿಯನ್ನು ಸ್ವೀಕರಿಸಿದ್ದೇವೆ. ಆದರೆ ತಕ್ಷಣಕ್ಕೆ ಮಾಡುವಂತದ್ದಲ್ಲ. ಜಟ್ಟಿಪಳ್ಳ ರಸ್ತೆಗೆ 15 ಲಕ್ಷ ಇದೆ. ಅದು ಆ ರಸ್ತೆಗೆ ಸಾಕಾಗುವುದಿಲ್ಲ. ಜನಪ್ರತಿನಿಧಿಗಳ ಗಮನಕ್ಕೆ ಇದನ್ನು ತರುತ್ತೇವೆ ಎಂದು ಹೇಳಿದರು.

ಯೂನಿಯನ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ಕೋಶಾಧಿಕಾರಿ ನಿತ್ಯಾನಂದ, ಉಪಾಧ್ಯಕ್ಷ ರವಿ ಜಾಲ್ಸೂರು ಸಹಿತ ರಿಕ್ಷಾ ಚಾಲಕರು ಭಾಗವಹಿಸಿದ್ದರು.