ಸಮಸ್ಯೆ ಬಗೆಹರಿಸಲು ಮನಸ್ಸು ಮಾಡದ ಸಂಸ್ಥೆಗಳು, ನಡೆಯದ ಕಾಂಗ್ರೆಸ್ ಪ್ರತಿಭಟನೆ
ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯ ಪ್ರವೇಶ ಬಂದ್ ಮಾಡಲಾಗಿದ್ದು ಬಸ್ ಗಳು ನಿಲ್ದಾಣ ಪ್ರವೇಶಿಸುತ್ತಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಬಸ್ ದೇವಸ್ಥಾನದ ರಸ್ತೆಯಿಂದ ಪ್ರವೇಶ ನೀಡಲು ಕೆ.ಎಸ್.ಆರ್.ಟಿ.ಸಿ. ಒಪ್ಪದೇ ಇರುವ ಕಾರಣ ತಾತ್ಕಾಲಿಕ ಸಂಪರ್ಕದ ಪ್ರಸ್ತಾಪ ನೆನೆಗುದಿಗೆ ಬಿದ್ದಿದೆ. ಎರಡೂ ಸಂಸ್ಥೆಗಳು ಸಮಸ್ಯೆ ಬಗೆಹರಿಸುವ ವಿಚಾರ ಕೈಚೆಲ್ಲಿರುವ ಕಾರಣ ಸಂಪರ್ಕ ಸಮಸ್ಯೆ ಹಾಗೇ ಮುಂದುವರೆದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದ ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಪ್ರತಿಭಟನೆ ಮಾಡದೇ ಹಿಂದೆ ಸರಿದ ಘಟನೆಯೂ ವರದಿಯಾಗಿದೆ.
ತಾತ್ಕಾಲಿಕ ಸಂಪರ್ಕ ಕಲ್ಪಿಸಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದವರು ವಿಳಂಬ ಧೋರಣೆ ಅನುಸರಿಸುವುದನ್ನು ಖಂಡಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕೆ.ಎಸ್.ಆರ್.ಟಿ ಎದುರು ಶಾಂತಿಯುತ ಪ್ರತಿಭಟನೆ ಮಾಡುವುದಾಗಿ ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಹೇಳಿಕೊಂಡಿತ್ತು.
ಈ ಹಿನ್ನೆಲೆಯಲ್ಲಿ ಜ.18 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಛೇರಿಯಲ್ಲಿ ಕೆ.ಎಸ್.ಆರ್.ಟಿ. ಸಿ., ಡಿ.ಸಿ. ಜಯರಾಮ್ ಶೆಟ್ಟಿ ಹಾಗೂ ಡಿ.ಟಿ.ಒ. ಮುರಳೀಧರ್ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಇಲ್ಲಿ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹಾಗೂ ಕೆಲ ಕಾಂಗ್ರೆಸ್ ಮುಖಂಡರಿದ್ದು ಸಭೆ ನಡೆಸಲಾಗಿತ್ತು. ದೇವಸ್ಥಾನದವರು ಒಂದು ತಿಂಗಳ ಅವಧಿಗೆ ತಾತ್ಕಾಲಿಕ ರಸ್ತೆ ಮಾಡಲು ಮತ್ತು ಒಂದು ತಿಂಗಳ ನಂತರ ಮತ್ತೆ ಸಂಪರ್ಕ ಮುಚ್ಚಿ ಕೊಡಲು, ಅದರ ಖರ್ಚು ವೆಚ್ಚವನ್ನು ಕೆ.ಎಸ್.ಆರ್.ಟಿ. ಸಿ., ಭರಸಿಬೇಕು ಹಾಗೂ ಅದನ್ನು ಬರಹ ರೂಪದಲ್ಲಿ ಶರ್ತಕ್ಕೆ ಒಪ್ಪಿಗೆ ಕೊಡಬೇಕು ಎಂದು ಸೂಚಿಸಿತ್ತು. ಆದರೆ ಇದನ್ನು ಕೆ.ಎಸ್.ಆರ್.ಟಿ. ಸಿ. ಅಧಿಕಾರಿಗಳು ಒಪ್ಪದೇ ಇದ್ದ ಕಾರಣ ತಾತ್ಕಾಲಿಕ ಸಂಪರ್ಕ ರಸ್ತೆ ಸಮಸ್ಯೆ ಹಾಗೇ ಮುಂದುವರೆದಿದೆ. ಸಂಪರ್ಕ ಆಗದೇ ಇದ್ದಲ್ಲಿ ಪ್ರತಿಭಟಿಸುವುದಾಗಿ ಹೇಳಿಕೊಂಡ ಕಾಂಗ್ರೆಸ್ ಪ್ರತಿಭಟನೆಯನ್ನೂ ಮಾಡದೆ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ ಎಂದು ತಿಳಿದು ಬಂದಿದೆ.
ಬಸ್ ನಿಲ್ದಾಣಕ್ಕೆ ರಸ್ತೆ ಸಂಪರ್ಕ ಇಲ್ಲದಿರುವ ಕಾರಣ ಬಹಳಷ್ಟು ತೊಂದರೆ ಅನುಭವಿಸುವುದು ದೇವಸ್ಥಾನಕ್ಕೆ ಬರುವ ಭಕ್ತರು, ಕೆ.ಎಸ್.ಆರ್.ಟಿ. ಸಿ ಸಿಬ್ಬಂದಿಗಳು, ಅಲ್ಲದೆ ತಂಗುದಾಣದಲ್ಲಿರುವ ಅಂಗಡಿಯವರು. ಇದೆಲ್ಲವನ್ನು ನಿವಾರಿಸಬೇಕಾದ ಆಡಳಿತ ವರ್ಗ ಕಣ್ಣುಮುಚ್ಚಿ ಕುಳಿತಿದೆ.