ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿ ವಿಶೇಷ ಕಾರ್ಯಕ್ರಮ ‘ಚಾವಡಿ ಚರ್ಚೆ’

0

ಸುಳ್ಯ: ಡೋಲಿನ ಅಬ್ಬರಕ್ಕೆ, ಕೊಳಲಿನ ಮಧುರ ನಾದಕ್ಕೆ ವೈವಿಧ್ಯ ಜಾನಪದ ನೃತ್ಯ, ಜಾನಪದ ಹಾಡು, ಪಾಡ್ದನಗಳ ಕಲರವ. ಕಳೆದ ಅರ್ಧ ಶಾತಮಾನದ ಹಿಂದಿನ ಗ್ರಾಮೀಣ ಬದುಕಿನ ಅನಾವರಣ.ತೆರೆದುಕೊಂಡ ಜಾನಪದ ಬದುಕಿನ ಸುಂದರ‌ ಲೋಕ.


ದ.ಕ‌.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕಿನ ಹರಿಹರ, ಕೊಲ್ಲಮೊಗ್ರ ಗ್ರಾಮ ವ್ಯಾಪ್ತಿಯಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಂಗವಾಗಿ ನಡೆದ ಚಾವಡಿ ಚರ್ಚೆಯ ಅಪೂರ್ವ ಸಂಭ್ರಮಕ್ಕೆ ಸಾಕ್ಷಿಯಾಯಿತು. ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು ಎಂಬ ನಾಣ್ನುಡಿಯಂತೆ ಆಧುನಿಕ ಯುಗಕ್ಕೆ ಹಳೆಯ ಕಾಲದ ಜೀವನ, ಜಾನಪದ ಬದುಕಿನ ಸಂಭ್ರಮದ ಲೇಪನ ಮಾಡಲಾಯಿತು. ಸುತ್ತಲೂ ಕವಿದ ಕತ್ತಲೆಯಲ್ಲಿ ದೊಂದಿ ಬೆಳಕಿನ ಕತ್ತಲು-ಬೆಳಕಿನಾಟದ ಮಧ್ಯೆ ನಡೆದ ಚಾವಡಿ ಚರ್ಚೆ ಪತ್ರಕರ್ತರಿಗೆ ಹೊಸ ಅನುಭವ ನೀಡಿತ್ತು. ಕೊಲ್ಲಮೊಗ್ರ ಗ್ರಾಮದ ಬೆಂಡೋಡಿಯ ಐತ್ತ ಕೊರಗ ಎಂಬವರ ಮನೆಯಲ್ಲಿ ಈ ಬಾರಿ ಪತ್ರಕರ್ತರ ಗ್ರಾಮ ವಾಸ್ತವ್ಯ ಮತ್ತು ಚಾವಡಿ ಚರ್ಚೆ ನಡೆಯಿತು. ಅಂಗಳಲ್ಲಿ ಚಾಪೆ ಹಾಸಿ, ಉರಿಸಿಟ್ಟ ದೊಂದಿ ಬೆಳಕಿನ ಸುತ್ತ ಕುಳಿತು ಚಾವಡಿ ಚರ್ಚೆ ನಡೆಯಿತು. ಊರಿನ ಹಿರಿಯರು, ಪ್ರಮುಖರು, ಯುವಕರು, ಪತ್ರಕರ್ತರು ನೆರೆದಿದ್ದರು. ಕಾಡಂಚಿನ ಗ್ರಾಮಗಳಾದ ಕೊಲ್ಲಮೊಗ್ರ, ಹರಿಹರ ಗ್ರಾಮಗಳ ಇತಿಹಾಸ, ಅರ್ಧ ಶತಮಾನದ ಹಿಂದಿನ ಬದುಕು ಅಲ್ಲಿ ತೆರೆದುಕೊಂಡಿತು. 85 ವರ್ಷದ ಐತ್ತ ಕೊರಗ, ಹಿರಿಯರಾದ ಸತ್ಯ ನಾರಾಯಣ ಬೆಂಡೋಡಿ ಮತ್ತಿತರರು ಸುಮಾರು 70-80 ವರ್ಷಗಳ ಹಿಂದಿನ ಕಾಲವನ್ನು ನೆನೆಪಿಸಿಕೊಂಡರು. ಪ್ರಮುಖರಾದ ಮಾಧವ ಚಾಂತಾಳ ಅವರು ಊರಿನ ವೈವಿಧ್ಯತೆಯ ಬಗ್ಗೆ ವಿವರಿಸಿದರು..


ಈಗ ಎಲ್ಲೆಡೆ ಆನೆ ಕಾಡು ಪ್ರಾಣಿಗಳ ಹಾವಳಿಯದ್ದೇ ಸುದ್ದಿ ಆದರೆ ಹಿಂದೆಲ್ಲಾ ಕಾಡು ಪ್ರಾಣಿಗಳ ಹಾವಳಿ ಇರಲಿಲ್ಲ. ಅವು ನಾಡಿಗೆ ಬರುತ್ತಿರಲಿಲ್ಲ, ಅವು ಸ್ವಚ್ಛಂದವಾಗಿ ಕಾಡಿನಲ್ಲಿ ಬದುಕುತ್ತಿದ್ದವು. ನಾವೆಲ್ಲರೂ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಬದುಕುತ್ತಿದ್ದೆವು. ಕಾಡಿನ ಬಳ್ಳಿ, ಬೆತ್ತಗಳನ್ನು ತಂದು ಬುಟ್ಟಿ ಮೆಡೆಯುತ್ತಿದ್ದವು. ಅದನ್ನು ವಿವಿಧ ಕಡೆ ಮಾರಾಟ ಮಾಡುತ್ತಿದ್ದೆವು.. ಕಿಲೋ ಮೀಟರ್ ನಡೆದುಕೊಂಡು ಮಾರಾಟ ಮಾಡುತ್ತಿದ್ದೆ ಎಂದು ಐತ್ತ ಕೊರಗ ಅವರು ತಮ್ಮ ಅನುಭವದ ಬುತ್ತಿ ಬಿಚ್ಚಿದರು. ಕೃಷಿ ಕೆಲಸಗಳಿಗೆ ತನ್ನ ಬುಟ್ಟಿಗಳಿಗೆ ಸಾಕಷ್ಟು ಬೇಡಿಕೆ ಇತ್ತು ಎನ್ನುತ್ತಾರವರು. ಈಗ ಪ್ಲಾಸ್ಟಿಕ್ ಬುಟ್ಟಿಗಳು ಮಾರುಕಟ್ಟೆಯಲ್ಲಿ ಬಂದಿರುವ ಕಾರಣ ಬೆತ್ತ, ಬಳ್ಳಿಗಳ ಬುಟ್ಟಿಗಳು ಮರೆಯಾಗಿದೆ ಎಂದು ಅಲ್ಲಿ ನೆರೆದಿದ್ದ ಹಿರಿಯರು ಅಭಿಪ್ರಾಯ ವ್ಯಕ್ತಪಡಿಸಿದರು. ಈಗ ಮಳೆ ಬಂದರೆ ಪ್ರಳಯ, ಪ್ರಾಕೃತಿಕ ವಿಕೋಪ ಭಯ ಹುಟ್ಟಿಸುತ್ತದೆ. ಕಳೆದ ಬಾರಿಯ ಪ್ರಳಯಕ್ಕೆ ಬೆಂಡೋಡಿ ಹೊಳೆ ಉಕ್ಕಿ ಹರಿದು ಆತಂಕ ಸೃಷ್ಠಿಸಿತ್ತು. ಆದರೆ ಹಿಂದೆ ಎಷ್ಟೇ ಮಳೆ ಬಂದರೂ ಪ್ರಳಯ ಆಗುತ್ತಿರಲಿಲ್ಲ. ಎಲ್ಲೆಡೆ ಗದ್ದೆಗಳಲ್ಲಿ, ಬೆಟ್ಟು ಮಜಲುಗಳಲ್ಲಿ ಭತ್ತಗಳು ನಳ ನಳಿಸುತ್ತಿದ್ದವು ಎಂದು ಸತ್ಯನಾರಾಯಣ ಬೆಂಡೋಡಿ ಹೇಳಿದರು.


ಸುಮಾರು 70-80 ವರ್ಷಗಳ ಹಿಂದೆ ಕೊಲ್ಲಮೊಗ್ರ ಭಾಗಕ್ಕೆ ವಾಹನ ಸಂಚಾರ ಇರಲಿಲ್ಲ. ಅಪರೂಪಕ್ಕೆ ಇದ್ದ ಎತ್ತಿನ ಗಾಡಿಯಲ್ಲಿ ಅಥವಾ ನಡೆದುಕೊಂಡು ಪ್ರಯಾಣ ಮಾಡಬೇಕಿತ್ತು ಎಂದು ಹಿರಿಯರು ತಮ್ಮ ಬದುಕಿನ ಭೂತ ಕಾಲವನ್ನು ತೆರೆದಿಟ್ಟರು.


ಈ ಗ್ರಾಮಗಳು ಉಪ್ಪಿನಂಗಡಿ ತಾಲೂಕಿಗೆ ಒಳಪಟ್ಟಿತ್ತು. ಸಿಡುಬು ರೋಗ ಬಂದು ಹಲವರು ಗ್ರಾಮ ಬಿಟ್ಟು ಹೋದ ಪ್ರಸಂಗಗಳು ಉಂಟಾಗಿತ್ತು ಎಂದು ನೆನಪಿಸಿದರು‌ ಕೊಲ್ಲಮೊಗ್ರ-ಮಡಿಕೇರಿ ಸಂಪರ್ಕ ಸುಬ್ರಹ್ಮಣ್ಯ ಕಡಮಕಲ್ ರಸ್ತೆ ಶತಮಾನದ ಹಿಂದೆಯೇ ಇತ್ತು. ಇಲ್ಲಿಯಾಗಿ ಎತ್ತಿನ ಗಾಡಿ, ಬ್ರಿಟೀಷರ ಕುದುರೆ ಗಾಡಿ ಪ್ರಯಾಣ ನಡೆಸುತ್ತಿತ್ತು ಹಿರಿಯರು ಹೇಳಿದರು.


ಪ್ರಮುಖರಾದ‌‌ ಮಾಧವ ಚಾಂತಾಳ ಅವರು ಮಾತನಾಡಿ ಗ್ರಾಮದ ಐತಿಹಾಸಿಕ ಹಿನ್ನಲೆಯತ್ತ ಬೆಳಕು ಚೆಲ್ಲಿದರು. ಈ ಪ್ರದೇಶ ಮೈಸೂರು ರಾಜರ ಆಡಳಿತಕ್ಕೊಳಪಟ್ಟಿತ್ತು ಎಂದು ವಿವರಿಸಿದರು. ಈ ಗ್ರಾಮಗಳ ಸುತ್ತಲೂ ಮಾಯಿಲ ಕೋಟೆ, ಯುದ್ದದ ಕುದುರೆ ಕಟ್ಟುತ್ತಿದ್ದ ಸ್ಥಳ, ಹಳೆಯ ಕಾಲದ ಐಬಿ ಇಲ್ಲಿದೆ ಎಂದು ವಿವರಿಸಿದರು.


ಚಾವಡಿ ಚರ್ಚೆಯ ಮಧ್ಯೆ ಗಿರಿಸಿರಿ ಜನಪದ ತಂಡದ ಕಲಾವಿದರು ಡೋಲು, ಕೊಳಲಿನ ತಾಳಕ್ಕೆ ನೃತ್ಯ ಪ್ರಸ್ತುತಪಡಿಸಿದರು. ಮದುವೆ, ಇತರ ಹಬ್ಬ ಆಚರಣೆಯ ಸಂದರ್ಭದಲ್ಲಿ ಸಂಭ್ರಮಕ್ಕಾಗಿ ದೊಂದಿ ದೀಪದಲ್ಲಿ ಎಲ್ಲರೂ ಒಟ್ಟಾಗಿ ನೃತ್ಯ ಮಾಡುತ್ತಿದ್ದರು. ಅದೇ ಸಂಭ್ರಮವನ್ನು ಮತ್ತೆ ಸೃಷ್ಟಿಸಲಾಯಿತು. ಮಧ್ಯೆ ಮಧ್ಯೆ ಪತ್ರಕರ್ತ, ಕಲಾವಿದ ಮೌನೇಶ್ ವಿಶ್ವ ಕರ್ಮ ಅವರ ಹಾಡುಗಳು, ‌ಊರಿನ ಹಿರಿಯರ ಪಾಡ್ದನಗಳು ಮುದ ನೀಡಿತು.ಪತ್ರಕರ್ತ ಬಿ.ಎನ್.ಪುಷ್ಪರಾಜ್ ಕಾರ್ಯಕ್ರಮ‌ ನಿರೂಪಿಸಿದರು. ಐತ್ತ ಕೊರಗ ಅವರ ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.


ಕೊಲ್ಲಮೊಗ್ರ ಗ್ರಾ.ಪಂ.ಅಧ್ಯಕ್ಷೆ ಜಯಶ್ರೀ ಚಾಂತಾಳ, ಉಪಾಧ್ಯಕ್ಷ ಅಶ್ವತ್ ಯಾಲದಾಳು, ಹರಿಹರ ಗ್ರಾ.ಪಂ.ಅಧ್ಯಕ್ಷ ವಿಜಯ ಅಙಣ, ಉಪಾಧ್ಯಕ್ಷ ಜಯಂತ ಬಾಳುಗೋಡು, ಪ್ರಮುಖರಾದ ಮಾಧವ ಚಾಂತಾಳ, ಸೋಮಶೇಖರ ಕಟ್ಟಮನೆ, ಉದಯ ಶಿವಾಲ ಮತ್ತಿತರರು ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಮೋಹನ್ ಕುತ್ತಾರು, ಸುಳ್ಯ ತಾಲೂಕು ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್, ಕಾರ್ಯದರ್ಶಿ ತೇಜೇಶ್ವರ ಕುಂದಲ್ಪಾಡಿ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ, ಲೋಕೇಶ್ ಬಿ.ಎನ್, ಗಿರೀಶ್ ಅಡ್ಪಂಗಾಯ, ಪದ್ಮನಾಭ ಮುಂಡೋಕಜೆ, ದಯಾ ಕುಕ್ಕಾಜೆ, ಪ್ರಕಾಶ್ ಸುಬ್ರಹ್ಮಣ್ಯ, ಮೌನೇಶ್ ವಿಶ್ವಕರ್ಮ, ದಯಾನಂದ‌ ಕೊರತ್ತೋಡಿ, ಗಿರೀಶ್ ಪೆರುಮುಂಡ, ಮುರಳೀಧರ ಅಡ್ಡನಪಾರೆ, ಶಶಿ ಬೆಳ್ಳಾಯೂರು ಮತ್ತಿತರರು ಚಾವಡಿ ಚರ್ಚೆಯಲ್ಲಿ ಭಾಗವಹಿಸಿದ್ದರು.