ಶಾಲೆಗಳ ಮೈದಾನದಲ್ಲಿ ಹಿಂದಿನಿಂದಲೂ ಆಚರಿಸುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಿ : ಕಾಂಗ್ರೆಸ್ ಮನವಿ

0

ಶಾಲಾ ಮೈದಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ಶಾರದೋತ್ಸವ ಕಾರ್ಯಕ್ರಮಗಳು ಹಲವು ವರ್ಷಗಳಿಂದ ನಡೆಯುತ್ತಿದ್ದು ಇದಕ್ಕೆ ನಿರ್ಬಂಧ ನೀಡಬಾರದು. ಈ ಹಿಂದೆ ಆಚರಣೆ ಹೇಗೆ ನಡೆಯುತಿತ್ತೋ ಅದೇ ರೀತಿ ಈ ಬಾರಿಯೂ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಿಯೋಗ ಸುಳ್ಯ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪೋಲೀಸ್ ಇಲಾಖೆಯವರಿಗೆ ಮನವಿ ಮಾಡಿದೆ.

“ಈ ಹಿಂದಿನ ಆದೇಶದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಸರ್ಕಾರಿ ಪ್ರೌಢಶಾಲೆ ಕೋಟೆ, ಚಾಮರಾಜನಗರಪೇಟೆ, ಬೆಂಗಳೂರು ಈ ಶಾಲೆಯ ಮೈದಾನದಲ್ಲಿ ಮಾತ್ರ ಕಾರ್ಯಕ್ರಮ ನಡೆಸುವ ಬಗ್ಗೆ ಅನುಮತಿ ನೀಡಬಾರದಾಗಿ ಸೂಚಿಸಲಾಗಿದೆ. ಆದರೆ ಈ ಸೂಚನೆ ನಮ್ಮ ಜಿಲ್ಲೆಗೆ ಅನ್ವಯ ವಾಗುವುದಿಲ್ಲ.


ಬೆಂಗಳೂರು ಮತ್ತು ಮೈಸೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಮಾತ್ರ ಈ ಆದೇಶವು ಅನ್ವಯವಾಗಿರುತ್ತದೆ ಎಂದು ಕಂಡುಬರುತ್ತಿದೆ. ಆದರೆ ಈ ಆದೇಶವು ರಾಜ್ಯಾದ್ಯಂತವಾಗಿ ಜ್ಯಾರಿಗೆ ಬರುವಂತೆ ಸೂಚಿಸಿರುವುದಿಲ್ಲ. ಈ ಬಗ್ಗೆ ಗೊಂದಲವಾಗಿರುತ್ತದೆ. ದಿನಾಂಕ 07-02-2013 ರಂದು ಆದೇಶವಾಗಿದ್ದು ಕಳೆದ 11 ವರ್ಷಗಳಿಂದ ಉಳಿದ ಎಲ್ಲಾ ಜಿಲ್ಲಾ, ತಾಲೂಕು, ಗ್ರಾಮ ಕೇಂದ್ರಗಳಲ್ಲಿ ಯಾವುದೇ ಆತಂಕವಿಲ್ಲದೇ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದೆ. ಮತ್ತು ಯಾವುದೇ ಅಹಿತಕರ ಘಟನೆಗಳು ಈ ತನಕ ನಡೆದಿರುವುದಿಲ್ಲ. ಸ್ಥಳೀಯವಾಗಿ ಸಂಘ-ಸಂಸ್ಥೆಗಳಿಗೆ ಶಾಲಾ ಆಟದ ಮೈದಾನಗಳೇ ಸಾಂಸ್ಕೃತಿಕ ಚಟುವಟಿಕೆಗಳಿಗೆ, ಶಾಲಾ ಮಕ್ಕಳ ಆಟೋಟ ಸ್ಪರ್ಧೆಗಳ ಆಯೋಜನೆಗೆ ಶಾಲೆಯ ಮೈದಾನಗಳನ್ನೇ ಆಶ್ರಯಿಸಬೇಕಾಗಿದೆ ಮತ್ತು ಸರ್ಕಾರಿ ಶಾಲಾ ಮೈದಾನವನ್ನು ಶಾಲಾ ಆಡಳಿತ ಕಮಿಟಿಯವರ ಅನುಮತಿಯೊಂದಿಗೆ ಸರಕಾರಿ ಶಾಲೆಗಳ ಅಭಿವೃದ್ಧಿಯ ದೃಷ್ಟಿಯಿಂದಲೂ ಖಾಸಗಿ ಕಾರ್ಯಕ್ರಮಗಳು ನಡೆಸುವುದು ಅನಿವಾರ್ಯವಾಗಿದೆ.

ಆದುದರಿಂದ ಸುಳ್ಯ ತಾಲೂಕಿನ ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳನ್ನು, ಎಲ್ಲಾ ರಾಜಕೀಯ ಪಕ್ಷದ ನಾಯಕರನ್ನು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರನ್ನು ಕರೆಸಿ ಸಭೆ ನಡೆಸಬೇಕೆಂದು, ಸುತ್ತೋಲೆಯ ಬಗ್ಗೆ ಪರಮರ್ಶಿಸಿ ಶಾಂತಿ ಸೌಹಾರ್ದತೆಯಿಂದ ಕಾರ್ಯಕ್ರಮಗಳು ಈ ಹಿಂದಿನಂತೆ ಯಥಾ ಸ್ಥಿತಿಯಲ್ಲಿ ನಡೆಸಲು ಅನುಕೂಲವಾಗುವಂತೆ ಕೂಡಲೇ ಶಾಂತಿ ಸೌಹಾರ್ದತೆ ಸಭೆ ನಡೆಸಬೇಕಾಗಿ ಈ ಮೂಲಕ ವಿನಂತಿಸುವುದಾಗಿ ಕಾಂಗ್ರೆಸ್ ನಿಯೋಗ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ‌ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ, ಪ್ರಮುಖರಾದ ದಿನೇಶ್ ಅಂಬೆಕಲ್ಲು, ನಂದರಾಜ ಸಂಕೇಶ, ರಾಜು ಪಂಡಿತ್, ಕರುಣಾಕರ ಅಡ್ಪಂಗಾಯ, ಪರಮೇಶ್ವರ ಕೆಂಬಾರೆ, ಶಹೀದ್ ಪಾರೆ, ಅಬ್ದುಲ್ ಖಾದರ್ ಮೊದಲಾದವರು ಇದ್ದರು.