ಜಿಲ್ಲಾ ಆರೋಗ್ಯ ಅಧಿಕಾರಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಕೂಡಲೇ ಸ್ಪಂದಿಸುವಂತೆ ಸೂಚನೆ
ಸುಳ್ಯ ಸರಕಾರಿ ಆಸ್ಪತ್ರೆ ಬಳಿ 108 ಆಂಬುಲೆನ್ಸ್ ವಾಹನ ನಿಲ್ಲಿಸಲು ಮತ್ತು ಸಿಬ್ಬಂದಿಗಳಿಗೆ ವಿಶ್ರಾಂತಿ ಕೊಠಡಿ ಇಲ್ಲದೇ ಸಮಸ್ಯೆ ಆಗುತ್ತಿದ್ದು ಕೂಡಲೇ ಈ ಸಮಸ್ಯೆ ಪರಿಹರಿಸಿ ಕೊಡುವಂತೆ ಅಕ್ಷಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರೋಗ್ಯ ಸಚಿವರಿಗೆ ಮನವಿ ನೀಡಿದ್ದಾರೆ.
ಸುಳ್ಯ ತಾಲೂಕು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 108 ಆಂಬುಲೆನ್ಸ್ ಗೆ ತಾಲೂಕು ಆಸ್ಪತ್ರೆ ಆವರಣದಲ್ಲಿ ವಾಹನ ನಿಲುಗಡೆಗೆ ಶೆಡ್ ವ್ಯವಸ್ಥೆ ಹಾಗೂ ಮಹಿಳಾ ಸಿಬ್ಬಂದಿ ಗಳಿಗೆ ತಂಗಲು ಕೊಠಡಿ, ಸಿಬ್ಬಂದಿಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದೇ ಸಮಸ್ಯೆಯಿಂದ ಸುಳ್ಯ ದಲ್ಲಿ 108 ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುತ್ತದೆ.
ಇದರಿಂದ 108 ಆಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆ ಉಲ್ಬಣಿಸುತ್ತಿದ್ದು ತತ್ ಕ್ಷಣ ಪರಿಹರಿಸುವಂತೆ ಆರೋಗ್ಯ ಸಚಿವರು, ದ. ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಟ್ರಸ್ಟ್ ಅಧ್ಯಕ್ಷ ಝಕರಿಯ ನಾರ್ಷ ನೇತೃತ್ವ ದಲ್ಲಿ ಮನವಿ ನೀಡಲಾಯಿತು.
ಮನವಿ ಸ್ವೀಕರಿಸಿ ತಕ್ಷಣ ಸ್ಪಂದಿಸಿದ ಸಚಿವರು ಜಿಲ್ಲಾ ಆರೋಗ್ಯ ಅಧಿಕಾರಿಯವರಿಗೆ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಗೌರವ ಸಲಹೆಗಾರರಾದ ಹಾಜಿ ಕೆ. ಎಂ. ಮುಸ್ತಫ ಸುಳ್ಯ ,ಸಂಚಾಲಕ ಕರೀಂ ಕೆದ್ಕಾರ್, ಪ್ರದಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ, ಸಂಘಟನಾ ಕಾರ್ಯದರ್ಶಿ ಸುಳ್ಯ ನ. ಪಂ. ಸದಸ್ಯ ಕೆ. ಎಸ್. ಉಮ್ಮರ್, ಉಪಸ್ಥಿತರಿದ್ದರು.
ಸಮಸ್ಯೆಯ ಬಗ್ಗೆ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕರ ಮಾಲಕರ ಸಂಘ ಅಕ್ಷಯ ಟ್ರಸ್ಟ್ ನ ಗಮನಕ್ಕೆ ತಂದ ಮೇರೆಗೆ ಸಚಿವರಿಗೆ ಮನವಿ ಅರ್ಪಿಸಲಾಗಿದೆ.