ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಸೇವೆಯಲ್ಲಿ ಇರುವಾಗಲೇ ನಿಧನರಾದ ದಿ. ಯು. ಡಿ. ಶೇಖರ್ ಅವರ ಸ್ಮರಣಾರ್ಥವಾಗಿ ಅವರ ಎರಡನೇ ಪುಣ್ಯ ಸ್ಮರಣೆಯ ದಿನವಾದ ನ.3ರಂದು ಅವರ ಹೆಸರಿನಲ್ಲಿ ಅರಂತೋಡಿನ ನೆಹರೂ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗೆ ದತ್ತಿನಿಧಿ ಹಸ್ತಾಂತರಿಸಲಾಯಿತು.















ನೆಹರೂ ಮೆಮೋರಿಯಲ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಓರ್ವ ವಿದ್ಯಾರ್ಥಿಗೆ ಸಹಾಯವಾಗುವ ನಿಟ್ಟಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿ ಶಾಲೆಯ ಆಡಳಿತಕ್ಕೆ ಯು. ಡಿ. ಶೇಖರ್ ಅವರ ಧರ್ಮಪತ್ನಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್ ಅವರು ರೂ 10, 000 ವನ್ನು ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಸೋಮಶೇಖರ ಪಿಂಡಿಮನೆಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ. ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ವಾಗ್ಲೆ, ಶಾಲಾ ಸಂಚಾಲಕರಾದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ. ಆರ್. ಗಂಗಾಧರ್, ಶಾಲಾ ಶಿಕ್ಷಕರಾದ ಕಿಶೋರ್ ಮಾಸ್ತರ್ ಕಿರ್ಲಾಯ, ಅರಂತೋಡು -ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ಉಪಸ್ಥಿತರಿದ್ದರು.










