ಚೆನ್ನಕೇಶವ ದೇವಸ್ಥಾನಕ್ಕೆ ಕಂಚಿಶ್ರೀಗಳ ಭೇಟಿ ಹಾಗೂ ಭಕ್ತ ಸಮೂಹಕ್ಕೆ ಆಶೀರ್ವಚನ
ವೇದ ಪಾಠದ ಅಧ್ಯಯನವು ಭಾರತೀಯ ಸಂಸ್ಕೃತಿಯ ಉಳಿವಿಗೆ ಪೂರಕ. ಪ್ರತಿ ಗ್ರಾಮಗಳಲ್ಲಿ ವೇದ ವಿದ್ವಾಂಸರು ಇದ್ದು ಮಾರ್ಗದರ್ಶನ ನೀಡುತ್ತಿರಬೇಕು.
ವೈಜ್ಞಾನಿಕ, ರಾಜಕೀಯ, ಸಾಮಾಜಿಕ ಶಿಕ್ಷಣ ನೀಡುವ ಲೌಖಿಕ ಶಿಕ್ಷಣದ ಜೊತೆಗೆ ನಮ್ಮ ಧರ್ಮ, ಪುರಾಣ, ಸಂಸ್ಕೃತಿ, ಸಂಸ್ಕಾರ ಕಲಿಸುವ ಧಾರ್ಮಿಕ ಶಿಕ್ಷಣವನ್ನು ಕಲಿಸುವ ‘ಸಂಸ್ಕೃತಿಯ ವೇದ ಪಾಠಶಾಲೆ ಗಳನ್ನು ದೇವಸ್ಥಾನಗಳಲ್ಲಿ ಆರಂಭಿಸುವಂತಾಗಲಿ ಎಂದು ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿ ಹೇಳಿದರು.
ನ.18 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಭಕ್ತ ಸಮೂಹಕ್ಕೆ ಆಶೀರ್ವಚನ ನೀಡಿದರು.
ಎಲ್ಲಾ ರೀತಿಯ ಉನ್ನತ
ಶಿಕ್ಷಣವೂ ನಮ್ಮ ದೇಶದಲ್ಲಿ ದೊರೆಯುವಂತಾಗಬೇಕು.ವೇದಾಧ್ಯಯನ ಮಾಡುವುದು ಭಾರತದ ಸಂಸ್ಕೃತಿ ಎಂದ ಅವರು ಭಾರತೀಯ ಜೀವನ ಕ್ರಮ ವೇದ ಮಾರ್ಗದಲ್ಲಿ ಇರಬೇಕು. ದೇಶದಲ್ಲಿ ಸುಭೀಕ್ಷೆ ನೆಲೆಸಬೇಕಾದರೆ ಧರ್ಮ ಪ್ರಚಾರ ಧಾರ್ಮಿಕ ಪರಿಷತ್ ಮೂಲಕ ದೇವಸ್ಥಾನಗಳಲ್ಲಿ ನಿರಂತರವಾಗಿ ನಡೆಯುತ್ತಿರಬೇಕು. ಕಾಂಚಿ ಪೀಠದಲ್ಲಿ ತಲ ತಲಾಂತರಗಳಿಂದ ವೇದಾಧ್ಯಯನ ನಡೆಸಲಾಗುತಿದೆ ಎಂದು ಅವರು ತಿಳಿಸಿದರು.
ಎಲ್ಲಾ ಸಂಪತ್ತಿಗಿಂತಲೂ ಧರ್ಮ ಮುಖ್ಯ. ಆದುದರಿಂದ ಮಾನವನ ಬದುಕು ಧರ್ಮ, ಸಂಪ್ರದಾಯ, ಸಂಸ್ಕೃತಿಯಿಂದ ಕೂಡಿರಬೇಕು, ಮನುಷ್ಯತ್ವ, ಮಾನವೀಯತೆ, ಶಾಂತಿ, ಸೌಜನ್ಯದ ಆಗರವಾಗಿರಬೇಕು ಎಂದು ಹೇಳಿದರು.
ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ 20 ವರ್ಷಗಳ ಹಿಂದೆ ಆಗಮಿಸಿರುವುದನ್ನು ನೆನಪಿಸಿದ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಸುಳ್ಯಕ್ಕೂ ಕಾಂಚಿ ಕಾಮಕೋಟಿ ಪೀಠಕ್ಕೂ ಅವಿನಾಭಾವ ಸಂಬಂಧವಿದೆ. ಕಾಂಚಿ ಪೀಠದಲ್ಲಿ ವೇದಾಧ್ಯಯನ ನಡೆಸಿ ವೇದ ವಿದ್ವಾಂಸರಾದವರು ಹಲವು ಮಂದಿ ಇದ್ದಾರೆ. ಇಲ್ಲಿನ ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ಮೂಲಕ ಹಲವರು ವೇದಾಧ್ಯಯನ ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸುಳ್ಯ
ಶಾಸಕಿ ಭಾಗೀರಥಿ ಮುರುಳ್ಯ ರವರನ್ನು ಪೀಠದ ವತಿಯಿಂದ ಶಾಲು ಹೊದಿಸಿ ಪ್ರಸಾದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಚೆನ್ನಕೇಶವ ದೇವಸ್ಥಾನದ ಅನುವಂಶಿಕಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಶಶಿಕಲಾ ದಂಪತಿ ಹಾಗೂ ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಗ್ನಿಹೋತ್ರಿ ಸೋಮಯಾಜಿ ಗೋವಿಂದ ಪ್ರಸಾದ್ ಭಟ್ ಕಾಂಚಿ ಕಾಮಕೋಟಿ ಪೀಠದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಕೃಪಾಶಂಕರ ತುದಿಯಡ್ಕ ಸ್ವಾಗತಿಸಿ, ವಂದಿಸಿದರು. ಬಳಿಕ ಸ್ವಾಮೀಜಿಯವರು ನೆರೆದ ಭಕ್ತ ಸಮೂಹಕ್ಕೆ ಮಂತ್ರಾಕ್ಷತೆ ನೀಡಿ ಹರಸಿದರು.
ಚೆನ್ನಕೇಶವ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳನ್ನು ಭಾರದ್ವಾಜ ಆಶ್ರಮದ ವೇದ ವಿದ್ಯಾಲಯದ ವಿದ್ಯಾರ್ಥಿಗಳ ವೇದ ಘೋಷದೊಂದಿಗೆ ಸ್ವಾಗತಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.