ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶಿಸಿ ಹಣ್ಣಿನ ಗಿಡಗಳನ್ನು ನಾಶಪಡಿಸಿದ್ದಲ್ಲದೇ ಬಲಾತ್ಕಾರವಾಗಿ ಅತಿಕ್ರಮ ಪ್ರವೇಶ ಮಾಡಿ ಕೆಲಸ ಮಾಡಿದ್ದಾರೆಂದು ಬಡ್ಡಡ್ಕದ ರಾಮಕೃಷ್ಣ ನಾಯ್ಕ ಎಂಬವರು ವಕೀಲರಾದ ವಸಂತಿ ಎಂಬವರ ಮೇಲೆ ಪೋಲೀಸ್ ದೂರು ನೀಡಿದ ಘಟನೆ ವರದಿಯಾಗಿದೆ.
ಆಲೆಟ್ಟಿ ಗ್ರಾಮದ ಸರ್ವೆ ನಂಬ್ರ 336\1ಎ1ಪಿ ರಲ್ಲಿ ನನಗೆ 1.80 ಎಕ್ರೆ ಸ್ಥಿರಾಸ್ತಿ ಇದೆ. ಆ ಜಾಗದ ಪಕ್ಕ ಸುಳ್ಯ ಕಸಬಾ ಗ್ರಾಮದ ಕಲ್ಲುಮುಟ್ಲು ನಿವಾಸಿ ವಕೀಲೆ ಶ್ರೀಮತಿ ವಸಂತಿ ಎಂಬವರಿಗೆ ಸೇರಿದ ಜಾಗವೂ ಇದೆ. ಆದರೆ ವಸಂತಿಯವರು ಅವರ ಜಾಗವನ್ನು ಬಿಟ್ಟು, ನನ್ನ ಜಾಗದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದಲ್ಲದೇ ಜಾಗದಲ್ಲಿದ್ದ ಹಣ್ಣಿನ ಗಿಡಗಳನ್ನು ಕಡಿದು ನಾಶ ಮಾಡಿ, ಬೇಲಿಯನ್ನು ಹಾಕಿದ್ದಾರೆ.
ವಸಂತಿಯವರು ಈ ಹಿಂದೆಯೂ ನನ್ನ ಜಾಗಕ್ಕೆ ಜೆಸಿಬಿ ಮೂಲಕ ಅಕ್ರಮವಾಗಿ ಪ್ರವೇಶಿಸಿ, ರಸ್ತೆ ತುಂಡರಿಸಿ, ಕುಡಿಯುವ ನೀರಿಗೂ ತೊಂದರೆ ಮಾಡಿ, ನನ್ನ ಮೇಲೆ ಹಲ್ಲೆ ಮಾಡಿರುವುದರಲ್ಲದೇ ಅಕ್ಕಪಕ್ಕದ ಜಾಗವೆಲ್ಲಾ ತನ್ನದು ಎಂದು ಅಕ್ರಮ ಪ್ರವೇಶ ಮಾಡಿ ಕಿರುಕುಳ ನೀಡುತ್ತಿದ್ದರು ಎಂದೂ ಪೋಲೀಸ್ ದೂರಿನಲ್ಲಿ ತಿಳಿಸಿದ್ದಾರೆ.