ರಸ್ತೆಯ ಇಕ್ಕೆಲಗಳ ಕಾಡು ಕಡಿಯುವ ಸೇರಿದಂತೆ ಹಲವು ಬೇಡಿಕೆಗಳ ಈಡೆರಿಕೆಗೆ ಗ್ರಾಮಸ್ಥರಿಂದ ಮನವಿ
ಮರ್ಕಂಜ ಗ್ರಾಮ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಕೊರತ್ತೋಡಿ, ಇಚ್ಚೋಡಿಕಾನ, ಹೈದಂಗೂರು, ರೆಂಜಾಳ, ದಾಸರಬೈಲು ಭಾಗಗಳಲ್ಲಿ ಕಳೆದ ಹತ್ತು ದಿನಗಳಿಂದ ಕಾಡಾನೆ ಹಿಂಡು ದೊಡ್ಡತೋಟ ಮರ್ಕಂಜದ ಮುಖ್ಯ ರಸ್ತೆಯಲ್ಲಿ ಹಗಲು ರಾತ್ರಿ ಕಾಣಸಿಗುವುದರಿಂದ, ಮುನ್ನಚ್ಚರಿಕೆಯಾಗಿ ಗ್ರಾಮಸ್ಥರು ಸಭೆ ನಡೆಸಿ ಇಲಾಖೆಗಳಿಗೆ ಮನವಿ ನೀಡಿದ್ದಾರೆ.
ಮನವಿಯಲ್ಲಿ ಕೆಲವೊಂದು ಈ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು, ದೈನಂದಿನ ಚಟುವಟಿಕೆಗಳಿಗೆ ಕಾಡಾನೆಯಿಂದ ವಾಹನಗಳಲ್ಲಿ ಸಂಚಾರಿಸುವ ಪ್ರಯಾಣಿಕರಿಗೆ ಮತ್ತು ನಡೆದುಕೊಂಡು ಹೋಗುವ ಕೂಲಿ ಕಾರ್ಮಿಕರಿಗೂ ಜೀವ ಭಯ ಉಂಟಾಗಿದ್ದು, ಈ ಹಿಂದೆ ಕಡಬದಲ್ಲಿ ಪ್ರಾಣ ಹಾನಿಯಾದಂತೆ ಇಲ್ಲಿಯೂ ಕೂಡ ಅವಘಡ ಸಂಭವಿಸುವ ಮೊದಲೇ, ಈ ಭಾಗದ ಕಾಡಾನೆ ಹಾವಳಿ ಪೀಡಿತ ಕೃಷಿಕ ರೈತರು ಮತ್ತು ಗ್ರಾಮಸ್ಥರು ದಿನಾಂಕ ನ.24ರಂದು ರೆಂಜಾಳ ವಿನಾಯಕ ಸಭಾ ಭವನದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿಯವರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ ಮತ್ತು ಸದಸ್ಯರು ಹಾಗೂ ದೇವಳದ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ ಕಾಡಾನೆ ಉಪಟಳವನ್ನು ತಪ್ಪಿಸಲು ಹಾಗೂ ಜನರು ನಿರ್ಭೀತಿಯಿಂದ ರಸ್ತೆಯಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆಯೂ, ಈಗಾಗಲೇ ಕೃಷಿ, ತೋಟಕ್ಕೆ ಆನೆ ಹಿಂಡು ನುಗ್ಗಿದ್ದು ಕೃಷಿಯನ್ನು ನಾಶಮಾಡಿರುತ್ತದೆ. ಹೀಗಾಗಿ ಈ ಬಗ್ಗೆ ಅರಣ್ಯದ ಮಧ್ಯ ಭಾಗದಲ್ಲಿ ಹಾದು ಹೋಗುವ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ದಟ್ಟವಾಗಿ ಬೆಳೆದಿರುವ ಕಾಡು ಪೊದೆಗಳನ್ನು ಕಡಿಯುವುದರಿಂದ ಕಾಡಾನೆಗಳು ಇದ್ದರೆ ದೂರದಿಂದಲೇ ಗಮನಿಸಿಕೊಂಡು ಜಾಗರೂಕತೆಯಿಂದ ಸಂಚರಿಸುವುದಕ್ಕೆ ಅನುಕೂಲವಾಗಬಹುದು. ಹಾಗೆಯೇ ಮುಖ್ಯರಸ್ತೆಯಲ್ಲಿರುವ ವಿದ್ಯುತ್ ಕಂಬಗಳಿಗೆ ದಾರಿದೀಪವನ್ನು ಅಳವಡಿಸುವ ಮೂಲಕ ರಾತ್ರಿ ಸಂಚರಿಸುವ ರಬ್ಬರ್ ಟೇಪರ್ಸ್, ಕಾರ್ಮಿಕರು ಕೂಲಿ ಹಾಗೂ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿ ಜಾಗರೂಕತಯಿಂದ ಸಂಚರಿಸಬಹುದು. ಇದು ತಾತ್ಕಾಲಿಕ ಪರಿಹಾರವಾಗಿರುತ್ತದೆ. ಮುಂದಿನ ದಿನಗಳಲ್ಲಿ ಕೃಷಿ ತೋಟಕ್ಕೆ ಹೆಚ್ಚಿನ ಹಾನಿಯಾಗದ ರೀತಿಯಲ್ಲಿ ಆರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಳಿನಿಂದ ಆಗ್ರಹಿಸಿ, ಅರಣ್ಯಾಧಿಕಾರಿಗಳಿಗೆ, ತಹಶೀಲ್ದಾರ್ ರವರಿಗೆ, ಶಾಸಕರಿಗೆ ಜ.25ರಂದು ಮನವಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ, ಸವಿನ್ ಕೊಡಪಾಲ, ಮೋನಪ್ಪ ಪೂಜಾರಿ ಹೈದಂಗೂರು, ಶಶಿಕಾಂತ ಗುಳಿಗಮೂಲೆ, ಶಿವರಂಜನ್ ರಾವ್ ದಾಸರಬೈಲು ಉಪಸ್ಥಿತರಿದ್ದರು.