ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ , ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಅತ್ಯಧಿಕ ಪ್ರಸಾರ ಸಂಖ್ಯೆ ಹೊಂದಿರುವ ಸುದ್ದಿ ಬಿಡುಗಡೆ ಪತ್ರಿಕೆ ಸ್ಥಳೀಯ ಪತ್ರಿಕೆಗಳಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಸ್ಥಳೀಯ ಪತ್ರಿಕೆಗಳ ಬಗ್ಗೆ ಅಧ್ಯಯನ ಮಾಡಲು ಆಸಕ್ತಿ ಇರುವವರಿಗೆ ಸುದ್ದಿ ಬಿಡುಗಡೆ ಅತ್ಯಂತ ಸೂಕ್ತ ವೇದಿಕೆಯಾಗಿದೆ ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ನಡೆದ “ಸ್ಥಳೀಯ ಪತ್ರಿಕೆಗಳು-ಜಾಹೀರಾತು- ವಿತರಕರು “ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಡಾ.ಯು.ಪಿ.ಶಿವಾನಂದರು ಎಲ್ಲ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಕಳೆದ 4 ದಶಕದಿಂದ ಸುದ್ದಿ ಬಿಡುಗಡೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವಿಶ್ವಾಸಾರ್ಹ ಸುದ್ದಿ ನೀಡಿದರೆ ಸ್ಥಳೀಯ ಪತ್ರಿಕೆಗಳು ಕೂಡಾ ಬೆಳೆಯಲು ಸಾಧ್ಯ ಎನ್ನುವುದನ್ನು ನಾಡಿಗೆ ಸಾಧಿಸಿ ತೋರಿಸಿದ್ದಾರೆ ಎಂದು ಹರೀಶ್ ರೈ ಹೇಳಿದರು.
ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್ .ಬಿ.ದಿನೇಶ್ ವಿಚಾರಗೋಷ್ಠಿ ಉದ್ಘಾಟಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹಿರಿಯ ಪತ್ರಕರ್ತರಾದ ಎಸ್.ನಾಗಣ್ಣ, ಟಿ.ಎಂ.ಸತೀಶ್ ಮುಂತಾದವರು ಉಪಸ್ಥಿತರಿದ್ದರು.