ಊರ ಶಾಲೆ ಸಂಸ್ಕಾರ ನೀಡಿ ಬದುಕಿಗೆ ಬೆಳಕು ತೋರುವ ದಾರಿದೀಪ ಇದ್ದಂತೆ : ಪತ್ರಕರ್ತ ಚಂದ್ರಶೇಖರ ಮಂಡೆಕೋಲು
ಸುಳ್ಯ: ಊರ ದೇಗುಲ ಶ್ರದ್ಧಾ ಭಕ್ತಿಗೆ ರಹದಾರಿ ಒದಗಿಸಿದರೆ ಊರ ಶಾಲೆ ಉತ್ತಮ ಸಂಸ್ಕಾರ ನೀಡಿ ಸಮೃದ್ಧ ಬದುಕಿಗೆ ದಾರಿದೀಪ ಎಂದು ಹಿರಿಯ ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಹೇಳಿದರು.
ಮಂಡೆಕೋಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಜರುಗಿದ ಗಣರಾಜ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ವಿದ್ಯಾ ಬುದ್ಧಿಗಳನ್ನು ದಯಪಾಲಿಸುವ ಅಕ್ಷರ ಕಲಿತ ಶಾಲೆಗೆ ಗೌರವ ನೀಡುವುದು ಎಲ್ಲರ ಕರ್ತವ್ಯ. ಸರಕಾರಿ ಶಾಲೆಯ ಅವಗಣನೆ ಮಾಡುವುದು ಸರಿಯಲ್ಲ. ಸರಕಾರಿ ಶಾಲೆಯಲ್ಲಿ ಕಲಿತರೂ ಬದುಕಲ್ಲಿ ಉನ್ನತ ಸ್ತಾನಮಾನ ಅಲಂಕರಿಸಿದ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆಯಬೇಕು ಎಂದವರು ಕಿವಿಮಾತು ಹೇಳಿದರು.
ಖ್ಯಾತ ವೈದ್ಯ ಅನಂತಪದ್ಮನಾಭ ಭಟ್ ಎರ್ಕಲ್ಪಾಡಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಶ್ ಕಣೆಮರಡ್ಕ ವಹಿಸಿದ್ದರು.
ಸನ್ಮಾನ
ಕಾರ್ಯಕ್ರಮದಲ್ಲಿ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹಾಗೂ ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಲಿಂಗಪ್ಪ ಗೌಡ, ಪದ್ಮಾವತಿ ನಾಯಕ್ ಬೊಳುಗಲ್ಲು, ವಿಶ್ವನಾಥ ಜಾಲಬಾಗಿಲು, ಪೂರ್ಣಚಂದ್ರ ಕಣೆಮರಡ್ಕ, ಜನಾರ್ದನ ಬರೆಮೇಲು, …..ಜಯರಾಮ ಚಾಕೋಟೆ, ಉದಯಕುಮಾರ್ ತಲ್ಪಚೇರಿ
ಪ್ರಕಾಶ್ ಕಣೆಮರಡ್ಕ ಹಾಗೂ ಲತಾ ಕೋರನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅಜ್ಜಾವರ ಪ್ರೌಢಶಾಲಾ ಶಾಲಾ ಮುಖ್ಯೋಪಾಧ್ಯಾಯ ಗೋಪಿನಾಥ್, ಉದ್ಯಮಿ ನಿರಂಜನ್ ಮಾವಂಜಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಮಂಜುಳಾ, ಗ್ರಾ.ಪಂ ಸದಸ್ಯೆ ಪ್ರಮೀಳಾ ಮಂಡೆಕೋಲು, ಪ್ರಾಧ್ಯಾಪಕ ಅನಂತಯ್ಯ ಬೊಳುಗಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಶಾಲಾ ವಿದ್ಯಾರ್ಥಿ ನಾಯಕ ಅಜಯ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ ಅತಿಥಿಗಳನ್ನು ಸ್ವಾಗತಿಸಿದರು. ಸಹಶಿಕ್ಷಕಿ ವನಿತಾ ಧನ್ಯವಾದ ಸಮರ್ಪಿಸಿದರು. ಸಾವಿತ್ರಿ ಕಣೆಮರಡ್ಕ ಹಾಗೂ ಸಹ ಶಿಕ್ಷಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನರಂಜಿಸಿದವು.