ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನೂತನ ಅಧ್ಯಕ್ಷರಾಗಿ ಅಜಿತ್ ರಾವ್ ಕಿಲಂಗೋಡಿ, ಉಪಾಧ್ಯಕ್ಷರಾಗಿ ಹರ್ಷ ಜೋಗಿಬೆಟ್ಟು

0

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನೂತನ ಅಧ್ಯಕ್ಷರಾಗಿ 3ನೇ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾದ ಅಜಿತ್ ರಾವ್ ಕಿಲಂಗೋಡಿ ಅಧ್ಯಕ್ಷರಾಗಿಯೂ, ಹರ್ಷ ಜೋಗಿಬೆಟ್ಟು ಉಪಾಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫೆ. 7ರಂದು ಚುನಾವಣೆ ನಡೆದಿದ್ದರೂ, ಕಾಂಗ್ರೆಸ್ ಕಡೆಯಿಂದ 200 ಮತ್ತು ಬಿಜೆಪಿ ಕಡೆಯಿಂದ 266 ಸದಸ್ಯರು ಕೋರ್ಟ್ ಮೂಲಕ ಮತದಾನದ ಹಕ್ಕನ್ನು ಪಡೆದುಕೊಂಡು ಬಂದು ಮತ ಚಲಾಯಿಸಿದ್ದರಿಂದ ವಿಜೇತ ಅಭ್ಯರ್ಥಿಗಳ ಅಧಿಕೃತ ಘೋಷಣೆ ನಡೆದಿರಲಿಲ್ಲ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶದಂತೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಲಯ ಮೇಲ್ವಿಚಾರಕರಾದ ಪ್ರದೀಪ್ ಕೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದರು. ಬಳಿಕ ಕೋರ್ಟಿನ ಆದೇಶದ ಮೇರೆಗೆ ಮಾ. 17ರಂದು‌ ಚುನಾವಣಾಧಿಕಾರಿ ಶಿವಲಿಂಗಯ್ಯ ಮೂಲಕ ಅಧಿಕೃತ ಘೋಷಣೆ ನಡೆದಿತ್ತು.
ಒಟ್ಟು 13 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಸಹಕಾರ ಭಾರತಿಯ ಅಭ್ಯರ್ಥಿಗಳು ಪಡೆದಿದ್ದರು. ಇದೀಗ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾ. 28ರಂದು ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಅಜಿತ್ ರಾವ್ ಕಿಲಂಗೋಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹರ್ಷ ಜೋಗಿಬೆಟ್ಟು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಭಾಗವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ, ಸಂಘದ ನಿರ್ದೇಶಕರಾದ ಶುಭ ಕುಮಾರ್ ಬಾಳೆಗುಡ್ಡೆ, ಪಂಕಜಾಕ್ಷಿ ಮರುವಂಜ, ರವೀಂದ್ರ ರೈ ಟಪ್ಪಾಲುಕಟ್ಟೆ, ರಾಮಪ್ರಸಾದ ಕಾಂಚೋಡು, ಬಿ. ಪ್ರಭಾಕರ ಆಳ್ವ ಬಜನಿಗುತ್ತು, ಸರಿತಾ ಕಂಡಿಕಟ್ಟ, ರಾಮಣ್ಣ ಪರವ ಬಾಳಿಲ, ರವಿಪ್ರಸಾದ್ ರೈ ಕಳಂಜ, ಪ್ರಶಾಂತ್ ಕುಮಾರ್ ಕಿಲಂಗೋಡಿ ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು, ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.