ಪಾಕಿಸ್ಥಾನಿ ಉಗ್ರಗಾಮಿಗಳ ವಿರುದ್ದ ಸಮರ ಸಾರಿರುವ ಭಾರತೀಯ ಸೇನೆಯ ಯಶಸ್ಸಿಗಾಗಿ ಗೂನಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ಇಂದಿನ ಜುಮಾ ನಮಾಜಿನ ಬಳಿಕ ವಿಶೇಷ ಪ್ರಾರ್ಥನೆ ಜರುಗಿತು. ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿ “ಪಾಕಿಸ್ಥಾನದ ಉಗ್ರಗಾಮಿಗಳು ಅಮಾಯಕ ಭಾರತೀಯರ ಮೇಲೆ ನಡೆಸಿದ ಅಮಾನವೀಯ ಕೃತ್ಯಕ್ಕೆ ಪ್ರತ್ಯುತ್ತರವಾಗಿ ನಮ್ಮ ಸೈನ್ಯವು ಪಾಕಿಸ್ಥಾನದ ಉಗ್ರಗಾಮಿಗಳ ನೆಲೆಗಳನ್ನು ಧ್ವಂಸಗೊಳಿಸಿದೆ, ಇದಕ್ಕಾಗಿ ಭಾರತೀಯ ಸೇನೆಯನ್ನು ವಿಶೇಷವಾಗಿ ಅಭಿನಂದಿಸುತ್ತೇವೆ. ಉಗ್ರಗಾಮಿಗಳನ್ನು ಮಟ್ಟ ಹಾಕುವ ಮೂಲಕ ಈ ನೆಲದಲ್ಲಿ ಶಾಂತಿ ನೆಲೆಸಲು ಹೋರಾಡುತ್ತಿರುವ ನಮ್ಮ ಸೈನ್ಯದ ತ್ಯಾಗವನ್ನು ನಾವು ಸದಾ ಸ್ಮರಿಸುತ್ತೇವೆ” ಎಂದರು.









ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು.ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಶದಿಯವರು ಮಾತನಾಡಿ “ನಮಗೆ ನೆಲ, ಜಲ, ಅನ್ನ, ಆಹಾರವನ್ನು ನೀಡಿದ ಭಾರತದ ಮೇಲೆ ಪ್ರತಿಯೊಬ್ಬರಿಗೂ ಅಭಿಮಾನವಿರಬೇಕು. ನಾವು ವಾಸಿಸುತ್ತಿರುವ ದೇಶದ ಮೇಲೆ ಸದಾ ನಾವು ಕೃತಜ್ಞರಾಗಿ, ಸ್ನೇಹವನ್ನು ಹೊಂದಿರಬೇಕೆಂದು ಪ್ರವಾದಿ ಮುಹಮ್ಮದ್ (ಸ.ಅ.) ರವರು ಕಲಿಸಿದ ಆ ಆದರ್ಶದ ಮಾರ್ಗದಲ್ಲಿ ನಾವು ಸಾಗಬೇಕು. ಪಾಕಿಸ್ಥಾನಿ ಉಗ್ರಗಾಮಿಗಳನ್ನು ಸದೆಬಡೆಯಲು ಹೋರಾಡುತ್ತಿರುವ ನಮ್ಮ ಹೆಮ್ಮೆಯ ಭಾರತೀಯ ಸೈನ್ಯಕ್ಕೆ ನಮ್ಮ ವಿಶೇಷ ಪ್ರಾರ್ಥನೆ ಎಂದಿಗೂ ಇದ್ದು, ಪ್ರತಿಯೊಬ್ಬರು ಒಗ್ಗಟ್ಟಾಗಿ ಭಾರತದ ಐಕ್ಯತೆಗಾಗಿ ಶ್ರಮಿಸಬೇಕೆಂದು” ಈ ಸಂದರ್ಭ ಅವರು ಕರೆ ನೀಡಿದರು.
ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರುಗಳು, ಸದರ್ ಮುಅಲ್ಲಿಂ, ಜಮಾಅತ್ ಸಮಿತಿಯ ಪದಾಧಿಕಾರಿಗಳು, ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರು, ಪದಾಧಿಕಾರಿಗಳು, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು, ಸುನ್ನೀ ಸಂಘ, ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಜಮಾಅತ್ ನ ಸದಸ್ಯರುಗಳು ಈ ವೇಳೆ ಉಪಸ್ಥಿತರಿದ್ದರು.










