ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲ ರಜತ ಸಂಭ್ರಮ ಉದ್ಘಾಟಿಸಿ ಶ್ರೀಮತಿ ಶೋಭಾ ಚಿದಾನಂದ

‘ಮಹಿಳೆಯರು ಅಬಲೆಯರಲ್ಲ. ಯಾವ ಕೆಲಸ ಮಾಡಲೂ ಅವರು ಸಮರ್ಥರಿದ್ದಾರೆ. ಆದರೆ ನನಗೆ ಆದೀತೆ? ಎಂಬ ನಕಾರಾತ್ಮಕ ಚಿಂತನೆಯಿಂದ ದೂರವಿದ್ದು, ನನಗೆ ಸಾಧ್ಯ ಎಂಬ ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಿ. ಹಾಗೆ ಮಾಡಿದಾಗ ಯಶಸ್ವಿಯಾಗುವುದು ಖಚಿತವೆಂಬುದಕ್ಕೆ ಮಾನಸ ಮಹಿಳಾ ಮಂಡಲವೇ ಸಾಕ್ಷಿ’ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ಹೇಳಿದರು.
ಸುಳ್ಯದ ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲದ ರಜತ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಒತ್ತಡದ ಜೀವನದಲ್ಲಿ ಇರುತ್ತೇವೆ. ಅದರಿಂದ ಹೊರಬರಲು ನಾವು ಮನೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದರ ಜತೆಗೆ ಸಾರ್ವಜನಿಕ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ನಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟುಕೊಳ್ಳಬೇಕು. ಎಂದ ಶೋಭಾ ಚಿದಾನಂದರು, ನಿಮ್ಮ ಪರಿಸರವನ್ನು ದೂರಬೇಡಿ, ಅದೇ ಪರಿಸರದೊಂದಿಗೆ ಜೀವಿಸಿ. ನಾವಿರುವ ಪರಿಸರವನ್ನು ಪ್ರೀತಿಸಿದರೆ ಕಾಡಲ್ಲಾದರೂ ಬದುಕಬಹುದು. ನೆಮ್ಮದಿ ಸಿಗುತ್ತದೆ. ನೆಮ್ಮದಿ ಇದ್ದರೆ ಆರೋಗ್ಯ ಉಳಿಯುತ್ತದೆ. ನಮ್ಮ ಉತ್ಸಾಹ ಹೇಗಿರುತ್ತದೋ ಅದೇ ರೀತಿಯ ಜನರು ನಮ್ಮ ಸಂಗಕ್ಕೆ ಬರುತ್ತಾರೆ ಎಂದರು.









ಸಭೆಯ ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಆಚರಣಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತ್ತಡ್ಕ ವಹಿಸಿದ್ದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೋ.ಯೋಗಿತಾ ಗೋಪಿನಾಥ್ ಹಾಗೂ ಲಯನ್ಸ್ ವಲಯಾಧ್ಯಕ್ಷೆ ಲ.ರೂಪಶ್ರೀ ಜೆ.ರೈ ಮುಖ್ಯ ಅತಿಥಿಗಳಾಗಿದ್ದರು.
ಈ ಹಿಂದೆ ಮಹಿಳಾ ಮಂಡಲದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರನ್ನು ಹಾಗೂ ಹಾಲಿ ಸದಸ್ಯರನ್ನು ಸನ್ಮಾನಿಸಲಾಯಿತಲ್ಲದೆ, ಕ್ರೀಡಾ ಹಾಗೂ ಸಾಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಾನಸ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಚಂದ್ರಾಕ್ಷಿ ಕೆ.ರೈ ಸ್ವಾಗಿತಿ, ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ ಮಹಿಳಾ ಮಂಡಲ ೨೫ ವರ್ಷಗಳ ಕಾಲ ಸಾಗಿಬಂದ ದಾರಿಯನ್ನು ಪ್ರಾಸ್ತಾವಿಕ ಭಾಷಣದಲ್ಲಿ ಮೆಲುಕು ಹಾಕಿದರು. ಶ್ರೀಮತಿ ಶೈಲಜ ಪಿ. ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಶ್ರೀಮತಿ ಅನನ್ಯ ಅನಿಲ್ ಹಾಗೂ ಗೌರವ ಸಲಹೆಗಾರ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುನಿತಾ ರಾಮಚಂದ್ರ, ಶ್ರೀಮತಿ ಸವಿತ ಲಕ್ಷ್ಮಣ ಆಚಾರ್ಯ, ಶ್ರೀಮತಿ ರಾಜೇಶ್ವರಿ ಶುಭಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾತ್ರಿ ಶಾಲಾ ವಿದ್ಯಾರ್ಥಿಗಳಿಂದ ಸ್ಥಳೀಯ ಪ್ರತಿಭೆಗಳಿಂದ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾಮಂದಿರ ಬೆಳ್ಳಾರೆಯವರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

ಸಮವಸ್ತ್ರಭರಿತ ಪಥ ಸಂಚಲನ
ರಜತ ಸಂಭ್ರಮ ಪ್ರಯುಕ್ತ ಮಾನಸ ಮಹಿಳಾ ಮಂಡಲದ ಸದಸ್ಯೆಯರು ಏಕಬಣ್ಣ ಮತ್ತು ಏಕ ವಿನ್ಯಾಸದ ಸೀರೆ ಹಾಗೂ ರವಿಕೆ ಧರಿಸಿದ್ದರು. ಸಂಜೆ ೫ ಗಂಟೆಗೆ ಜಟ್ಟಿಪಳ್ಳದ ಸ್ವಾಗತ ಫಲಕದ ಬಳಿ ಜಂಕ್ಷನ್ನಲ್ಲಿ ಸೇರಿದ ಅವರೆಲ್ಲ ಅಲ್ಲಿಂದ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದ್ದ ಯುವಸದನ ವಠಾರದವರೆಗೆ ಸಮವಸ್ತ್ರದಲ್ಲಿ ಪಥಸಂಚಲನ ನಡೆಸಿದರು. ಕುಣಿತ ಭಜನೆಯ ತಂಡ, ಚೆಂಡೆವಾದನ, ಸುಡುಮದ್ದು, ಬೊಂಬೆ ಪ್ರದರ್ಶನಗಳು ಮೆರವಣಿಗೆ ಸಾಥ್ ನೀಡಿದವು. ಮುಳಿಯ ಜ್ಯುವೆಲ್ಲರ್ಸ್ ಮಾಲಕ ಮುಳಿಯ ಗೋವಿಂದ ಭಟ್ ಮೆರವಣಿಗೆಗೆ ಚಾಲನೆ ನೀಡದರು.











