ರಸ್ತೆ ಬದಿ ಇದ್ದ ಮರ ತೆರವು ವೇಳೆ ವರ್ಗ ಜಾಗಕ್ಕೆ ಬಿದ್ದು ಕೃಷಿ ನಾಶ : ದೂರು

0

ರಸ್ತೆ ಬದಿ ಇದ್ದ ಬೃಹತ್ ಮರವೊಂದನ್ನು ಅರಣ್ಯ ಇಲಾಖೆಯವರು ಗುತ್ತಿಗೆದಾರರ ಮೂಲಕ ತೆರವುಗೊಳಿಸುವ ವೇಳೆ ಆ ಮರ ನಮ್ಮ ಜಾಗಕ್ಕೆ ಬಿದ್ದು ಕೃಷಿ ನಾಶ ಉಂಟಾಗಿದೆ ಎಂದು ಗೂನಡ್ಕದ ಬೀಜದಕಟ್ಟೆ ಬಿ.ಕೆ.ಕೇಶವ ಎಂಬವರು ಅರಣ್ಯ ಇಲಾಖೆಗೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.

” ನಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೃಹತ್ ಗಾತ್ರದ ಹಾಲು ಮಡ್ಡಿ ಮರವನ್ನು ಕಡಿದಿದ್ದು, ಅದು ನಮ್ಮ ವರ್ಗಸ್ಥಳದಲ್ಲಿ ಬಿದ್ದು, ಅಲ್ಲಿ ನೆಟ್ಟಿರುವ ಬಾಳೆ, ಹಲಸು ಮರ, ಮಾವಿನಗಿಡ, ನೇರಳೆ, ಮೂಸಂಬಿ, ದಾಳಿಂಬೆ, ಸೀಬೆಕಾಯಿಯ ಮರಗಳು ನಾಶವಾಗಿವೆ. ಹಾಗಾಗಿ ಸೂಕ್ತ ಕ್ರಮ ಕೈಗೊಂಡು ನಮಗೆ ಆದ ನಷ್ಟವನ್ನು ಕೊಡಿಸಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

” ರಸ್ತೆ ಬದಿಯ ಅಪಾಯಕಾರಿ ಮರವನ್ನು ತೆರವುಗೊಳಿಸಬೇಕೆಂದು ಪಂಚಾಯತ್‌ನಿಂದ ಸೂಚನೆ ಬಂದ ಹಿನ್ನಲೆಯಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಈ ವೇಳೆ ಸಣ್ಣ ಹಾನಿ ಆಗಿರಬಹುದು. ನಾವು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ ಎಂದು ಅರಣ್ಯ ಇಲಾಖಾ ಸಿಬ್ಬಂದಿಗಳು ತಿಳಿಸಿದ್ದರೆ, ” ಅಪಾಯಕಾರಿ ಮರ ಅದಾಗಿರುವುದರಿಂದ ನಾವು ತೆರವುಗೊಳಿಸಿದ್ದೇವೆ ” ಎಂದು ಪಂಚಾಯತ್‌ನವರು ತಿಳಿಸಿದ್ದಾರೆ.