‘ಗಣಿತೋತ್ಸವ’ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಕೋಲಾರದಿಂದ ಆಗಮಿಸಿರುವ ಅಂತಾರಾಷ್ಟ್ರೀಯ ಗಣಿತಜ್ಞರಾಗಿರುವ ವಿ. ಎಸ್. ಎಸ್. ಶಾಸ್ತ್ರಿಯವರಿಂದ 3 ದಿನಗಳ ಗಣಿತ ಕಾರ್ಯಗಾರ ನಡೆಯಿತು.


“ಗಣಿತವೆಂದರೆ ಅದು ಕಬ್ಬಿಣದ ಕಡಲೆಯಲ್ಲ, ಅದಕ್ಕೆ ಯಾರೂ ಅಂಜಬೇಕಾಗಿಲ್ಲ. ಗಣಿತವನ್ನು ಸುಲಭವಾಗಿ ಕೈವಶ ಮಾಡಿಕೊಳ್ಳಬಹುದು” ಎಂದು ಶಾಸ್ತ್ರಿಯವರು ಹೇಳಿದರು.

ಅಂತಹ ಸುಲಭ ಸೂತ್ರಗಳನ್ನು ಕಂಡುಹಿಡಿದು ವಿಶ್ವದ ವಿವಿಧಡೆಗಳಲ್ಲಿ 800ಕ್ಕೂ ಹೆಚ್ಚು ಕಾರ್ಯಗಾರಗಳನ್ನು ನಡೆಸಿರುವ ವಿ. ಎಸ್. ಎಸ್.ಶಾಸ್ತ್ರಿ ಅವರು ಸುಳ್ಯದ ಸ್ನೇಹ ಶಾಲೆಯ ವಿದ್ಯಾರ್ಥಿಗಳಿಗೆ ಜೂನ್ 19 ಮತ್ತು 20 ರಂದು ಗಣಿತ ಕಾರ್ಯಗಾರವನ್ನು ನಡೆಸಿಕೊಟ್ಟರು.

       ಜೂನ್ 21ರಂದು ನಡೆದ ಗಣಿತೋತ್ಸವ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ಜೊತೆಗೆ ಸಂಖ್ಯೆಗಳೊಂದಿಗೆ ಆಟ, ಪಗಡೆ ಆಟದ ಮೂಲಕ ಸಂಖ್ಯೆಗಳನ್ನು ಸರಳವಾಗಿ ಕೂಡಿಸುವುದು,  ಕಾಗದವನ್ನು ಮಡಿಸುವ ಒರಿಗಾಮಿ ಕಲೆಯ ಮೂಲಕ ಗಣಿತದ ವಿವಿಧ ಆಕೃತಿಗಳು, ಅದರಲ್ಲಿಯೂ ಪ್ರಮುಖವಾಗಿ ದ್ವಾದಶಮುಖಿ, ತ್ರಿಕೋನೀಯ ಪಿರಮಿಡ್, ಚೌಕ ಘನ, ಬೈನರಿ ಅಂಕಿಗಳಿಂದ ಜನ್ಮ ದಿನಾಂಕವನ್ನು ಹೇಳುವುದು, ಗಣಿತದಲ್ಲಿ ಬರುವ ಪೈ ಪರಿಕಲ್ಪನೆ, ಅಳತೆ ಕೋಲಿನ ಸಹಾಯದಿಂದ ಸಂಖ್ಯೆಗಳನ್ನು ವೇಗವಾಗಿ ಕೂಡಿಸುವುದು, ಗ್ರಹಗಳ ದೂರವನ್ನು ಗಣಿತದಲ್ಲಿ ಸುಲಭವಾಗಿ ಅಳೆಯುವ ವಿಧಾನ, ಎತ್ತರ ಜಿಗಿತ ಕ್ರೀಡೆಯಲ್ಲಿ ಗಣಿತವು ಹೇಗೆ ರೂಪಾಂತರಗೊಳ್ಳುತ್ತದೆ ಎಂಬಿತ್ಯಾದಿ ಗಣಿತೀಯ ಕೌಶಲಗಳನ್ನು ಪ್ರದರ್ಶಿಸಿದರು. 



      ಈ ಸಂದರ್ಭದಲ್ಲಿ ವಿ. ಎಸ್. ಎಸ್ ಶಾಸ್ತ್ರಿಯವರ ವಿದ್ಯಾರ್ಥಿ, ನಿಟ್ಟೆ ಇಂಜಿನಿಯರಿಂಗ್ ಸಂಸ್ಥೆಯ ಎಕ್ಸ್ಪೆರಿ ಮೈಂಡ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಇದರ  ಸಂಸ್ಥಾಪಕ ಅಕ್ಷಯ್ ಮಾಶೆಲ್ಕರ್ ರವರು ಮಾರ್ಗದರ್ಶನ ನೀಡಿ, ಅತ್ಯತ್ತಮ ಮಾದರಿ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.   ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಮತ್ತು ಶಾಲಾ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರ ಮಾರ್ಗದರ್ಶನದಲ್ಲಿ  ಗಣಿತೋತ್ಸವವು ಯಶಸ್ವಿಯಾಗಿ ಜರಗಿತು. 

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡಕೊಂಡರು.