ಪಂಜ: ರಸ್ತೆ ಬದಿ ಬಿಟ್ಟ ನಾಯಿ ಮರಿಗಳ ಮಾಲಿಕನಿಗೆ 500 ರೂ. ದಂಡ

0

ಪಂಜ ಪೇಟೆಯ ಸಂತೆ ಮಾರುಕಟ್ಟೆ ಬಳಿ ನಾಯಿ ಮರಿಗಳನ್ನು ಬಿಟ್ಟು ಹೋದ ಸುಬ್ರಹ್ಮಣ್ಯದ ವ್ಯಕ್ತಿಗೆ ಪಂಜ ಗ್ರಾಮ ಪಂಚಾಯತ್ ದಂಡವಿಧಿಸಿದ ಘಟನೆ ಜು.19 ರಂದು ವರದಿಯಾಗಿದೆ.


ಜು.18 ರಂದು ಮುಂಜಾನೆ ಸುಬ್ರಹ್ಮಣ್ಯದ ಉದಯ ಮೊಂತೇರೋ ಎಂಬವರು ರಿಕ್ಷಾದಲ್ಲಿ ಬಂದು ಪಂಜ ಸಂತೆ ಮಾರುಕಟ್ಟೆ ಬಳಿ ಐದು ನಾಯಿ ಮರಿಗಳನ್ನು ಬಿಟ್ಟು ಹೋಗಿದ್ದರು. ಈ ನಾಯಿ ಮರಿಗಳನ್ನು ಇಲ್ಲಿ ಬಿಟ್ಟು ಹೋದುದು ಯಾರೆಂದು ಸಿ. ಸಿ. ಕ್ಯಾಮರಗಳನ್ನು ಪರಿಶೀಲಿಸಿದಾಗ ರಿಕ್ಷಾದಲ್ಲಿ ಬಂದು ನಾಯಿ ಮರಿಗಳನ್ನು ಬಿಟ್ಟು ಹೋದ ವಿಷಯ ಕಂಡು ಬಂತು.

ಜು.19 ರಂದು ಅದೇ ರಿಕ್ಷಾ ಪಂಜಕ್ಕೆ ಬಂದು ವಾಪಸ್ ತೆರಳುತ್ತಿರುವುದು ಪಂಚಾಯತ್ ನವರಿಗೆ ಗೊತ್ತಾಗಿ ಅವರು ಪಲ್ಲೋಡಿಗೆ ಫೋನ್ ಮಾಡಿ ರಿಕ್ಷಾ ನಿಲ್ಲಿಸಲು ತಿಳಿಸಿದರು. ಅದರಂತೆ ಬಾಲಕೃಷ್ಣ ಪಲ್ಲೋಡಿಯವರು ರಿಕ್ಷಾವನ್ನು ನಿಲ್ಲಿಸಲು ಸಿಗ್ನಲ್ ಕೊಟ್ಟಾಗ ರಿಕ್ಷಾದವರು ನಿಲ್ಲಿಸಲಿಲ್ಲ. ಆಗ ಬಾಲಕೃಷ್ಣ ಪಲ್ಲೋಡಿಯವರು ತನ್ನ ಕಾರಿನಲ್ಲಿ ರಿಕ್ಷಾವನ್ನು ಹಿಂಬಾಲಿಸಿಕೊಂಡು ಹೋಗಿ ಬಳ್ಪದಲ್ಲಿ ಅಡ್ಡಗಟ್ಟಿದರು.


ನಾಯಿ ಮರಿಗಳನ್ನು ಬಿಟ್ಟ ವಿಚಾರ ಕೇಳಿದಾಗ ಅವರು ಒಪ್ಪಿಕೊಂಡರೆನ್ನಲಾಗಿದೆ. ಅವರು ಬಳಿಕ ಅವರನ್ನು ಮತ್ತೆ ಪಂಜ ಗ್ರಾಮ ಪಂಚಾಯತ್ ಗೆ ಕರೆದುಕೊಂಡು ಬರಲಾಯಿತು. ಪಂಜ ಗ್ರಾಮ ಪಂಚಾಯತ್ ನಲ್ಲಿ ನಾಯಿ ಮರಿಗಳನ್ನು ಸಂತೆಯಲ್ಲಿ ಬಿಟ್ಟ ವಾರಿಸುದಾರನಿಗೆ 500 ರೂ. ದಂಡ ವಿಧಿಸಿ ನಾಯಿ ಮರಿಗಳನ್ನು ಎಲ್ಲೂ ರಸ್ತೆ ಬದಿ ಬಿಡದೆ ಸಾಕುವಂತೆ ಸಲಹೆ ನೀಡಿ ಆ ಮರಿಗಳನ್ನು ಅವರ ಜತೆಯೇ ಕಳುಹಿಸಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ,, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯರಾದ ಚಂದ್ರಶೇಖರ ದೇರಾಜೆ, ಲಿಖಿತ್ ಪಲ್ಲೋಡಿ ಉಪಸ್ಥಿತರಿದ್ದರು. ಕಾರ್ಯಾಚರಣೆಯಲ್ಲಿ ಊರವರು ಸಹಕರಿಸಿದರು.