ಸುಳ್ಯ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ : ಆಕರ್ಷಕ ಪಥಸಂಚಲನ

0

“ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ, ಬಲಿದಾನ ಮಾಡಿದವರನ್ನು ನಾವು ಈ ದಿನ ಸ್ಮರಣೆ ಮಾಡಿಕೊಂಡು ಈ ದೇಶಕ್ಕೆ ನಾನೇನು ಕೊಡಲು ಸಾಧ್ಯ ಎನ್ನುವುದನ್ನು ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು. ಹಾಗೂ
ಭ್ರಷ್ಟಾಚಾರ ಮುಕ್ತ ಸುಳ್ಯ ತಾಲೂಕು ನಿರ್ಮಾಣಕ್ಕೆ ಎಲ್ಲರೂ ಕೈ‌ಜೋಡಿಸಬೇಕು” ಎಂದು ಶಾಸಕಿ‌ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಸುಳ್ಯ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇದರ ಆಶ್ರಯದಲ್ಲಿ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ತಾಲೂಕು ಸ್ವಾತಂತ್ರ್ಯೋತ್ಸವ ದಿನಾಚರಣಾ ಕಾರ್ಯಕ್ರಮದ ಅಧ್ಯಕ್ಷತೆ‌ ವಹಿಸಿ ಮಾತನಾಡಿದರು.

“ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದವರಲ್ಲಿ ಸುಳ್ಯ ತಾಲೂಕಿನವರೂ ಇದ್ದಾರೆ ಎನ್ನುವುದು ನಮಗೆ ಹೆಮ್ಮೆ. ಈ 78 ವರ್ಷದಲ್ಲಿ ಒಂದಷ್ಟು ಬದಲಾವಣೆಗಳು ಆಗಿದೆ. ಬಡತನ ಇನ್ನೂ ಇದೆ. ನಮ್ಮಲ್ಲಿ ಪ್ಲಾಸ್ಟಿಕ್ ಟರ್ಪಾಲ್ ನ ಡೇರೆಯಲ್ಲಿ ಇನ್ನೂ ಹಲವರು ವಾಸ ಮಾಡುತ್ತಿದ್ದು ಅವರು ಕುಳಿತ ಜಾಗವನ್ನು ಕೊಡಿಸುವ ಕೆಲಸ ತಹಶೀಲ್ದಾರ್ ಮಾಡಬೇಕು. ಆಗ ನಿಜವಾದ ಸ್ವಾತಂತ್ರ್ಯ” ಎಂದು ಹೇಳಿದರು.

ಧ್ವಜಾರೋಹಣ ‌ನೆರವೇರಿಸಿ, ಗೌರವ ವಂದನೆ ಸ್ಚೀಕರಿಸಿದ ತಹಶೀಲ್ದಾರ್ ಮಂಜುಳಾ ಮಾತನಾಡಿ, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸುಳ್ಯ ತಾಲೂಕಿನ ಕೊಡುಗೆ ಅವಿಸ್ಮರಣೀಯ. 1837, ರಲ್ಲಿ ಬ್ರಿಟೀಷರ ವಿರುದ್ಧ ಸುಳ್ಯ, ಪುತ್ತೂರು, ವ್ಯಾಪ್ತಿಯಲ್ಲಿ ರೈತ ನಾಯಕ ಕಲ್ಯಾಣ ಸ್ವಾಮಿಯ ನಾಯಕತ್ವದಲ್ಲಿ ರೈತರು ಕಂದಾಯದ ವಿರುದ್ಧ ದಂಗೆ ಎದ್ದು ಹೋರಾಡಿದ ಘಟನೆಗಳು ಅಮರ ಸುಳ್ಯ ದಂಗೆ ಎಂಬ ಹೆಸರಿನಲ್ಲಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಭಾರತದ ಚರಿತ್ರೆಯಲ್ಲೇ ಮೊದಲ ಸ್ವಾತಂತ್ರ ಸಂಗ್ರಾಮಕ್ಕೂ ಮೊದಲೇ ಬ್ರಿಟೀಷರ ವಿರುದ್ಧ ಅತ್ಯಂತ ಸಂಘಟಿತವಾಗಿ ಹೋರಾಡಿದ ಕೀರ್ತಿ ಕೆದಂಬಾಡಿ ರಾಮಯ್ಯಗೌಡ, ಕೂಜುಗೋಡು ಮಲ್ಲಪ್ಪ, ಕುಡೇಕಲ್ಲು ಅಪ್ಪಯ್ಯ, ಪುಟ್ಟೇಗೌಡ, ಕುಕ್ಕನೂರು ಚನ್ನಯ್ಯ, ನೀರ್ಕಜೆ ಮಲ್ಲಯ್ಯ, ಪೆರಾಜೆ ಕೃಷ್ಣಯ್ಯ, ಬೀರಣ್ಣ ಬಂಟ ಹುಲಿ ಕಡಿದ ನಂಜಯ್ಯ, ನಾರಣಪ್ಪ ಅಪರಂಪಾರ, ಗುಡ್ಡೆಮನೆ ಅಪ್ಪಯ್ಯ, ಕರಿಬಸವಯ್ಯ, ಇನ್ನೂ ಮುಂತಾದವರಿಗೆ ಸಲ್ಲಬೇಕು, ಈ ಮೂಲಕ ಭಾರತ ದೇಶದಲ್ಲಿ ಬ್ರಿಟಿಷರಿಗೆ ಸ್ಥಳಿಯರು ಪರಕೀಯರು ಎಂಬ ಭೇದದ ಬಿಸಿ ಮುಟ್ಟಿಸಿದ ಕೀರ್ತಿಯೂ ಈ ಅಮರ ಸುಳ್ಯ ದಂಗೆಗೆ ಸಲ್ಲುತ್ತದೆ. ಇಂದಿಗೂ ಕೂಡ ಸಂಪಾಜೆ, ಸುಳ್ಯ, ಬೆಳ್ಳಾರೆ, ಪುತ್ತೂರು, ಮಾಣಿ, ಬಂಟ್ವಾಳ, ಫರಂಗಿಪೇಟೆ ಇತ್ಯಾದಿಗಳು ಐತಿಹಾಸಿಕ ಸ್ಥಳಗಳು ಎಂಬುದು ನಾವು ನೀವುಗಳೆಲ್ಲ ಮನನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಜಿಲ್ಲಾ‌ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್‌ಮುಂಡೋಡಿ ಮಾತನಾಡಿ “ಹಿರಿಯ ಮಾಡಿದ ತ್ಯಾಗ, ಬಲಿದಾನದ ಫಲವಾಗಿ ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಅದನ್ನು ರಕ್ಷಣೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.

ಸುಳ್ಯ‌ನಗರ ಪಂಚಾಯತ್ ಅಧ್ಯಕ್ಷೆ
ಶಶಿಕಲಾ ಎ ನೀರಬಿದಿರೆ, ಸುಳ್ಯ ‌ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಸದಸ್ಯರುಗಳಾದ ಸುಧಾಕರ ಕುರುಂಜಿಭಾಗ್, ಉಮ್ಮರ್ ಕೆ.ಎಸ್., ಶೀಲಾ ಕುರುಂಜಿ, ಶಿಲ್ಪಾ ಸುದೇವ್, ಸುಶೀಲ ಕಲ್ಲುಮುಟ್ಲು, ಡೇವಿಡ್ ಧೀರಾ ಕ್ರಾಸ್ತ, ನಾಮನಿರ್ದೇಶನ ಸದಸ್ಯರುಗಳಾದ ರಾಜು ಪಂಡಿತ್, ಸಿದ್ದೀಕ್ ಕೊಕ್ಕೊ, ಮುಖ್ಯಾಧಿಕಾರಿ ಬಸವರಾಜು, ಸುಳ್ಯ ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ, ಸರ್ಕಲ್ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಮೊದಲಾದವರು ಇದ್ದರು.

ಸಮಾರಂಭದಲ್ಲಿ ನಿವೃತ್ತ ಸೈನಿಕರಾದ ಉತ್ತಪ್ಪ ಗೌಡ ಮುಂಡೋಡಿ ಹಾಗೂ ಚೆನ್ನಪ್ಪ ಗೌಡ ಬಿ. ಯವರನ್ನು ಸನ್ಮಾನಿಸಲಾಯಿತು. ಉತ್ತಪ್ಪ ಗೌಡರ ಪರವಾಗಿ ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಗುರು ಪ್ರಸಾದ್ ರೈಯವರು ಸನ್ಮಾನ ಸ್ವೀಕರಿಸಿದರು.

2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ಹಾಗೂ‌ ಪಿಯುಸಿ ಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಇ.ಒ. ರಾಜಣ್ಣ ಸ್ವಾಗತಿಸಿದರು. ಶಿಕ್ಷಣ ಸಂಯೋಜಕಿ ಸಂಧ್ಯಾ ಶೈಕ್ಷಣಿಕ ಸಾಧಕರನ್ನು ಪರಿಚಯಿಸಿದರು. ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಬಿಇಒ ಶೀತಲ್ ಯು.ಕೆ. ವಂದಿಸಿದರು.

ಎಸ್.ಐ. ಸಂತೋಷ್ ಪಥಸಂಚಲನದ ನೇತೃತ್ವ ವಹಿಸಿದ್ದರು. ಪೋಲೀಸ್, ಗೃಹರಕ್ಷಕ, ನಿವೃತ್ತ ಸೈನಿಕರ ಸಂಘ, ಎನ್.ಸಿ.ಸಿ., ಸ್ಕೌಟ್ ಗೈಡ್ಸ್, ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.