52 ವರ್ಷಗಳ ಬಳಿಕ ಪ್ರೀತಿಯ ಶಿಕ್ಷಕಿಯನ್ನು ಭೇಟಿ ಮಾಡಿ ಸನ್ಮಾನಿಸಿದ ಉದ್ಯಮಿ !

0

52 ವರ್ಷಗಳ ಬಳಿಕ ತನ್ನ ಪ್ರೀತಿಯ ಶಿಕ್ಷಕಿಯನ್ನು ಭೇಟಿ ಮಾಡಲು ಐವರ್ನಾಡಿನ ಅವರ ಮನೆಗೆ ಬಂದ ಉದ್ಯಮಿಯೊಬ್ಬರು ಶಿಕ್ಷಕಿಯನ್ನು ಸನ್ಮಾನಿಸಿದ ಘಟನೆ ನಡೆದಿದೆ.

ಇವರು ಐವರ್ನಾಡಿನ ಖಂಡಿಗೆ ಮೂಲೆಯ ಕೃಷ್ಣ. 1971-73 ಸಾಲಿನಲ್ಲಿ ಐವರ್ನಾಡು ಗ್ರಾಮದ ಬಾಂಜಿಕೋಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಮತಿ ಶಿವಮ್ಮ ಟೀಚರ್ ಅವರ ವಿದ್ಯಾರ್ಥಿಯಾಗಿದ್ದರು. 3 ಹಾಗೂ 4ನೇ ಕ್ಲಾಸಿನಲ್ಲಿ ಇವರಿಗೆ ಶಿವಮ್ಮ ಟೀಚರ್ ಪಾಠ ಮಾಡಿದ್ದರು.

ನಂತರ ಸೋಣಂಗೇರಿ, ಬಾಳಿಲ, ರೋಷನಿ ನಿಲಯ ಮಂಗಳೂರು ಇಲ್ಲಿ ಕಲಿತು ಮಂಗಳೂರಿನಲ್ಲಿ ಕೆಲಸ ಪ್ರಾರಂಭಿಸಿ ನಂತರ ಬೆಂಗಳೂರಿಗೆ ಕೆಲಸಕ್ಕಾಗಿ ತೆರಳಿದ್ದರು. ಪ್ರಸ್ತುತ ತಮ್ಮದೇ ಸ್ವಂತ ಹೆಚ್. ಆರ್. ಕನ್ಸಲ್ಟಿಂಗ್ ಕಂಪೆನಿ ನಡೆಸುತ್ತಿದ್ದಾರೆ.

ಊರಿನ ಸಂಪರ್ಕ ಅವರಿಗೆ ಕಡಿಮೆ ಆಗಿತ್ತು. ಇತ್ತೀಚೆಗೆ ತನ್ನ ಟೀಚರ್ ಅವರನ್ನು ನೆನಪಿಸಿಕೊಂಡು, ಅವರ ಮಗ ದಿನೇಶ್ ಮಡ್ತಿಲ ಅವರನ್ನು ಸಂಪರ್ಕಿಸಿ, ಟೀಚರ್ ಅವರನ್ನು ಭೇಟಿ ಯಾಗುವ ಇಂಗಿತ ವ್ಯಕ್ತಪಡಿಸಿದರು. ಶಿಕ್ಷಕರ ದಿನಾಚರಣೆಯಂದು ಅವರ ಮನೆಗೆ ಭೇಟಿ ಇತ್ತು ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದುಕೊಂಡರು.

52 ವರ್ಷಗಳ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಕ್ಲಾಸಿನಲ್ಲಿದ್ದ ಸಹಪಾಠಿಗಳನ್ನು ನೆನಪು ಮಾಡಿಕೊಂಡರು. ಟೀಚರ್ ಮಾಡಿದ ಪಾಠಗಳನ್ನು ನೆನಪು ಮಾಡಿಕೊಂಡರು. ಐವರ್ನಾಡು ಶಾಲೆ ಯಲ್ಲಿ ನಡೆಯುತ್ತಿದ್ದ ಸಂಯುಕ್ತ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾಡಿದ ಡಾನ್ಸ್, ನಾಟಕಗಳ ನೆನಪು ಮಾಡಿಕೊಂಡರು. 52 ವರುಷಗಳ ನಂತರದ ಈ ಗುರು ಶಿಷ್ಯರ ಭೇಟಿ ಮನಮುಟ್ಟಿತ್ತು.

” ಜೀವನದಲ್ಲಿ ಗುರುವಿನ ಪ್ರಭಾವ ಅದೆಷ್ಟು ಅನ್ನುವುದಕ್ಕೆ ಇದು ಉತ್ತಮ ಉದಾಹರಣೆ ” ಎಂದು ಶಿವಮ್ಮ ಟೀಚರ್ ಅವರ ಮತ್ತೋರ್ವ ಪುತ್ರ ಶರತ್ ಮಡ್ತಿಲ ಅಭಿಪ್ರಾಯಪಟ್ಟಿದ್ದಾರೆ.