ಪ್ರಕರಣ ದಾಖಲು – ಆರೋಪಿಯನ್ನು ಬಾಲನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು
ಸುಳ್ಯದ ವಿದ್ಯಾಸಂಸ್ಥೆಯೋಂದರ 16 ವರ್ಷದ ವಿದ್ಯಾರ್ಥಿನಿ ಶಾಲೆಗೆಂದು ನಡೆದುಕೊಂಡು ಬರುತ್ತಿರುವಾಗ ಯುವಕನೋರ್ವ ಆಕೆಯನ್ನು ಹಿಡಿದು ಕಿರುಕುಳ ನೀಡಿರುವ ಬಗ್ಗೆ ವಿದ್ಯಾರ್ಥಿನಿಯ ತಾಯಿ ಸುಳ್ಯ ಠಾಣೆಗೆ ಸೆ. 18 ರಂದು ದೂರು ನೀಡಿದ್ದು ಸುಳ್ಯ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮಂಗಳೂರು ಬಾಲನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.















ಸೆ. 26 ರಂದು ಆಲೆಟ್ಟಿ ಗ್ರಾಮದ ವಿದ್ಯಾರ್ಥಿನಿ ಶಾಲೆಗೆ ಬರುತ್ತಿದ್ದಾಗ ಜಟ್ಟಿಪಳ್ಳ ನಿವಾಸಿ ಸುಳ್ಯ ಖಾಸಗಿ ಟ್ಯುಟೋರಿಯಲ್ ನ ವಿದ್ಯಾರ್ಥಿ ಹುಡುಗನೊಬ್ಬ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಹಿಡಿದುಕೊಂಡಿದ್ದನೆಂದೂ,
ವಿದ್ಯಾರ್ಥಿನಿ ಕಿರುಚಿದಾಗ ಆತ ಪರಾರಿಯಾದನೆಂದೂ , ವಿದ್ಯಾರ್ಥಿನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಲ್ಲಿ ಹಾಗೂ ಮನೆಯವರಲ್ಲಿ ತಿಳಿಸಿದ್ದಳು.
ಮತ್ತೆ ಅದೇ ಯುವಕ ಸೆ.17 ರಂದು ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಆಕೆಯ ಬಳಿ ಅಸಭ್ಯವಾಗಿ ವರ್ತಿಸಿದ್ದಾನೆಂದೂ ಹೇಳಲಾಗಿದ್ದು, ಇದರಿಂದ ಭಯಭೀತಳಾದ ವಿದ್ಯಾರ್ಥಿನಿ ಕಾಲೇಜಿಗೆ ತೆರಳುವುದಿಲ್ಲ ಎಂದು ಮನೆಯಲ್ಲಿ ಹಠ ಹಿಡಿದಿದ್ದಳು.
ಈ ಹಿನ್ನೆಲೆಯಲ್ಲಿ ‘ ಮಗಳಿಗೆ ಕಿರುಕುಳ ನೀಡಿದ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮಗಳಿಗೆ ರಕ್ಷಣೆ ನೀಡಬೇಕು’ ಎಂದು ವಿದ್ಯಾರ್ಥಿನಿಯ ತಾಯಿ ಸುಳ್ಯ ಪೊಲೀಸರಿಗೆ ದೂರು ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಮನೆಗೆ ತೆರಳಿ ಆತನನ್ನು ಬಂಧಿಸಿ ಠಾಣೆಗೆ ತಂದು ಪ್ರಕರಣ ದಾಖಲಿಸಿ ಬಳಿಕ ರಾತ್ರಿಯೇ ಮಂಗಳೂರು ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆತನನ್ನು ಉಡುಪಿಯ ರಿಮಾಂಡ್ ಹೋಂಗೆ ಕಳುಹಿಸಲು ಆದೇಶಿಸಿತೆಂದು ತಿಳಿದುಬಂದಿದೆ.










