ತಾಲೂಕು ಆಡಳಿತದಿಂದ ಹೀಗೊಂದು ಅಚಾತುರ್ಯ
ಸುಳ್ಯ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಹಾರಿಸದೆಯೇ ಗೌರವ ವಂದನೆ ಸಲ್ಲಿಸಿ, ರಾಷ್ಟ್ರಗೀತೆ ಹಾಡಬೇಕಾಗಿ ಬಂದ ಘಟನೆ ನಡೆದಿದೆ.















ನ. 1 ರಂದು ಸುಳ್ಯ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪೆರೇಡ್ ಕಮಾಂಡಿಂಗ್ ಮಾಡುತ್ತಿದ್ದ ಪೊಲೀಸ್ ಅಧಿಕಾರಿ ರಾಷ್ಟ್ರಧ್ವಜ ಹಾರಿಸಲು ಆರ್ಡರ್ ಮಾಡಿದಾಗ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಲು ಆರಂಭಿಸಿದರು. ಆದರೆ ಧ್ವಜ ಕಂಬದ ಬಳಿ ನಿಂತಿದ್ದ ತಹಶೀಲ್ದಾರರು, ಶಾಸಕರು, ಮತ್ತು ಸ್ಥಳದಲ್ಲಿದ್ದ ಇತರ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ರಾಷ್ಟ್ರಧ್ವಜ ಹಾರಿಸುವುದನ್ನು ಮರೆತು ಬಿಟ್ಟು ಗೌರವ ವಂದನೆ ಸ್ವೀಕರಿಸುತ್ತಾ ನೇರವಾಗಿ ರಾಷ್ಟ್ರಗೀತೆಯನ್ನು ಹಾಡಲು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಪೆರೇಡ್ ನೇತೃತ್ವ ವಹಿಸಿದ್ದ ಎಸ್.ಐ. ಸರಸ್ವತಿಯವರು ರಾಷ್ಟ್ರಧ್ವಜ ಹಾರಿಸುವಂತೆ ಸಂಜ್ಞೆ ಮಾಡತೊಡಗಿದರು. ಆದರೆ ಇದು ಯಾರಿಗೂ ಅರ್ಥವಾಗಲಿಲ್ಲ. ರಾಷ್ಟ್ರಗೀತೆ ಮುಗಿದ ಬಳಿಕ ತಹಶೀಲ್ದಾರರು ರಾಷ್ಟ್ರ ಧ್ವಜಾರೋಹಣ ಮಾಡಿದರು.










