ತೊಗಟೆ ಸಿಗಿದು ಹೋದ ಅಕೇಶಿಯಾ ಮರ
ತಾಲೂಕು ಕಚೇರಿಯ ವರೆಗೆ ವ್ಯಾಪಿಸಿದ ಬೆಂಕಿ – ಕಂಪ್ಯೂಟರ್ ಸಿಸ್ಟಂಗೆ ಹಾನಿ
ಇಂದು ಸಂಜೆ ಸುರಿದ ಗುಡುಗು ಸಿಡಿಲು ಸಹಿತ ಭಾರೀ ಮಳೆಯ ವೇಳೆ ಸಿಡಿಲೊಂದು ಸುಳ್ಯ ತಾಲೂಕು ಕಚೇರಿಯ ಹಿಂಬದಿಯ ಅಕೇಶಿಯಾ ಮರಕ್ಕೆ ಅಪ್ಪಳಿಸಿದ ಪರಿಣಾಮವಾಗಿ ಬೆಂಕಿ ಉಂಡೆ ವ್ಯಾಪಿಸಿ, ಪರಿಸರವಿಡೀ ಸೂರ್ಯನಂತೆ ಬೆಳಗಿದ ಹಾಗೂ ತಾಲೂಕು ಕಚೇರಿಯ ಕಂಪ್ಯೂಟರ್ ಸಿಸ್ಟಂಗೆ ಹಾನಿಯಾದ ಘಟನೆ ವರದಿಯಾಗಿದೆ. ಸಿಡಿಲು ಬಡಿದ ಅಕೇಶಿಯಾ ಮರ ಮೇಲಿನಿಂದ ಕೆಳಗಿನ ವರೆಗೆ ಸಿಗಿದಂತಾಗಿದೆ.















ಸಂಜೆ 4.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಳೆಯ ಪರಿಣಾಮವಾಗಿ ಆ ಪ್ರದೇಶದಲ್ಲಿ ಯಾರೂ ಇರಲಿಲ್ಲ. ಸುಳ್ಯ ನ್ಯಾಯಾಲಯದ ಎದುರುಗಡೆಯ ಮರ ಇದಾಗಿದ್ದು, ಪಕ್ಕದಲ್ಲೇ ಇಂದಿರಾ ಕ್ಯಾಂಟೀನ್ ಕೂಡ ಇದೆ. ತಾಲೂಕು ಕಚೇರಿಯೊಳಗಡೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಅಗಾಧ ಪ್ರಮಾಣದ ಬೆಂಕಿಯುಂಡೆ ಪಸರಿದಂತಾಗಿ ಕಿರುಚಿಕೊಂಡು ಹೊರಬಂದರೆನ್ನಲಾಗಿದೆ. ಸರ್ವೆ ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಆಘಾತಕ್ಕೊಳಗಾಗಿದ್ದು ಅವರನ್ನು ಉಪಚರಿಸಿ ಮನೆಗೆ ಕಳುಹಿಸಲಾಯಿತೆನ್ನಲಾಗಿದೆ. ಬೆಂಕಿ ವ್ಯಾಪಿಸಿದ ಬಗ್ಗೆ ಸಿಬ್ಬಂದಿಗಳೆಲ್ಲ ತಮ್ಮ ಅನುಭವಗಳನ್ನು ಹೇಳುತ್ತಿದ್ದಾರೆ.










