
ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ, ಪ್ರತಿಯೊಬ್ಬರೂ ಸೌಹಾರ್ದತೆ (Harmony) ಮತ್ತು ಐಕ್ಯತೆಯೊಂದಿಗೆ (Unity) ಬದುಕು ಸಾಗಿಸಬೇಕು. ಪೂರ್ವಿಕರಾದ ಸಜ್ಜನರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಜೀವನ ನಡೆಸಿದಲ್ಲಿ ಮಾತ್ರ ಸೌಹಾರ್ದತೆ ಮತ್ತು ಐಕ್ಯತೆಯನ್ನು ಸುಭದ್ರಗೊಳಿಸಲು ಸಾಧ್ಯ ಎಂದು ಅಸ್ಸಯ್ಯದ್ ಎನ್ ಪಿ ಎಂ ಝೈನುಲ್ ಆಬಿದೀನ್ ದುಗ್ಗಲಡ್ಕ ತಂಙಳ್ ಕರೆ ನೀಡಿದರು.

ಗೂನಡ್ಕ ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಯೋಜಿಸಿದ್ದ ಮಾಸಿಕ ಸ್ವಲಾತ್ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಇಸ್ಲಾಮಿನ ಆಶಯ: ಐಕ್ಯತೆ ಮತ್ತು ಅನ್ಯೋನ್ಯತೆ
‘ವಿವಿಧ ಕಾರಣಗಳಿಂದ ಉಂಟಾಗುವ ಅಭಿಪ್ರಾಯ ಭಿನ್ನತೆಗಳನ್ನು ಮರೆತು, ಪರಸ್ಪರ ಅನ್ಯೋನ್ಯತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಬಾಳುವುದೇ ಇಸ್ಲಾಮಿನ ಮೂಲ ಆಶಯವಾಗಿದೆ,’ ಎಂದು ತಂಙಳ್ ಹೇಳಿದರು.







ರಾಜಕೀಯ ಹುನ್ನಾರಗಳ ಬಗ್ಗೆ ಎಚ್ಚರಿಕೆ ಪ್ರಸ್ತುತ ಸನ್ನಿವೇಶದಲ್ಲಿ, ರಾಜಕೀಯ ಲಾಭ ಪಡೆಯಲು ವಿವಿಧ ಕಾರಣಗಳನ್ನು ನೀಡಿ ಮುಸ್ಲಿಮರನ್ನು ಮತ್ತು ಇಸ್ಲಾಮನ್ನು ಶತ್ರು ಸ್ಥಾನದಲ್ಲಿ ಪ್ರತಿಷ್ಠಾಪಿಸಲು ನಡೆಯುತ್ತಿರುವ ಹುನ್ನಾರಗಳ ಬಗ್ಗೆ ಜಾಗೃತರಾಗುವಂತೆ ಅವರು ಸಮುದಾಯಕ್ಕೆ ಕರೆ ನೀಡಿದರು. ‘ಇಂತಹ ಸಂದರ್ಭದಲ್ಲಿ, ಎಲ್ಲರೊಂದಿಗೆ ಸೌಹಾರ್ದತೆಯಿಂದ ವರ್ತಿಸುವುದು ಅತ್ಯಗತ್ಯ,’ ಎಂದು ತಂಙಳ್ ಒತ್ತಿ ಹೇಳಿದರು.
ಪೂರ್ವಿಕರ ಮಾರ್ಗಾನುಸರಣೆಗೆ ಮನವಿ
ಪೂರ್ವಿಕ ಉಲೇಮಾಗಳು (ಧಾರ್ಮಿಕ ವಿದ್ವಾಂಸರು) ತೋರಿಸಿಕೊಟ್ಟ ಇಸ್ಲಾಮಿನ ನೈಜ ಆಶಯಗಳನ್ನು ಅನುಸರಿಸಿ ಪಾಲಿಸುವುದರಿಂದಲೇ ಇಂತಹ ಧಾರ್ಮಿಕ ಮಜ್ಲಿಸ್ಗಳಲ್ಲಿ (ಕಾರ್ಯಕ್ರಗಳಲ್ಲಿ) ಭಾಗವಹಿಸಲು ಸಾಧ್ಯವಾಗಿದೆ. ಮುಂದಕ್ಕೂ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ತಂಙಳ್ ಮನವಿ ಮಾಡಿದರು.

ಸ್ಥಳೀಯ ಖತೀಬ್ ಅಬ್ದುಲ್ ರಹಮಾನ್ ಸಖಾಫಿ ಮತ್ತು ಮುಹಲ್ಲಿಮ್ ಸವಾದ್ ಮದನಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಇದೇ ವೇಳೆ, ಗೂನಡ್ಕ ಜಮಾಅತ್ ವತಿಯಿಂದ ತಂಙಳ್ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಸುಪಾಸಿನ ಜಮಾಅತ್ ಅದ್ಯಕ್ಷರು ಹಾಗೂ ಪದಾದಿಕಾರಿಗಳು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಗೂನಡ್ಕ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಸ್ವಾಗತಿಸಿ ವಂದಿಸಿದರು.










