ನಿರ್ಮಾಣ ಹಂತದ ಮನೆಯಲ್ಲಿ ಶ್ರಮದಾನ
ಸುಳ್ಯ ಎಸ್ ವೈ ಎಸ್ (ಸುನ್ನಿ ಯುವಜನ ಸಂಘ) ಇಸಾಬ ಸಾಂತ್ವನ ತಂಡದ ಸದಸ್ಯರು ಬಡ ವೃದ್ದ ಮಹಿಳೆಯ ಮನೆ ನಿರ್ಮಾಣ ಕಾರ್ಯದಲ್ಲಿ ಶ್ರಮದಾನ ಮೂಲಕ ಕೈಜೋಡಿಸಿ ಮಾನವೀಯತೆ ಮೆರೆದಿದ್ದಾರೆ.
ಅರಂಬೂರು ಪಾಲಡ್ಕ ಬಳಿ ನಿರಾಶ್ರಿತ ಬಡ ಮಹಿಳೆ ಮೀನಾಕ್ಷಿ ಎಂಬುವವರಿಗೆ ಸುಳ್ಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸೇರಿ ಅವರ ಜಾಗದಲ್ಲಿ ಒಂದು ಮನೆ ನಿರ್ಮಾಣ ಕಾರ್ಯವನ್ನು ಮಾಡಿ ಕುಟುಂಬಕ್ಕೆ ಸೂರು ಕಲ್ಪಿಸುವ ಸೇವೆಯನ್ನು ಮಾಡುತ್ತಿದೆ.

ಆದರೆ ಮನೆ ನಿರ್ಮಾಣಗೊಳ್ಳುವ ಸ್ಥಳ ಹೆದ್ದಾರಿಯಿಂದ ಸುಮಾರು 60, 70 ಅಡಿ ಗುಡ್ಡ ಪ್ರದೇಶದಲ್ಲಿ ಇದ್ದು ಮನೆ ನಿರ್ಮಾಣಕ್ಕೆ ಬೇಕಾಗುವ ಕಲ್ಲು, ಹೊಯ್ಗೆ ಇನ್ನಿತರ ಸಾಮಗ್ರಿಗಳನ್ನು ಮೇಲೆ ಕೊಂಡೋಗಲು ಕಷ್ಟ ಸಾಧ್ಯವಾಗಿದೆ.
ಕೆಲಸದಾಳುಗಳ ಕೈಯಲ್ಲಿ ಮಾಡುವುದಾದರೆ ಬಹಳ ಹೆಚ್ಚಿನ ಮೊತ್ತ ತೆರ ಬೇಕಾಗುತ್ತದೆ. ಅಲ್ಲದೆ ಕೆಲಸಕ್ಕೆ ಬಂದವರು ಸ್ಥಳವನ್ನು ನೋಡಿ ಕೆಲಸಕ್ಕೆ ಬಾರದೇ ಇರುವ ಸನ್ನಿವೇಶಗಳು ಉಂಟಾಗಿದೆ.








ಈ ಬಗ್ಗೆ ಸುಳ್ಯದ ಇಸಾಬ ತಂಡದ ಮುಖಂಡ ಸಿದ್ದೀಕ್ ಗೂನಡ್ಕ ರವರ ಬಳಿ ಇಲ್ಲಿಯ ಪರಿಸ್ಥಿತಿಯ ಬಗ್ಗೆ ಸಂಬಂಧಪಟ್ಟವರು ಹೇಳಿಕೊಂಡಾಗ ಕೂಡಲೆ ಸ್ಪಂದಿಸಿದ ಅವರು ಶ್ರಮದಾನ ಮೂಲಕ ಸಹಾಯ ಮಾಡುವ ಭರವಸೆಯನ್ನು ನೀಡಿ ಡಿಸೆಂಬರ್ 11ರಂದು ಸಂಜೆ ತಮ್ಮ ತಂಡದ ಸುಮಾರು 15 ಕ್ಕೂ ಹೆಚ್ಚು ಸದಸ್ಯರುಗಳನ್ನು ಸ್ಥಳಕ್ಕೆ ಕರೆತಂದು ಶ್ರಮದಾನ ಮೂಲಕ ಕಲ್ಲುಗಳನ್ನು ರಸ್ತೆಯಿಂದ ಮೇಲೆ ಹೊತ್ತೊಯ್ದು ತಲುಪಿಸಿ ಮನೆ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿ ಅನನ್ಯ ಸೇವೆ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ.
ಅಲ್ಲದೆ ಈ ಸ್ಥಳದಲ್ಲಿ ರಾತ್ರಿ ಹೊತ್ತು ಬೆಳಕಿನ ವ್ಯವಸ್ಥೆ ಇಲ್ಲದಿದ್ದರೂ ಕೂಡ ತಮ್ಮ ತಮ್ಮ ಕೈಯಲ್ಲಿದ್ದ ಮೊಬೈಲ್ ಫೋನಿಂದ ಟಾರ್ಚನ್ನು ಬೆಳಗಿಸಿ ಕಲ್ಲುಗಳನ್ನು ಹೊತ್ತೊಯ್ದು ಸಾಹಸ ಸೇವೆಯನ್ನು ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಎಸ್ ವೈ ಎಸ್ ಸಾಂತ್ವನ ಇಸಾಬ ತಂಡದ ಉಪಾಧ್ಯಕ್ಷರಾದ ಎ.ಎಂ.ಫೈಝಲ್ ಝುಹ್ರಿ, ಕಾರ್ಯದರ್ಶಿ ರಝಾಕ್ ಅಲೆಕ್ಕಾಡಿ, ಝೋನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ, ಅಜ್ಜಾವರ ಸರ್ಕಲ್ ಸಾಂತ್ವನ ಇಸಾಬ ಕಾರ್ಯದರ್ಶಿ ನಸೀರ್ ಅಡ್ಕಾರು, ಬೆಳ್ಳಾರೆ ಸರ್ಕಲ್ ಸಾಂತ್ವನ ಇಸಾಬ ಕಾರ್ಯದರ್ಶಿ ಮುನೀರ್ ಬೆಳ್ಳಾರೆ, ಸುಳ್ಯ ಸರ್ಕಲ್ ಸಾಂತ್ವನ ಇಸಾಬ ಕಾರ್ಯದರ್ಶಿ ಹಾರಿಸ್ ಬೋರುಗುಡ್ಡೆ, ಸುಳ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ನೌಷಾದ್ ಕೆರೆಮೂಲೆ ಹಾಗೂ ಇಸಾಬ ಕಾರ್ಯಕರ್ತರಾದ ಅಶ್ರಫ್ ಚಡಾವು, ಅಫ್ರೀದ್ ಜಾಲ್ಸೂರು ಅಡ್ಕಾರು, ಶರೀಫ್ ಜಯನಗರ, ಆಬಿದ್ ಕಲ್ಲುಮುಟ್ಲು, ಸಫ್ವಾನ್ ಸುಣ್ಣಮೂಲೆ, ಹಸೈನಾರ್ ಸುದ್ದಿ ಭಾಗವಹಿಸಿದ್ದರು.
ಭಾರತೀಯ ರೆಡ್ ಕ್ರಾಸ್ ಸುಳ್ಯ ಸಂಸ್ಥೆಯ ಸಭಾಪತಿ ಪಿ ಬಿ ಸುಧಾಕರ್ ರೈ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯೂಸುಫ್ ಅಂಜಿಕಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
ಇದೇ ರೀತಿ ಈ ಮನೆಯ ಅಡಿಪಾಯ ನಿರ್ಮಿಸುವ ವೇಳೆ ಸುಳ್ಯ ಗಾಣಿಗ ಸಮುದಾಯದ ಸಂಘದ ಸದಸ್ಯರುಗಳು ಕೂಡ ಮುಖ್ಯರಸ್ತೆ ಬಳಿಯಿಂದ ಕೆಂಪು ಕಲ್ಲುಗಳನ್ನು ಹೊತ್ತು ತಂದು ಮನೆ ಬಳಿ ಇಟ್ಟು ವ್ಯವಸ್ಥೆ ಮಾಡಿ ಕೊಡುವ ಮೂಲಕ ಸಹಕಾರವನ್ನು ಮಾಡಿದ್ದಾರೆ.








