ಕಡಿಮೆಯಾದ ಬೆಳೆವಿಮೆ ಪರಿಹಾರ : ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ವತಿಯಿಂದ ಸದಸ್ಯರ ಸಭೆ

0

ಕಾನೂನು ಹೋರಾಟದ ಬಗ್ಗೆ ಚರ್ಚೆ

2024-25ನೇ ಸಾಲಿನಲ್ಲಿ ಬೆಳೆವಿಮೆ ಪಾವತಿಸಿರುವ ರೈತರಿಗೆ ಈ ಬಾರಿಯ ಮಳೆಯ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದರೂ ಬೆಳೆವಿಮಾ ಮೊತ್ತವು ಕಡಿಮೆ ಬಿಡುಗಡೆಯಾಗಿರುವ ಬಗ್ಗೆ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ಅಸಮಧಾನಗೊಂಡು ಈ ಕುರಿತಾಗಿ ಸಭೆಯನ್ನು ನಡೆಸಿ ನ್ಯಾಯಯುತ ಬೆಳೆವಿಮೆ ಪರಿಹಾರವನ್ನು ಕೊಡಿಸುವಂತೆ ಕಾನೂನಿನ ಮೊರೆ ಹೋಗಲು ನಿರ್ಧರಿಸಿದ್ದಾರೆ. ರೈತರು, ರಾಜ್ಯ ಮತ್ತು ಕೇಂದ್ರ ಸರಕಾರದ ಬೆಳೆವಿಮೆ ಯೋಜನೆಯನ್ವಯ ಮಳೆ, ಬಿಸಿಲು ಸೇರಿದಂತೆ ಹವಾಮಾನದಲ್ಲಿ ಉಂಟಾಗುವ ವೈಪರೀತ್ಯಗಳಿಂದ ಕೃಷಿಯ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳನ್ನು ಆಧರಿಸಿ ವಿಮಾ ಪರಿಹಾರಗಳನ್ನು ವಿಮಾ ಕಂಪೆನಿ ನೀಡಬೇಕಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಅಧಿಕವಾಗಿದ್ದುದರಿಂದ ಕೃಷಿಗೆ ಸಾಕಷ್ಟು ಹಾನಿ ಸಂಭವಿಸಿದ್ದು ಹೆಚ್ಚಿನ ವಿಮಾ ಮೊತ್ತ ದೊರೆಯಬಹುದೆಂಬ ನಿರೀಕ್ಷೆಯನ್ನು ಮಾಡಲಾಗಿತ್ತು. ನಿರೀಕ್ಷೆಯಂತೆ ವಿಮಾ ಪರಿಹಾರ ಮೊತ್ತವು ಬಾರದೇ ಇರುವುದರಿಂದ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಾಳತ್ವದಲ್ಲಿ ಸದಸ್ಯರು ಸಭೆಯನ್ನು ಸೇರಿ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆಯನ್ನು ನಡೆಸಿದರು. ಕಡಿಮೆ ಬಿಡುಗಡೆಯಾಗಿರುವ ಬೆಳೆವಿಮಾ ಪರಿಹಾರದ ಬಗ್ಗೆ ತಾಲೂಕು ಮಟ್ಟದಲ್ಲಿ ಹೋರಾಟ ಸಂಘಟಿಸುವುದು ಮತ್ತು ಈ ಬಗ್ಗೆ ನಿರಂತರವಾಗಿ ಹೋರಾಟವನ್ನು ಮಾಡುವುದು. ಅಲ್ಲದೇ ನ್ಯಾಯಾಲಯದಲ್ಲಿ ಕಾನೂನು ಹೋರಾಟಗಳನ್ನು ಕೈಗೊಳ್ಳುವುದುದಾಗಿ ಸರ್ವಾನುಮತದಿಂದ ನಿರ್ಣಯಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ವಹಿಸಿದ್ದರು. ವೇದಿಕೆಯಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಸಂಘದ ಉಪಾಧ್ಯಕ್ಷರಾದ ಡಾ. ಲಕ್ಮೀಷ ಕಲ್ಲುಮುಟ್ಲು ಮತ್ತು ಸಂಘದ ಕಾನೂನು ಸಲಹೆಗಾರರಾದ ದೀಪಕ್ ಕುತ್ತಮೊಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು

. ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಬೆಳೆವಿಮೆ ಯೋಜನೆಯ ಒಟ್ಟು ವ್ಯವಸ್ಥೆ ಮತ್ತು ಕಡಿಮೆ ಬಿಡುಗಡೆಯಾಗಿರುವ ಬೆಳೆವಿಮಾ ಮೊತ್ತದ ಬಗ್ಗೆ ಮಾಹಿತಿಯನ್ನು ನೀಡಿದರು. ಸಂಘದ ಉಪಾಧ್ಯಕ್ಷರಾದ ಡಾ. ಲಕ್ಷಿ÷್ಮÃಶ ಕಲ್ಲುಮುಟ್ಲು ವಂದಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ನಿರ್ವಹಿಸಿದರು. ಸಂಘದ ಸದಸ್ಯರು ಉಪಸ್ಥಿತರಿದ್ದರು.