ಬ್ರಹ್ಮರಕೂಟ್ಲು ಟೋಲ್ಗೇಟ್ ತೆರವಿಗೆ ಒತ್ತಾಯಿಸಿ ಎ.28ರಂದು ಬೃಹತ್ ಜನಾಂದೋಲನ ನಡಿಗೆ

0

ಸುಳ್ಯಕ್ಕೆ ಬಂದು ಸಮಾಲೋಚನಾ ಸಭೆ ನಡೆಸಿದ ಮಾಜಿ ಸಚಿವ ಬಿ.ರಮಾನಾಥ ರೈ

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿಗೆ ಹೋಗುವಾಗ ಬ್ರಹ್ಮರಕೂಟ್ಲು ಎಂಬಲ್ಲಿ ಸಿಗುವ ಟೋಲ್ ಗೇಟ್ ಅನ್ನು ತೆರವಿಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು , ಧರಣಿ ಸತ್ಯಸಗ್ರಹಗಳು ನಡೆಯುತ್ತಿದ್ದು, ಎ.28 ರಂದು ಮಾಜಿ ಸಚಿವ ರಮಾನಾಥ ರೈ ರವರ ನೇತೃತ್ವದಲ್ಲಿ ಬೃಹತ್ ಜನಾಂದೋಲನಾ ನಡಿಗೆ ಬಿ.ಸಿ.ರೋಡ್ ನ ನಾರಾಯಣಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್ ಗೇಟ್ ವರೆಗೆ ನಡೆಯಲಿದೆ.

ಈ ಜನಾಂದೋಲನ ನಡಿಗೆಗೆ ಸುಳ್ಯದಿಂದ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಆಹ್ವಾನಿಸುವ ನಿಟ್ಟಿನಲ್ಲಿ ಮಾಜಿ ಸಚಿವ ರಮಾನಾಥ ರೈಯವರು ಎ.25 ರಂದು ಸುಳ್ಯಕ್ಕೆ ಬಂದು ಸಮಾಲೋಚನಾ ಸಭೆ ನಡೆಸಿದರು.

ಜನಾಂದೊಇಲನದ ಉದ್ದೇಶವನ್ಬು ವಿವರಿಸಿದ ರಮಾನಾಥ ರೈ ಯವರು ” ಅಂತರದ ನಿಯಮ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿ ಬ್ರಹ್ಮರ ಕೂಟ್ಲು ಟೋಲ್ ಗೇಟ್ ಕಾರ್ಯನಿರ್ವಹಿಸುತ್ತಿದೆ. 23 ವರ್ಷಗಳಿಂದ ಜನರಿಂದ ಟೋಲ್ ಸಂಗ್ರಹಿಸುತ್ತಿರುವ ಇದನ್ನು ತೆರವುಗೊಳಿಸಬೇಕೆಂದು ಜನತೆ ನಿರಂತರ ಹೋರಾಟ ನಡೆಸುತ್ತಿದ್ದರೂ ಹೆದ್ದಾರಿ ಪ್ರಾಧಿಕಾರ ಹಾಗೂ ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿದೆ. ಈಗಾಗಲೇ ಎರಡು ಬೃಹತ್ ಪ್ರತಿಭಟನೆಗಳು ನಡೆದಿವೆ. ಇದೀಗ ಎ.28 ರಂದು ಮೂರನೆಯ ಬೃಹತ್ ಜನಾಂದೋಲನ ಸಂಘಟಿಸುತ್ತಿದ್ದೇವೆ. ಈ ಹೋರಾಟಕ್ಕೆ ಸುಳ್ಯದಿಂದ ನೂರಾರು ಸಂಖ್ಯೆಯಲ್ಲಿ ಜನತೆ ಬರಬೇಕು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರುಗಳು ಮತ್ತು ಸಮಾನ ಮನಸ್ಕ ಸಂಘಟನೆಗಳು ಭಾಗವಹಿಸಬೇಕು ” ಎಂದು ವಿನಂತಿಸಿಕೊಂಡರು.

” ಕಾನೂನುಬಾಹಿರವಾಗಿ ನಡೆಯುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಆಗಲೇಬೇಕು. ಮತ್ತು ಜಿಲ್ಲೆಯ ಹೆದ್ದಾರಿಗಳಲ್ಲಿ ಹೊಸ ಟೋಲ್ ಗೇಟ್ ಗಳ ಸ್ಥಾಪನೆಯನ್ನು ಕೈ ಬಿಡಬೇಕು. ಒಂದು ಟೋಲ್ ಗೇಟ್ ನಿಂದ ಇನ್ನೊಂದು ಟೋಲ್ ಗೇಟ್ ಗೆ 60 ಕೊ.ಮೀ. ಅಂತರ ಇರಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು” ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು, ಮಾಜಿ ಅಧ್ಯಕ್ಷರುಗಳಾದ ಪಿ.ಸಿ.ಜಯರಾಮ್, ಎಂ.ವೆಂಕಪ್ಪಗೌಡ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ , ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ ಹಾಗೂ ಮುಖಂಡರುಗಳಾದ ಅಡ್ವಕೇಟ್ ಫವಾಜ್ ಕನಕಮಜಲು, ಸತ್ಯಕುಮಾರ್ ಅಡಿಂಜ, ಭವಾನಿ ಶಂಕರ ಕಲ್ಮಡ್ಕ, ಮಹೇಶ್ ಬೆಳ್ಳಾರ್ಕರ್ , ಚೇತನ್ ಕಜೆಗದ್ದೆ, ರಂಜಿತ್ ಮೇನಾಲ, ರಾಜು ಪಂಡಿತ್, ಶಶಿಧರ ಎಂ.ಜೆ., ಸಚಿನ್ ರಾಜ್ ಶೆಟ್ಟಿ, ಆನಂದ ಬೆಳ್ಳಾರೆ, ಕೇಶವ ಮೊರಂಗಲ್ಲು, ಧರ್ಮಪಾಲ ಕೊಯಿಂಗಾಜೆ , ಆಶಿಕ್ ಅರಂತೋಡು, ಗಣೇಶ್ ನಾಗಪಟ್ಣ, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ , ಶಹೀದ್ ಪಾರೆ ಮೊದಲಾದವರು ಉಪಸ್ಥಿತರಿದ್ದರು.