ಕುಕ್ಕೆ ಸುಬ್ರಹ್ಮಣ್ಯದಲ್ಲಿ ಫುಲ್ ರಶ್

0

ಭಕ್ತರಿಂದ ತುಂಬಿ ತುಳುಕಿದ ಒಳಾಂಗಣ, ಹೊರಾಂಗಣ, ದೇವಾಲಯ ಪರಿಸರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ.24 ರಂದು ಭಾರಿ ಪ್ರಮಾಣದ ಭಕ್ತಾದಿಗಳು ಬಂದ ಹಿನ್ನೆಲೆಯಲ್ಲಿ ದೇವಾಲಯದ ಪರಿಸರ, ಒಳಾಂಗಣ, ಹೊರಾಂಗಣ, ಭಕ್ತರಿಂದ ತುಂಬಿ ತುಳುಕಿದೆ. ದೇವರ ದರ್ಶನಕ್ಕಾಗಿ ಗೋಪುರದ ಬಳಿಯಿಂದ ಭಕ್ತರು ದೇವರ ದರ್ಶನ ಪಡೆಯಲು ಕಾದು ನಿಂತಿರುವುದು ಕಂಡು ಬಂತು.

ದೇವಾಲಯದ ಒಳಾಂಗಣ, ಹೊರಾಂಗಣ ಎಲ್ಲೆಂದರಲ್ಲಿ ಜನವೋ ಜನ. ಶಾಲಾ ಕಾಲೇಜುಗಳಿಗೆ ರಜಾ ಸಮಯ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಕ್ಕೆ ಅತಿ ಹೆಚ್ಚು ಭಕ್ತರು ಕಂಡು ಬಂದಿದೆ. ಕಳೆದೊಂದು ತಿಂಗಳಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಾರಿ ಪ್ರಮಾಣದ ಭಕ್ತರು ಬರುತ್ತಿದ್ದಾರೆ. ದೇವಾಲಯದ ಸಿಬ್ಬಂದಿಗಳು ಕೈಯಲ್ಲಿ ಮೆಗಾಫೋನ್ ಹಿಡಿದು ಭಕ್ತರನ್ನು ನಿಯಂತ್ರಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಪಾರ್ಕಿಂಗ್ ಪ್ರದೇಶವೂ ಭರ್ತಿ. ಅದೇ ರೀತಿ ಪಾರ್ಕಿಂಗ್ ಪ್ರದೇಶಗಳು ಎಲ್ಲವೂ ಸಂಪೂರ್ಣ ಭರ್ತಿಯಾಗಿದ್ದರಿಂದ ವಾಹನ ನಿಲ್ಲಿಸಲು ಸ್ಥಳಾವಕಾಶವಿಲ್ಲದೆ ರಸ್ತೆ ಬದಿಯ ಎರಡೂ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಲಾಯಿತು. ದೇವಸ್ಥಾನದ ಭದ್ರತಾ ಸಿಬ್ಬಂದಿಗಳು, ಪೊಲೀಸರು ವ್ಯವಸ್ಥಿತವಾಗಿ ಸಂಚಾರ ನಿಯಂತ್ರಣೆ ನಡೆಸುತ್ತಿರುವುದು ಕಂಡು ಬಂತು.