ಪ್ರಾಕೃತಿಕ ವಿಕೋಪದ ಬಗ್ಗೆ ಸುಳ್ಯ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ

0

ತುರ್ತು ಸಂದರ್ಭದಲ್ಲಿ 24*7 ಕೆಲಸ ಮಾಡಿ ಸಾರ್ವಜನಿಕರಿಗೆ ಸ್ಪಂದಿಸಿ: ತಹಶೀಲ್ದಾರ್ ಮಂಜುಳಾ

ಮುಂಗಾರು ಮಳೆ ಸನಿಹವಾಗಿದ್ದು ಮಳೆಗಾಲದ ತುರ್ತು ಸಂದರ್ಭಗಳಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಂಘಟಿತರಾಗಿ ಕೆಲಸ ನಿರ್ವಹಿಸಿ ಪ್ರಾಕೃತಿಕ ವಿಕೋಪದಿಂದ ಉಂಟಾಗಬಹುದಾದ ಅನಾಹುತಗಳಿಂದ ಜನರ ಮತ್ತು ಜಾನುವಾರುಗಳ ರಕ್ಷಣೆಗೆ ಜವಾಬ್ದಾರಿಯುತ ಕೆಲಸ ಕಾರ್ಯಗಳನ್ನು ಮಾಡುವಂತೆ ಸುಳ್ಯ ತಹಶೀಲ್ದಾರ್ ಮಂಜುಳ ಎಂ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೇ 26ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅವರು ಪ್ರಾಕೃತಿಕ ವಿಕೋಪದ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಿ ಅಧಿಕಾರಿಗಳು ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ತಾಲೂಕಿನಲ್ಲಿ ಪ್ರಕೃತಿ ವಿಕೋಪ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಅಧಿಕಾರಿಗಳು ಸರ್ವಸನ್ನದ್ಧವಾಗಿರಬೇಕು.
ಅಲ್ಲದೆ ಎಲ್ಲಾ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದ್ದು ಅವರವರಿಗೆ ಜವಾಬ್ದಾರಿ ನೀಡಿರುವ ಇನ್ಸ್ಟಂಟ್ ಕಮಾಂಡರ್ಗಳ ಆದೇಶವನ್ನು ಪಾಲಿಸಿ ಕೆಲಸ ನಿರ್ವಹಿಸುವಂತೆ ಆದೇಶಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಪಾಯಕಾರಿ ಮರಗಳ ರೆಂಬೆಗಳನ್ನು ಕತ್ತರಿಸುವ ಬಗ್ಗೆ, ಅಪಾಯಕಾರಿ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ದುರಸ್ಥಿ ಪಡಿಸಿಕೊಳ್ಳುವ ಬಗ್ಗೆ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ತೋಡಿರುವ ಕಣಿಗಳನ್ನು ಸಮರ್ಪಕವಾಗಿ ಮುಚ್ಚುವ ಬಗ್ಗೆ, ಸಾರ್ವಜನಿಕರಿಗೆ ಗುಣಮಟ್ಟದ ಕುಡಿಯುವ ನೀರು ಪೂರೈಕೆ ಆಗುವ ಬಗ್ಗೆ, ಅಂಗನವಾಡಿ ಕಟ್ಟಡಗಳು ಶಾಲಾ-ಕಾಲೇಜುಗಳು ಅದೇ ರೀತಿ ಸರ್ಕಾರಿ ಇನ್ನಿತರ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ಇದ್ದರೆ ಅದನ್ನು ಗುರುತಿಸಿ ಆ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು, ಬರೆ ಕುಸಿತ,ನದಿ ತೋಡುಗಳು ತುಂಬಿ ಹರಿಯುವ ಪ್ರದೇಶದಲ್ಲಿ ಜಾಗ್ರತೆ ಕ್ರಮ ಕೈಗೊಳ್ಳುವ ಕುರಿತು, ತಗ್ಗು ಪ್ರದೇಶ,ಗುಡ್ಡದ ಬದಿಯಲ್ಲಿರುವ ಮನೆಯ ಪರಿಶೀಲನೆ ನಡೆಸುವ ಕುರಿತು, ಶಿತಿಲಾವಸ್ಥೆಯಲ್ಲಿರುವ ಸೇತುವೆಗಳ ಗುಣಮಟ್ಟ ಮತ್ತು ರಸ್ತೆಗಳ ಹೊಂಡ ಗುಂಡಿಗಳನ್ನು ಮುಚ್ಚುವುದು,ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ಸರಿಪಡಿಸುವ ಇನ್ನಿತರ ಕಾರ್ಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನು ನೀಡಿದರು.

ಅಲ್ಲದೆ ಈ ಮೇಲ್ಕಂಡ ಸಮಸ್ಯೆಗಳು ಇದ್ದಲ್ಲಿ ಅವುಗಳ ವರದಿಯನ್ನು ಫೋಟೋ ಸಮೇತ ತಾಲೂಕು ಆಡಳಿತ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಿದರು.

ಪ್ರಕೃತಿ ವಿಕೋಪ,ಪ್ರವಾಹದಲ್ಲಿ ಜನ-ಜಾನುವಾರ ಹಾನಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿಯ ಮೊದಲ ಆದ್ಯತೆಯಾಗಬೇಕು ಎಂದರು.
ಅಲ್ಲದೆ ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುವವರು ಅಧಿಕಾರಿಗಳು ಬಂದು ಮಾಹಿತಿ ನೀಡಿದಾಗ ಅಧಿಕಾರಿಗಳೊಂದಿಗೆ ಸಹಕಾರ ನೀಡಬೇಕು ಮತ್ತು ಅವರ ಆದೇಶವನ್ನು ಪಾಲಿಸಬೇಕೆಂದು ಮನವಿ ಮಾಡಿಕೊಂಡರು.
ಯಾವುದೇ ಘಟನೆ ಸಂಭವಿಸಿದ ತಕ್ಷಣ ಸ್ಪಂದಿಸಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಬೇಕು.ನಿಯಂತ್ರಣ ಕೊಠಡಿ ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದರು.
ನದಿ ಪಾತ್ರದಲ್ಲಿ ನಿರಂತರ ನಿಗಾ ಮತ್ತು ಪ್ರವಾಹ ಮುನ್ನೆಚ್ಚರಿಕೆ ವಹಿಸಬೇಕು.ಮಳೆಯ ಮಾಹಿತಿಯನ್ನು ಪ್ರತಿದಿನ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ರಕ್ಷಣಾ ಸಾಮಗ್ರಿ ಬೋಟ್, ಹಗ್ಗ, ಲೈಫ್ ಜಾಕೆಟ್ ಇತ್ಯಾದಿ ಸಾಮಗ್ರಿಗಳನ್ನು ಅಗ್ನಿಶಾಮಕ ಇಲಾಖೆಯವರು ಸುಸಜ್ಜಿತವಾಗಿಟ್ಟುಕೊಳ್ಳಬೇಕು. ಎಂದು ಅದರ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ ಯಾವುದೇ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಯಾವುದೇ ಕಾರಣಕ್ಕೂ ವಿನಾಕಾರಣ ರಜೆ ಮಾಡಿಕೊಂಡು ಸ್ಥಳದಿಂದ ತೆರಳಬಾರದೆಂದು ಖಡಕ್ ಸೂಚನೆ ನೀಡಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಫಾಗಿಂಗ್ ಮಾಡಿಸಬೇಕು.
ಕುಡಿಯುವ ನೀರಿನ ಬಗ್ಗೆ ಸದಾ ಎಚ್ಚರವಿರಬೇಕು’ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ರವರು ಮಾತನಾಡಿ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಆಡಳಿತ ಅಧಿಕಾರಿಗಳು ಟಾಸ್ಫೋರ್ಸಿನ ಕಮಾಂಡರಾಗಿ ಕಾರ್ಯಚರಿಸಲಿದ್ದು ಪಂಚಾಯತ್ ಮಟ್ಟದಲ್ಲಿ ಸಭೆ ಕರೆದು ಆ ಸಭೆಯಲ್ಲಿ ಆದ ವರದಿಯನ್ನು ನೀಡುವಂತೆ ಸೂಚನೆ ನೀಡಿದರು.
ಅಲ್ಲದೆ ಪಂಚಾಯತ್ ಮಟ್ಟದಲ್ಲಿ ಎಷ್ಟು ಗ್ರಾಮಗಳಿವೆ, ಅಪಾಯಕಾರಿ ಸ್ಥಳಗಳ ಬಗ್ಗೆ ಮಾಹಿತಿ, ಗ್ರಾಮದ ಜನಸಂಖ್ಯೆಯ ಬಗ್ಗೆ ಮಾಹಿತಿ, ಗರ್ಭಿಣಿಗಳು ಮತ್ತು ವಿಶೇಷ ಚೇತನರ ಬಗ್ಗೆ ಮಾಹಿತಿ, ಭೂಕುಸಿತ ಉಂಟಾಗುವ ಜಾಗದ ಬಗ್ಗೆ ಮಾಹಿತಿ, ನದಿಗಳು ಮತ್ತು ತೋಡುಗಳ ಸಂಖ್ಯೆ,
ಆ ಪ್ರದೇಶದಲ್ಲಿ ಲಭ್ಯವಿರುವ ಲೈನ್ ಮ್ಯಾನ್ ಗಳು ಅರಣ್ಯ ಅಧಿಕಾರಿಗಳು, ಆಂಬುಲೆನ್ಸ್ ಚಾಲಕರು, ಮೆಸ್ಕಾಂ ಅಧಿಕಾರಿಗಳ ಮಾಹಿತಿ ಸಂಗ್ರಹ, ತುರ್ತು ಸಂದರ್ಭದಲ್ಲಿ ಬಳಸಲು ಕಾಳಜಿ ಕೇಂದ್ರಗಳ ಬಗ್ಗೆ ಮಾಹಿತಿ ಇವೆಲ್ಲವನ್ನೂ ಶೀಘ್ರದಲ್ಲಿ ವರದಿ ಮಾಡಿ ಹಿರಿಯ ಅಧಿಕಾರಿಗಳಿಗೆ ನೀಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಶು ಸಂಗೋಪನಾ ಇಲಾಖೆ ಅಧಿಕಾರಿ, ಪಿಡಬ್ಲ್ಯೂಡಿ ಇಲಾಖಾಧಿಕಾರಿ, ಸುಳ್ಯ ತಾಲೂಕು ಕಂದಾಯ ನಿರೀಕ್ಷಕರು ಮಾತನಾಡಿ ಅವರವರ ಇಲಾಖೆ ವತಿಯಿಂದ ಈಗಾಗಲೇ ಮಾಡಿಕೊಂಡಿರುವ ಪೂರ್ವ ಭಾವಿ ಸಿದ್ಧತೆಯ ಬಗ್ಗೆ ವಿವರವನ್ನು ನೀಡಿದರು.

ಸಭೆಯಲ್ಲಿ ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಹೊರತುಪಡಿಸಿ ಉಳಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖಾಧಿಕಾರಿಗಳು, ಪಿ ಡಿ ಓ ಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಭಾಗವಹಿಸಿದ್ದರು.

ಉಪತಹಶೀಲ್ದಾರ್ ಚಂದ್ರಕಾಂತ್ ಸ್ವಾಗತಿಸಿ ತಹಶೀಲ್ದಾರ್ ಮಂಜುಳ ಎಂ ಧನ್ಯವಾದ ಸಮರ್ಪಿಸಿದರು.