ತಹಶೀಲ್ದಾರ್, ನ.ಪಂ. ಆಡಳಿತಾಧಿಕಾರಿ, ಮೆಸ್ಕಾಂ ಇಂಜಿನಿಯರ್ ರಿಗೆ ದೂರವಾಣಿಯಲ್ಲಿ ತರಾಟೆ
ನಾಳೆಯೇ ಸ್ಥಳ ಭೇಟಿ ಮಾಡಿ, ವಿದ್ಯುತ್ ಕಂಬ ಸ್ಥಳಾಂತರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಖಡಕ್ ಸೂಚನೆ















ಸುಳ್ಯದ ಸರಕಾರಿ ಆಸ್ಪತ್ರೆಯ ಪಕ್ಕದ ರಿಕ್ಷಾ ನಿಲ್ದಾಣದ ಎದುರಿನಿಂದಾಗಿ ಜೂನಿಯರ್ ಕಾಲೇಜು ಸಂಪರ್ಕಿಸುವ ರಸ್ತೆಗೆ ವಿದ್ಯುತ್ ಕಂಬ ಬಳಸಿ ಕಾಂಕ್ರೀಟ್ ಮಾಡಿರುವ ವರದಿ ಪ್ರಸಾರವಾಗುತ್ತಿದ್ದಂತೆ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿ, ನಗರ ಪಂಚಾಯತ್ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಮಂಜುಳಾ, ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜು, ಮೆಸ್ಕಾಂ ಎ.ಇ. ಸುಪ್ರಿತ್ ರಿಗೆ ದೂರವಾಣಿ ಕರೆ ಮಾಡಿ ಕಾಮಗಾರಿ ವಿಚಾರವಾಗಿ ಪ್ರಶ್ನಿಸಿದರಲ್ಲದೆ, ನಾಳೆಯೇ ಸ್ಥಳ ಭೇಟಿ ಮಾಡಿ ವಿದ್ಯುತ್ ಕಂಬ ಶಿಫ್ಟ್ ಮಾಡುವಂತೆ ಖಡಕ್ ಸೂಚನೆ ನೀಡಿರುವ ಘಟನೆ ವರದಿಯಾಗಿದೆ.

ಸಂಜೆ ಶಾಸಕಿ ಭಾಗೀರಥಿ ಮುರುಳ್ಯ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ನ.ಪಂ. ಮಾಜಿ ಅಧ್ಯಕ್ಷರುಗಳಾದ ವಿನಯಕುಮಾರ್ ಕಂದಡ್ಕ, ಶಶಿಕಲಾ ನೀರಬಿದಿರೆ, ಮಾಜಿ ಸದಸ್ಯೆ ಕಿಶೋರಿ ಶೇಟ್, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಗುರುದತ್ ಶೇಟ್ ಮೊದಲಾದವರು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ವೇಳೆ ಶಾಸಕರು ಮೆಸ್ಕಾಂ ಇಂಜಿನಿಯರ್ ಸುಪ್ರೀತ್, ನ.ಪಂ. ಮುಖ್ಯಾಧಿಕಾರಿ ಬಸವರಾಜು, ನಗರ ಪಂಚಾಯತ್ ಆಡಳಿತಾಧಿಕಾರಿ, ತಹಶೀಲ್ದಾರ್ ಮಂಜುಳಾರಿಗೆ ಕರೆ ಮಾಡಿ “ವಿದ್ಯುತ್ ಕಂಬ ಬಳಸಿ ರಸ್ತೆ ಕಾಂಕ್ರೀಟ್ ಮಾಡಿರುವ ಕುರಿತು ಪ್ರಶ್ನಿಸಿದರಲ್ಲದೆ, ಕಾಮಗಾರಿ ಮಾಡುವ ಸಂದರ್ಭ ಯಾಕೆ ಸುಮ್ಮನಿದ್ದಿರಿ. ಪಂಚಾಯತ್ ರಸ್ತೆಯಲ್ಲಿ ಕೆಲಸ ಮಾಡುವಾಗ ಯಾಕೆ ಗೊತ್ತಾಗಿಲ್ಲ. ಸುಮ್ಮನಿದ್ದುದು ಯಾಕೆ ಎಂದು ತರಾಟೆಗೆತ್ತಿಕೊಂಡರಲ್ಲದೆ, ” ನೀವು ಮೂವರು ಕೂಡಾ ನಾಳೆಯೇ ಸ್ಥಳ ಪರಿಶೀಲನೆ ನಡೆಸಬೇಕು. ವಿದ್ಯುತ್ ಕಂಬ ಸ್ಥಳಾಂತರ ಮಾಡಬೇಕು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಮೂವರು ಅಧಿಕಾರಿಗಳು ಕೂಡಾ ಶಾಸಕರ ಮಾತನ್ನು ಒಪ್ಪಿಕೊಂಡರು.
ಈ ವೇಳೆ ಸ್ಥಳೀಯರಾದ ಡಾ.ವಿದ್ಯಾಶಾರದಾ, ರಾಜ, ಮತ್ತಿತರರು ಮೋರಿ ಇತ್ಯಾದಿ ಸಮಸ್ಯೆ ಕುರಿತು ಶಾಸಕರ ಗಮನ ಸೆಳೆದರು.
ಬಳಿಕ ಸ್ಥಳದಲ್ಲಿದ್ದ ಪತ್ರಕರ್ತರ ಜತೆ ಮಾತನಾಡಿದ ಶಾಸಕರು, “ಪಂಚಾಯತ್ ಅನುಮತಿ ಪಡೆಯದೇ ಈ ಕೆಲಸ ಮಾಡಲಾಗಿದೆ. ಈ ರೀತಿ ಮಾಡಿರುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಮೂವರು ಅಧಿಕಾರಿಗಳಿಗೆ ನಾನು ಮಾತನಾಡಿದ್ದು ನಾಳೆ ದಿನ ಅವರು ಮೂವರು ಸ್ಥಳ ಪರಿಶೀಲನೆ ನಡೆಸುತ್ತಾರೆ. ವಿದ್ಯುತ್ ಕಂಬ ಸ್ಥಳಾಂತರಕ್ಕೆ ಸೂಚನೆ ನೀಡಿದ್ದೇನೆ” ಎಂದು ಹೇಳಿದರು. ಇದೇ ರಸ್ತೆಯಲ್ಲಿ ಇನ್ನೂ ಅಭಿವೃದ್ಧಿ ಕಾಮಗಾರಿ ಆಗಬೇಕಾಗಿದ್ದು ಅದಕ್ಕೆ ಅನುದಾನ ಇಡಲಾಗಿದೆ. ಕಾಮಗಾರಿ ಶೀಘ್ರ ಮಾಡಲು ಹೇಳಿದ್ದೇನೆ” ಎಂದು ತಿಳಿಸಿದರು.







