ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹ
ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದರ ವಿರುದ್ಧ ಆಕ್ಷೇಪಣೆ ಸಲ್ಲಿಸುವ ಸಲುವಾಗಿ ಆ.25 ರಂದು ಗ್ರಾಮಸ್ಥರ ವಿಶೇಷ ಸಭೆಯು ಚೆಂಬು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.














ಗ್ರಾಮಸ್ಥರೇ ಈ ಸಭೆಯನ್ನು ಆಯೋಜನೆ ಮಾಡಿದ್ದು ಸಭೆಯ ಅಧ್ಯಕ್ಷತೆಯನ್ನು ಸಂಪಾಜೆ ಪ್ರಾಮಿಕ ಕೃಷಿ ಪತ್ತಿನ ಅಧ್ಯಕ್ಷ ಎನ್.ಸಿ ಅನಂತ ವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಎನ್.ಸಿ. ಅನಂತರು “ಡಾ.ಕಸ್ತೂರಿ ರಂಗನ್ ವರದಿ ಆಧಾರದಲ್ಲಿ ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸುವ ಶಿಫಾರಸ್ಸು ಅವೈಜ್ಞಾನಿಕವಾಗಿದೆ. ವಾಸ್ತವಾಂಶಗಳನ್ನು ಅಧ್ಯಯನ ಮಾಡಿರದ ಈ ವರದಿಯನ್ನು ಈಗಿರುವ ಪ್ರಸ್ತುತ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾಗುವುದಿಲ್ಲ.
ನಮ್ಮ ಗ್ರಾಮವನ್ನು ಹಾಗೂ ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಬೇಕಾದ ಕರ್ತವ್ಯ ನಮ್ಮಲ್ಲಿದೆ. ಸುಪ್ರೀಂ ಕೋರ್ಟ್ ಹಸಿರು ಪೀಠದಲ್ಲಿರುವ ಯೋಜನೆಯ ಸಾಧಕ – ಬಾಧಕ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ ಪತ್ರ ಸಲ್ಲಿಸಲು ಮುಂದಿನ 30 ದಿನಗಳ ಅವಧಿ ನೀಡಿದೆ. ಇದರ ಪ್ರಕಾರ ಗ್ರಾಮಸ್ಥರೆಲ್ಲರೂ , ಗ್ರಾಮ ಪಂಚಾಯತ್ ಮುಖಾಂತರ ಅಲ್ಲದೇ ವೈಯಕ್ತಿಕವಾಗಿ ಕೂಡಾ ತಮ್ಮ ವಿರೋಧವನ್ನು ಬರಹ ಮೂಲಕ ಕೇಂದ್ರ ಸರಕಾರ ಸೂಚಿಸಿದ ಅವಧಿಯ ಒಳಗೆ ರವಾನಿಸಬಹುದು. ನಮ್ಮ ಆಕ್ಷೇಪಣೆಗಳನ್ನು ಕಂದಾಯ ಇಲಾಖೆಯ ಮುಖಾಂತರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ , ಕೇಂದ್ರ ಸರಕಾರಕ್ಕೆ ಮನವಿಯನ್ನು ಕಳುಹಿಸಿದ್ದೇವೆ” ಎಂದರು.

ಚೆಂಬು ಗ್ರಾಮಸ್ಥರ ಆಕ್ಷೇಪಣೆ ಪ್ರಕಾರ ಡಾ. ಕಸ್ತೂರಿ ರಂಗನ್ ಸಮಿತಿಯು ನೀಡಿದ ವರದಿಯು ಸಂಪೂರ್ಣವಾಗಿ ಉಪಗ್ರಹ ಆಧಾರಿತವಾಗಿದ್ದು, ಸಮಿತಿ ಸದಸ್ಯರು ಖುದ್ದಾಗಿ ಯಾವುದೇ ಪ್ರಸ್ತಾವಿತ ಪ್ರದೇಶಕ್ಕೆ ಭೇಟಿ ನೀಡದೆ ಇಲ್ಲಿನ ವಾಸ್ತವ ಪರಿಸ್ಥಿತಿಯ ಅಧ್ಯಯನ ಹಾಗೂ ಪರಿಶೀಲನೆ ಮಾಡದೆ ತಯಾರಿಸಿದ ಅವೈಜ್ಞಾನಿಕ ವರದಿಯಾಗಿರುತ್ತದೆ. ಚೆಂಬು ಗ್ರಾಮದ ಭಾಗದಲ್ಲಿ ನಮ್ಮ ಗ್ರಾಮದ ಗಡಿ , ಮೀಸಲು ಅರಣ್ಯದ ಗಡಿ ಮತ್ತು ಕಂದಾಯ ಭೂಮಿಯ ಗಡಿಗಳನ್ನು ಅರಣ್ಯ ಇಲಾಖೆ ಏಕಪಕ್ಷೀಯವಾಗಿ ನಿಧರಿಸಿರುವುದನ್ನು ಕೈ ಬಿಟ್ಟು , ವಾಸ್ತವ ಆಧಾರದ ಮೇಲೆ ಕಂದಾಯ ಇಲಾಖೆ, ಅರಣ್ಯ ಇಲಾಖೆ , ಸ್ಥಳೀಯ ಜನಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ನಿವಾಸಿಗಳ ಸಮಿತಿಯ ಜಂಟಿ ಸಹಯೋಗದಲ್ಲಿ , ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು , ಚೈನ್ ಮೂಲಕವೇ ಅಳತೆ / ಸರ್ವೇ ಮಾಡಿ ನಿಖರವಾದ ಗಡಿ ಗುರುತು ಮಾಡಬೇಕಿದೆ. ನಮ್ಮ ಭಾಗದಲ್ಲಿ ಸಾಮಾನ್ಯವಾಗಿ ಬಯಲು ಸೀಮೆಯಲ್ಲಿರುವ ಗುಂಪುಗಳಿಗಿಂತ ಭಿನ್ನವಾಗಿ, ಗ್ರಾಮಾದ್ಯಂತ ವಾಸದ ಮನೆಗಳು ಚದುರಿ ಹೋಗಿರುವುದರಿಂದ ಮತ್ತು ಕಂದಾಯ ಇಲಾಖೆಯಿಂದ ಹಕ್ಕುಪತ್ರ ಪಡೆದ ಸಾಗುವಳಿ ಮಾಡುತ್ತಿರುವ ಭೂಮಿ ಮತ್ತು ಅದರ ಒಳಗೆ ಇರುವ ವಾಸದ ಮನೆಗಳು ಇರುವ ಪ್ರದೇಶವನ್ನು ” ಜನವಸತಿ ಪ್ರದೇಶ ” ಮತ್ತು ” ಕೃಷಿ ಭೂಮಿ ಪ್ರದೇಶ” ಎಂದು ಪರಿಗಣಿಸಿ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯದಿಂದ ಹೊರಗಿಡಬೇಕು . ನಮ್ಮ ಗ್ರಾಮಗಳ ಭೂಮಿ ಮತ್ತು ಜನಜೀವನಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಚಟುವಟಿಕೆಗಳು ಈಗ ಅಸ್ತಿತ್ವದಲ್ಲಿರುವಂತೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿಯ ಸುಪರ್ದಿಯಲ್ಲೇ ಇರಬೇಕು. ಮಾತ್ರವಲ್ಲ ಗ್ರಾಮದೊಳಗೆ ಅರಣ್ಯ ಇಲಾಖೆಯಿಂದ ಯಾವುದೇ ತೆರವಾದ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು , ಒಂದು ಜನವಸತಿ ಪ್ರದೇಶಕ್ಕೆ ಅನ್ವಯಿಸುವ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ, ಕೃಷಿಕರು ತಮ್ಮ ಭೂಮಿಯಿಂದ ಮತ್ತು ಅರಣ್ಯ ಮೂಲದಿಂದ ಅನುಭವಿಸಿಕೊಂಡು ಬರುತ್ತಿರುವ ಕುಡಿಯುವ ನೀರು, ಕೃಷಿಗೆ ಬಳಸುವ ನೀರಿನ ಮೂಲಗಳಿಗೆ , ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸೌಲಭ್ಯ, ಸೇತುವೆಗಳನ್ನು ಯಥಾಸ್ಥಿತಿ ಉಳಿಸಿಕೊಳ್ಳುವ ಮತ್ತು ಅಭಿವೃದ್ಧಿಪಡಿಸಿಕೊಳ್ಳುವ ಮತ್ತು ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅವಕಾಶಗಳಿಗೆ ಯಾವುದೇ ತೆರನಾದ ನಿರ್ಬಂಧವನ್ನು ಹೇರುವಂತಿರಬಾರದು. ಚೆಂಬು ಗ್ರಾಮದಲ್ಲಿ ಈಗಾಗಲೇ ಮಾನವ , ವನ್ಯಜೀವಿ ಸಂಘರ್ಷ ಅತಿರೇಕಕ್ಕೆ ತಲುಪಿದ್ದು , ರೈತರ ಜೀವಹಾನಿ ಮತ್ತು ಕೃಷಿ ಹಾನಿ ನಿರಂತರವಾಗಿ ನಡೆಯುತ್ತಿದೆ. ಮುಂದೆ ಗ್ರಾಮದಲ್ಲಿ ವನ್ಯ ಪ್ರಾಣಿಗಳ ಉಪಟಳದಿಂದ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಬಹುದು. ಕಸ್ತೂರಿರಂಗನ್ ವರದಿಯಲ್ಲಿ ವನ್ಯ ಪ್ರಾಣಿಗಳ ತಡೆಗೆ ಯಾವುದೇ ಮಾರ್ಗಸೂಚಿ ಮತ್ತು ಕಾರ್ಯಯೋಜನೆಗಳು ಕಂಡು ಬರುವುದಿಲ್ಲ. ಈಗಾಗಲೇ ಪ್ರಸ್ತಾವಿತಗೊಂಡoತೆ 59 ಲಕ್ಷ ಚ. ಕಿ.ಮೀ.ಗಿಂತಲೂ ಅಧಿಕ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಪರಿವರ್ತನೆ ಮಾಡುವುದರ ಜೊತೆಯಲ್ಲಿ ಸರಿಸುಮಾರು ಅದರ ಅರ್ಧದಷ್ಟು ಪ್ರದೇಶದಲ್ಲಿ ಮತ್ತೆ ಬಫರ್ ಝೋನ್ ಹೆಸರಿನಲ್ಲಿ ನಿರ್ಬಂಧ ಹೇರುವ ಪ್ರಯತ್ನ ದುರುದ್ದೇಶ ಪೂರಿತವಾಗಿದ್ದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ . ಆದುದರಿಂದ ಸದ್ರಿ ಈ ಬಫರ್ ಝೋನ್ ಪ್ರಸ್ತಾವನೆಯನ್ನೇ ಕೈ ಬಿಡಬೇಕು ಎಂದು ಕಸ್ತೂರಿ ರಂಗನ್ ವರದಿಗೆ ಗ್ರಾಮಸ್ಥರೆಲ್ಲರೂ ಸರ್ವಾನುಮತದಿಂದ ಸಹಿ ಹಾಕಿ ಆಕ್ಷೇಪಣೆ ಸಲ್ಲಿಸಬೇಕು” ಎಂದರು.

ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಅರೆಭಾಷೆ ಅಕಾಡೆಮಿ ಸದಸ್ಯ ಲೋಕೇಶ್ ಊರುಬೈಲುಯವರು ಮಾತನಾಡಿ ” ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿದರೆ ನಮ್ಮ ಚೆಂಬು ಗ್ರಾಮವೂ ಸೇರಿದಂತೆ ಪಶ್ಚಿಮ ಘಟ್ಟ ನಿವಾಸಿಗಳ ಎಲ್ಲಾ ಕೃಷಿ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಉದ್ಯೋಗದ ಭರವಸೆ ನೀಡುವ ಕುರಿತು ಸರಕಾರ ಯೋಜನೆ ರೂಪಿಸಿಕೊಂಡು ಸರಕಾರವೇ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಹಿರಿಯರಿಗೆ ಮತ್ತು ಆರೋಗ್ಯ ಸಮಸ್ಯೆ ಇರುವವರಿಗೆ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ, ಚಿಕಿತ್ಸೆ , ಹಾಗೂ ವಿಮಾ ಯೋಜನೆ ಹಾಗೂ ಬ್ಯಾಂಕ್ ಹಾಗೂ ಸಹಕಾರಿ ಕ್ಷೇತ್ರದಿಂದ ಲಭಿಸುವ ರೈತರಿಗೆ ಲಭಿಸುವ ಯೋಜನೆಗಳು ದಾಖಲೆ ರಹಿತ ನೇರವಾಗಿ ಮಾಡುವಂತಾಗಬೇಕಾಗುತ್ತದೆ. ಪರಿಸರ ಟೂರಿಸಂ ಹೆಸರಿನಲ್ಲಿ ಅನಧಿಕೃತ ರೆಸಾರ್ಟ್ , ಹೋಂ ಸ್ಟೇ ಗಳಿಗೆ ಕಡಿವಾಣ ಹಾಕಬೇಕು. ಖಾಸಗಿ ಎಸ್ಟೇಟ್ ಗಳು / ಸಂಸ್ಥೆಗಳು ಸಾವಿರಾರು ಎಕರೆ ಪರಿಸರವನ್ನು ನಾಶ ಪಡಿಸಿ, ವಾಣಿಜ್ಯ ಉದ್ದೇಶ ನಡೆಸುತ್ತಿದ್ದು , ಇಂತಹ ಸರ್ಕಾರಿ ಜಾಗಗಳನ್ನು ಸರ್ಕಾರ ಸ್ವಾದೀನ ತೆಗೆದುಕೊಂಡು ಅರಣ್ಯ ಎಂದು ಘೋಷಿಸಿ, ಹೊಸ ಪರಿಸರ ವ್ಯವಸ್ಥೆ ನಿರ್ಮಾಣ ಮಾಡಬೇಕು. ಇದರಿಂದ ವನ್ಯಪ್ರಾಣಿಗಳು ಆಹಾರ ಇಲ್ಲದ್ದರಿಂದ ನಾಡಿಗೆ ಬಂದು ಕೃಷಿಯನ್ನು ನಾಶಮಾಡುವ ಪ್ರಮೇಯ ತಪ್ಪುತ್ತದೆ. ಸರಕಾರ ಅರಣ್ಯ ಇಲಾಖೆಯ ಮೂಲಕ ಅರಣ್ಯಗಳಲ್ಲಿ ಹೆಚ್ಚು ಹಣ್ಣಿನ ಗಿಡ ನೆಟ್ಟು, ವನ್ಯ ಪ್ರಾಣಿಗಳನ್ನು ಹಾಗೂ ಪರಿಸರವನ್ನು ಉಳಿಸುವ ಬಗ್ಗೆ ವರದಿಯಲ್ಲಿ ಸೇರಿಸಬೇಕು” ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಶೇಷಪ್ಪ ಚೌಟಾಜೆ ಮಾತನಾಡಿ ” ನಮಗೆ ಪ್ರಜಾಪ್ರಭುತ್ವ ಇರುವ ತನಕ ಕಸ್ತೂರಿ ರಂಗನ್ ಜಾರಿಗೆ ಬರುವುದನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಕಾರ್ಯ ಆಗಬೇಕಿದೆ. ಕೊಡಗು ಮೈಸೂರು ವ್ಯಾಪ್ತಿಯ ಲೋಕಸಭಾ ಸದಸ್ಯರುಗಳ ಮೂಲಕ ಸರಕಾರಕ್ಕೆ ಮನವಿ ನೀಡಿ ಗಂಭೀರ ಚರ್ಚೆಯನ್ನು ಮಾಡಬೇಕಿದೆ” ಎಂದರು.
ಕೃಷಿಕರಾದ ವಾಸುದೇವ ನಿಡಿಂಜಿ ಮಾತನಾಡಿ ” ಕಸ್ತೂರಿ ರಂಗನ್ ವರದಿ ಜಾರಿಯಿಂದ ಜನರು ಕಷ್ಟಗಳನ್ನು ಅನುಭವಿಸುತ್ತಾರೆ. ಇದರಿಂದ ಕೇಂದ್ರ ಸರಕಾರಕ್ಕೆ ಗ್ರಾಮಸ್ಥರ ಅಳಲು ತಟ್ಟಿ, ಸಂಪೂರ್ಣವಾಗಿ ನಿಷೇಧ ಮಾಡುವ ಕುರಿತು ನತಾಜ್ ನಿರ್ಧಾರ ಕೈಗೊಳ್ಳಬೇಕು” ಎಂದರು. ಹಿರಿಯರಾದ ಬಂಗಾರಕೋಡಿ ವೆಂಕಟ್ರಮಣ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಮಾಧವ ಪೊಯ್ಯೆಮಜಲು , ತೀರ್ಥರಾಮ ಪೂಜಾರಿಗದ್ದೆ , ಕರುಣಾಕರ ನಿಡಿಂಜಿ ವೇದಿಕೆಯಲ್ಲಿದ್ದರು.
ಮಾತನಾಡಿದ ಎಲ್ಲರೂ ” ಕಸ್ತೂರಿರಂಗನ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲೇ ಬಾರದು” ಎಂದು ಹಕ್ಕೊತ್ತಾಯ ಮಂಡಿಸಿದರು.
ಗ್ರಾಮದ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಶ್ರೀನಿವಾಸ ನಿಡಿಂಜಿ ಸ್ವಾಗತಿಸಿ , ರಮೇಶ್ ನಂಬಿಯಾರ್ ವಂದಿಸಿದರು.







