ವಿನಯ್ ಹೇಳಿಕೆಗೆ ಕೋಮುಬಣ್ಣ ಹಚ್ಚುವುದು ಹಾಸ್ಯಾಸ್ಪದ : ಬಿ.ಜೆ.ಪಿ.

0

” ಸುಳ್ಯ ತಾಲೂಕು ಮಿಲಾದ್ ಸಮಿತಿಯವರು ಪತ್ರಿಕಾಗೋಷ್ಟಿ ನಡೆಸಿ ಮಿಲಾದ್ ರ್ಯಾಲಿಯ ವೇಳೆ ಆದ ಟ್ರಾಫಿಕ್ ಜಾಮ್ ಕುರಿತು ವಿನಯ್ ಕಂದಡ್ಕರವರು ನೀಡಿದ್ದ ಹೇಳಿಕೆಗೆ ಕೋಮುಬಣ್ಣ ಹಚ್ಚುವುದು ಹಾಸ್ಯಾಸ್ಪದ” ಎಂದು ಬಿ.ಜೆ.ಪಿ. ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ ಹೇಳಿಕೆ ನೀಡಿದ್ದಾರೆ.

” ಮೊನ್ನೆಯ ದಿನ ಸಂಜೆ 4:00 ರಿಂದ 7 ರ ವರೆಗೆ ನಗರದ ಟ್ರಾಫಿಕ್ ವ್ಯವಸ್ಥೆ ಹದಗೆಟ್ಟಿದ್ದುದು ಸತ್ಯಸಂಗತಿಯಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಸಂಕಷ್ಟವಾಗಿತ್ತು. ವಿನಯ್ ಕುಮಾರ್ ಕಂದಡ್ಕರವರು ಪತ್ರಿಕಾ ಹೇಳಿಕೆಯಲ್ಲಿ ಟ್ರಾಫಿಕ್ ನಿರ್ವಹಣೆಯಲ್ಲಿ ಆಗಿರುವ ಲೋಪವನ್ನು ಎತ್ತಿ ಹಿಡಿದಿದ್ದಾರೆ. ಸುಳ್ಯ ಠಾಣಾ ಉಪ ನಿರೀಕ್ಷಕರು ಕೂಡಾ ಸಂಚಾರ ವ್ಯವಸ್ಥೆಯಲ್ಲಿ ಕೊರತೆಯಾಗಿರುವುದನ್ನು ಸ್ವತಃ ಒಪ್ಪಿಕೊಂಡಿರುತ್ತಾರೆ. ಆದರೆ ಮಿಲಾದ್ ಸಮಿತಿಯವರು ಸಾರ್ವಜನಿಕರಿಗೆ ಆದ ತೊಂದರೆಗೆ ಕನಿಷ್ಠ ವಿಷಾದವನ್ನು ಕೂಡಾ ವ್ಯಕ್ತಪಡಿಸದೆ ಇಡೀ ಘಟನೆಯನ್ನು ಕೋಮು ಸೌಹಾರ್ದತೆ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿರುವುದು ವಿಷಾದನೀಯ” ಎಂದಿರುವ ಸುಭೋದ್ ಶೆಟ್ಟಿಯವರು, ” ಮಿಲಾದ್ ಸಮಿತಿಯವರು ತಾವು ಸೌಹಾರ್ದತೆಯ ಪ್ರತಿಪಾದಕರಂತೆ ಬಿಂಬಿಸಿಕೊಂಡು, ವಿನಯ್ ಕುಮಾರ್ ಕಂದಡ್ಕ ಅವರ ಹೇಳಿಕೆಗೆ ಕೋಮು ಬಣ್ಣ ಹಚ್ಚುತ್ತಿರುವುದು ಹಾಸ್ಯಾಸ್ಪದ ” ಎಂದಿದ್ದಾರೆ.