ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ‘ಎನ್.ಎಸ್.ಎಸ್. ದಿನಾಚರಣೆ’ ಹಾಗೂ ಸ್ವಚ್ಛತಾ ಕಾರ್ಯಕ್ರಮ

0

ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇದರ ಎನ್.ಎಸ್.ಎಸ್ ಘಟಕದ ವತಿಯಿಂದ ಸೆ. 26ರಂದು ಕಾಲೇಜು ಆವರಣದಲ್ಲಿ ‘ಎನ್.ಎಸ್.ಎಸ್. ದಿನಾಚರಣೆ’ಯನ್ನು ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ಎನ್.ಎಸ್.ಎಸ್. ಧ್ವಜಾರೋಹಣ ನೆರವೇರಿಸಿ, ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಾಜಸೇವೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಎನ್.ಎಸ್.ಎಸ್ ಪ್ರಮುಖ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.
ಎನ್.ಎಸ್.ಎಸ್ ಘಟಕಾಧಿಕಾರಿ ಚಿತ್ರಲೇಖ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಎನ್.ಎಸ್.ಎಸ್ ದಿನಾಚರಣೆಯ ಉದ್ದೇಶ ಹಾಗೂ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಬಳಿಕ ಎನ್.ಎಸ್.ಎಸ್ ಸ್ವಯಂಸೇವಕರು ಶ್ರಮದಾನದ ಮೂಲಕ ಕಾಲೇಜು ಆವರಣ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಸ್ವಚ್ಛತೆಯ ಮೂಲಕ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವನ್ನು ದಿಶಾ, ದ್ವಿತೀಯ ಬಿಕಾಂ ನಿರೂಪಿಸಿದರು. ವೇದಿಕೆಯಲ್ಲಿ ಎನ್.ಎಸ್.ಎಸ್ ನಾಯಕರಾದ ಹಿತಾಶ್ರೀ, ದ್ವಿತೀಯ ಬಿಕಾಂ, ಕ್ಷಮಾ, ದ್ವಿತೀಯ ಬಿಬಿಎ, ಅಭಿಜಿತ್, ದ್ವಿತೀಯ ಬಿಕಾಂ, ದೀಕ್ಷಿತ್, ದ್ವಿತೀಯ ಬಿಎ, ದಿವಿನ್ ದ್ವಿತೀಯ ಬಿಎ ಹಾಗೂ ಸಚಿತ್ರ, ದ್ವಿತೀಯ ಬಿಕಾಂ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಘಟಕಾಧಿಕಾರಿ ಹರಿಪ್ರಸಾದ್ ಅತ್ಯಾಡಿ ವಂದಿಸಿದರು.