ಅ.8ರಂದು ಕಸ್ತೂರಿರಂಗನ್ ವರದಿ ವಿರುದ್ಧ ಸುಳ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ

0

2 ಸಾವಿರಕ್ಕೂ ಹೆಚ್ಚು ಜನರು ಭಾಗಿ : ಪದಾಧಿಕಾರಿಗಳ ಪತ್ರಿಕಾಗೋಷ್ಠಿ

ಕಸ್ತೂರಿರಂಗನ್ ವರದಿ ಅನುಷ್ಠಾನ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯು ಅ.8ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ತಿಳಿಸಿದೆ.

ಅ‌.6ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಾತನಾಡಿದ ವೇದಿಕೆ ಸದಸ್ಯರಾದ ಅಶೋಕ್ ಪೀಚೆಯವರು ಕಸ್ತೂರಿ ರಂಗನ್ ವರದಿ ಅನುಷ್ಠಾನ ದಿಂದ ಈ ಭಾಗದ 16 ಗ್ರಾಮದ ಜನರು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ. ಇದು ಬದುಕು ಉಳಿಸುವ ಪ್ರಶ್ನೆಯಾಗಿದೆ. ಪಕ್ಷಾತೀತವಾಗಿ, ಧರ್ಮಾತೀತವಾಗಿ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಬಳಿಕ ಶಾಸಕರ ಮೂಲಕ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿ ಅದನ್ನು ಸರಕಾರಕ್ಕೆ ತಲುಪಿಸಲಾಗುವುದು ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು, ಯಾವುದೇ ರೀತಿಯ ಸೂಕ್ಷ್ಮ ವಲಯ ಘೋಷಣೆಯಲ್ಲಿ ನಮ್ಮ ಗ್ರಾಮಗಳ ಹೆಸರನ್ನು ಕೈಬಿಡಬೇಕು. ಪಶ್ಚಿಮ ಘಟ್ಟಕ್ಕೂ, ಜನವಸತಿ ಪ್ರದೇಶಕ್ಕೂ ಗಡಿಗುರುತು ಮಾಡಿ ಶೂನ್ಯ ಬಫರ್ ಜೋನ್ ಘೋಷಣೆ ಮಾಡಬೇಕು. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಆ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಬೇಕು. ಕೃಷಿ ನಾಶ ಮಾಡುವ ಪ್ರಾಣಿಗಳನ್ನು ಪಶ್ಚಿಮ ಘಟ್ಟದ ಕಾಡಿಗೆ ಬಿಡಬೇಕು ಎಂಬಿತ್ಯಾದಿ ನಮ್ಮ ಬೇಡಿಕೆಗಳಿವೆ ಎಂದವರು ವಿವರವಾಗಿ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಯರಾಮ ನಾರ್ಕೋಡು, ಸತೀಶ್ಚಂದ್ರ ಪಟ್ರಕೋಡಿ, ಭುವನೇಂದ್ರದಾಸ್ ಉಬರಡ್ಕ ಉಪಸ್ಥಿತರಿದ್ದರು.